ಈ ಭಾಗದ ಬಹುತೇಕ ಕೃಷಿಗೆ, ಜಾನುವಾರುಗಳಿಗೆ ಜೀವನದಿಯಾದಂತಹ ತಟ್ಟಿಹಳ್ಳವು ಮಲೀನವಾಗುತ್ತಿದೆ.
ಓರವಿಲ್ ಫರ್ನಾಂಡೀಸ್
ಹಳಿಯಾಳ: ತಾಲೂಕಿನ ಕೆಸರೊಳ್ಳಿ ಗ್ರಾಮದ ಬಳಿಯಿರುವ ಸೇತುವೆಯ ಕೆಳಗೆ ಪರಿಸರಕ್ಕೆ ಮಾರಕವಾಗಿರುವ ತ್ಯಾಜ್ಯವನ್ನು ಎಸೆದಿದ್ದು, ಪ್ಲಾಸ್ಟಿಕ್ ತಿಪ್ಪೆಯಾಗಿ ನಿರ್ಮಾಣವಾಗಿದ್ದು, ಇಲ್ಲಿ ಹರಿಯುವ ತಟ್ಟಿಹಳ್ಳವು ಮಲೀನವಾಗುವ ಆತಂಕ ಕಾಡುತ್ತಿದೆ.ಈ ಭಾಗದ ಬಹುತೇಕ ಕೃಷಿಗೆ, ಜಾನುವಾರುಗಳಿಗೆ ಜೀವನದಿಯಾದಂತಹ ತಟ್ಟಿಹಳ್ಳವು ಮಲೀನವಾಗುತ್ತಿದೆ. ತಾಲೂಕಾಡಳಿತ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ಸಂಬಂಧಿತ ಇಲಾಖೆಗಳು ತಕ್ಷಣ ತಟ್ಟಿಹಳ್ಳದ ಪಾತ್ರದಲ್ಲಿ ನಿರ್ಮಾಣಗೊಂಡಿರುವ ಪ್ಲಾಸ್ಟಿಕ್ ತಿಪ್ಪೆಯನ್ನು ತೆರವುಗೊಳಿಸಿ ತಟ್ಟಿಹಳ್ಳ ಮಲೀನವಾಗುವುದನ್ನು ತಪ್ಪಿಸಬೇಕೆಂಬುದು ಪರಿಸರಪ್ರೇಮಿಗಳ ಆಗ್ರಹವಾಗಿದೆ.ಹೋಟೆಲ್‌ಗಳ ತ್ಯಾಜ್ಯ: ಕೆಸರೊಳ್ಳಿ ನಾಕೆಯ ಬಳಿಯಿರುವ ಹೊಟೇಲಿನವರು ಬಳಸಿದ ಪ್ಲಾಸ್ಟಿಕ್ ಲೋಟಾ, ಬಾಟಲಿ, ತಟ್ಟೆ, ಇತರ ಪೊಟ್ಟಣಗಳನ್ನು ಸೇತುವೆಯ ಕೆಳಗೆ ಬಿಸಾಕಿದ್ದು, ತಟ್ಟಿಹಳ್ಳದ ಪಾತ್ರದಲ್ಲಿ ಎಲ್ಲಿ ನೋಡಿದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವೇ ರಾರಾಜಿಸುತ್ತದೆ. ಗ್ರಾಪಂಗಳಲ್ಲಿ ಘನತ್ಯಾಜ್ಯ ವಿಲೇವಾರಿಗೆ ವಾಹನದ ವ್ಯವಸ್ಥೆ ಮಾಡಿದ್ದರೂ ತಟ್ಟಿಹಳ್ಳದ ಪಾತ್ರದಲ್ಲಿರುವ ಹೋಟೆಲ್ ಹಾಗೂ ಇತರ ವ್ಯಾಪಾರಸ್ಥರು ತ್ಯಾಜ್ಯವನ್ನು ಗ್ರಾಪಂ ವಾಹನಗಳಿಗೆ ನೀಡದೇ, ಸಮೀಪದ ಸೇತುವೆ ಬಳಿ ಎಲ್ಲೆಂದರಲ್ಲಿ ಬಿಸಾಕುತ್ತಿದ್ದಾರೆಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆದೊಡ್ಡ ತಟ್ಟಿಹಳ್ಳ: