ಉಡುಪಿ ಜಿಲ್ಲೆಯ 10,000 ಜಮೀನುಗಳ ಪೋಡಿ ಗುರಿ: ಸಚಿವ ಕೃಷ್ಣಭೈರೇಗೌಡ

KannadaprabhaNewsNetwork |  
Published : Jul 31, 2025, 01:03 AM ISTUpdated : Jul 31, 2025, 01:11 PM IST
ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ  | Kannada Prabha

ಸಾರಾಂಶ

ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ನಡೆಯಿತು. ಸಬೆಯಲ್ಲಿ ಕಂದಾಯ ಸಚಿವ ಕೃಷ್ಣಭೈರೇಗೌಡ ಉಡುಪಿ ಜಿಲ್ಲೆಯಲ್ಲಿ 10,000 ಜಮೀನುಗಳ ದರ್ಖಾಸ್ತು ಪೋಡಿ ಪೂರ್ಣಗೊಳಿಸಬೇಕು ಎಂದು ಗುರಿ ನೀಡಿದ್ದಾರೆ.

 ಉಡುಪಿ  : ಈ ಮಳೆಗಾಲದೊಳಗೆ ಉಡುಪಿ ಜಿಲ್ಲೆಯಲ್ಲಿ 10,000 ಜಮೀನುಗಳ ದರ್ಖಾಸ್ತು ಪೋಡಿ ಪೂರ್ಣಗೊಳಿಸಬೇಕು ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಉಡುಪಿ ಜಿಲ್ಲಾಡಳಿತಕ್ಕೆ ಗುರಿ ನೀಡಿದ್ದಾರೆ.

ಅವರು ಬುಧವಾರ ಇಲ್ಲಿನ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಸುಮಾರು 60 ವರ್ಷಗಳ ಹಿಂದೆ ಮಂಜೂರಾಗಿರುವ ಜಮೀನುಗಳ ಪೋಡಿ ಆಗಿರಲಿಲ್ಲ. ಕಳೆದ 6 ವರ್ಷಗಳಲ್ಲಿ ಕೇವಲ 6 ಸಾವಿರ ಜಮೀನುಗಳ ಪೋಡಿ ಆಗಿತ್ತು, ಇದೀಗ ಪೋಡಿ ಅಭಿಯಾನದ ರೂಪದಲ್ಲಿ ರೈತರ ಮನೆ ಬಾಗಿಲಿಗೆ ಅವರ ಜಮೀನಿನ ಪಕ್ಕಾ ನಕ್ಷೆ, ದಾಖಲೆಗಳನ್ನು ನೀಡಲಾಗುತ್ತಿದೆ. 7 ತಿಂಗಳಲ್ಲಿ 1,11,750 ಜಮೀನುಗಳ ಪೋಡಿ ಪೂರ್ಣವಾಗಿದೆ. ಉಡುಪಿ ಜಿಲ್ಲೆಯಲ್ಲಿ 3500 ಜಮೀನುಗಳ ಪೋಡಿ ಆಗಿದೆ. 3 ತಿಂಗಳಲ್ಲಿ 10 ಸಾವಿರ ಜಮೀನುಗಳ ಪೋಡಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.ರಾಜ್ಯದ ತಹಸೀಲ್ದಾರ್ ಕಚೇರಿಗಳಲ್ಲಿ ವರ್ಷಾನುಗಟ್ಟಲೇ ಬಾಕಿ ಉಳಿದಿದ್ದ 10,774 ಕಡತಗಳ ವಿಲೇವಾರಿ ನಡೆಸಲಾಗುತ್ತಿದೆ. ಅವುಗಳಲ್ಲಿ 10,200 ಕಡತಗಳು ವಿಲೇವಾರಿಯಾಗಿದ್ದು, ಜೂನ್ ಅಂತ್ಯಕ್ಕೆ ಕೇವಲ 457 ಕಡತಗಳು ಮಾತ್ರ ಬಾಕಿ ಇವೆ. ಎಸಿ ಕಚೇರಿಗಳಲ್ಲಿ 62,852 ಕಡತಗಳು ಬಾಕಿ ಇದ್ದವು, ಅವುಗಳಲ್ಲಿ 44,220 ಕಡತಗಳನ್ನು ವಿಲೇವಾರಿ ಮಾಡಲಾಗಿದ್ದು, 18,630 ಕಡಗಳು ಮಾತ್ರ ಬಾಕಿ ಇವೆ ಎಂದು ಸಚಿವರು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಜಿ.ಪಂ. ಸಿಇಒ ಪ್ರತೀಕ್ ಬಾಯಲ್, ಡಿಎಫ್ಓ ಕೆ.ಗಣಪತಿ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಉಪಸ್ಥಿತರಿದ್ದರು. 

ಜನರ ಬೆರಳತುದಿಯಲ್ಲಿ ಭೂದಾಖಲೆ ಲಭ್ಯ

ಭೂಸರಕ್ಷಾ ಯೋಜನೆಯಡಿ ಕಂದಾಯ ಇಲಾಖೆಯ ಎಲ್ಲಾ ಭೂದಾಖಲೆಗಳನ್ನು ಸಂರಕ್ಷಿಸುವ, ನಕಲಿ ದಾಖಲೆಗಳನ್ನು ತಡೆಯುವ ಉದ್ದೇಶದಿಂದ ಡಿಜಿಟಲೀಕರಣ ಮಾಡಲಾಗುತ್ತಿದೆ, ಸುಮಾರು 100 ಕೋಟಿ ಪುಟಗಳು ಡಿಜಿಟಲೀಕರಣಗೊಳ್ಳಬೇಕಾಗಿವೆ. ಈಗಾಗಲೇ 34,29,000 ಪುಟಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಅಲ್ಲದೇ ಇನ್ನು ಮುಂದೆ ಜನರಿಗೆ ಬೆರಳ ತುದಿಯಲ್ಲಿ ಈ ಪ್ರಮಾಣೀಕೃತ ದಾಖಲೆಗಳು ಆನ್ ಲೈನ್ ಮೂಲಕ ಲಭ್ಯವಾಗಲಿವೆ, ಜನರ ಅನಗತ್ಯವಾಗಿ ಕಂದಾಯ ಕಚೇರಿಗಳಿಗೆ ಅಲೆದಾಟಬೇಕಾಗಿಲ್ಲ ಎಂದು ಕಂದಾಯ ಸಚಿವರು ಹೇಳಿದರು.

PREV
Read more Articles on

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