ತಟ್ಟಿಹಳ್ಳವು ಹಳಿಯಾಳ ತಾಲೂಕಿನಾದ್ಯಂತ ಹರಿಯುವ ದೊಡ್ಡ ಹಳ್ಳವಾಗಿದೆ. ನೆರೆಯ ಅಳ್ನಾವರದ ಬಳಿಯ ಇಂದಿರಮ್ಮನ ಕೆರೆಯಿಂದ ಈ ಹಳ್ಳಕ್ಕೆ ನೀರು ಹರಿದು ಬಂದು ನಂತರ ಕಾಳಿನದಿಗೆ ಸೇರುತ್ತದೆ. ಶಾಂತವಾಗಿ ಹರಿಯುವ ಈ ತಟ್ಟಿಹಳ್ಳವು ರೌದ್ರಾವತಾರ ತಾಳಿದ್ದು 2019ರಲ್ಲಿ. ಆಗ ರಾಜ್ಯ ಹಾಗೂ ತಾಲೂಕಿನಲ್ಲಿ ಅತಿವೃಷ್ಟಿಯಾಗಿದ್ದಾಗ ಈ ತಟ್ಟಿಹಳ್ಳವು ಉಕ್ಕೇರಿತ್ತು. ಇದರ ಪರಿಣಾಮ ತಾಲೂಕಿನೆಲ್ಲೆಡೆ ಹಲವಾರು ದಿನ ಅಲ್ಲಲ್ಲಿ ರಸ್ತೆ ಸಂಪರ್ಕ ಸ್ಥಗಿತಗೊಂಡಿತ್ತು.
ಮಾಲಿನ್ಯ ನಿಲ್ಲಿಸಿ: ತಾಲೂಕಾಡಳಿತವು ಹಳ್ಳದ ಪಾತ್ರದಲ್ಲಿ ಯಾವುದೇ ಆರ್ಥಿಕ ವಹಿವಾಟು ಮಾಡಬಾರದೆಂದು, ನೆರೆ ಬಂದರೆ ಯಾವುದೇ ಪರಿಹಾರ ಇತ್ಯಾದಿ ದೊರೆಯಲಾರದು ಎಂದು ಇಲ್ಲಿನ ವ್ಯಾಪಾರಸ್ಥರಿಗೆ ಎಚ್ಚರಿಕೆಯನ್ನು ನೀಡಿತ್ತು. ಆದರೂ ತಾಲೂಕಾಡಳಿತದ ಎಚ್ಚರಿಕೆಯನ್ನು ಪರಿಗಣಿಸದೇ ಹಳ್ಳದ ಸಮೀಪ ಹೋಟೆಲ್‌ಗಳು, ಅಂಗಡಿಗಳನ್ನು ನಿರ್ಮಿಸಿ ಆರ್ಥಿಕ ಚಟುವಟಿಕೆಗಳನ್ನು ಆರಂಭಿಸಿದ್ದಾರೆ. ತಟ್ಟಿಹಳ್ಳವನ್ನು ಮಲೀನಗೊಳಿಸುವ ಕಾರ್ಯವನ್ನು ನಡೆಸಿದ್ದವರ ಮೇಲೆ ತಾಲೂಕಾಡಳಿತ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. ಸೂಕ್ತ ಕ್ರಮ: ತಟ್ಟಿಹಳ್ಳದ ಪಾತ್ರದಲ್ಲಿ ಘನತ್ಯಾಜ್ಯ, ಪ್ಲಾಸ್ಟಿಕ್ ತ್ಯಾಜ್ಯವನ್ನು ಎಸೆಯುವುದು ಗಂಭೀರವಾದ ಸಂಗತಿ. ಕೆಸರೊಳ್ಳಿ ಗ್ರಾಪಂ ಪಿಡಿಒ ಅವರಿಗೆ ಪ್ರಕರಣದ ತನಿಖೆ ನಡೆಸುವಂತೆಯೂ ಹಾಗೂ ತಟ್ಟಿಹಳ್ಳವನ್ನು ತ್ಯಾಜ್ಯಮುಕ್ತ ಮಾಡಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದು ಹಳಿಯಾಳ ತಾಪಂ ಇಒ ಪರಶುರಾಮ ಘಸ್ತೆ ತಿಳಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.