ಗದಗ: ಜಿಲ್ಲೆಯಲ್ಲಿ 200 ಟ್ಯಾಕ್ಸಿಗಳನ್ನು ಪ್ರವಾಸೋಧ್ಯಮ ಇಲಾಖೆಯ ಮೂಲಕ ವಿತರಣೆ ಮಾಡಲಾಗಿದ್ದು, ಇದು ಸ್ವಯಂ ಉದ್ಯೋಗ ಸೃಷ್ಟಿಸುವಲ್ಲಿ ಗದಗ ಜಿಲ್ಲೆಯಲ್ಲಿ ಐತಿಹಾಸಿಕ ದಾಖಲಾಗಿದೆ ಎಂದು ಕಾನೂನು, ಪ್ರವಾಸೋಧ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಟ್ಯಾಕ್ಸಿ ಪಡೆದ ಯುವಕರು ಪ್ರಾಮಾಣಿಕವಾಗಿ ಶ್ರಮವಹಿಸಿ ದುಡಿದು ಉತ್ತಮ ಜೀವನ ನಡೆಸಿ ರಾಷ್ಟ್ರ ಕಟ್ಟುವಲ್ಲಿ ಭಾಗವಹಿಸಿ ಸಮಾಜಕ್ಕೆ ಮಾದರಿ ಆಗಬೇಕು. ಗದಗ ಜಿಲ್ಲೆಯೂ ಪ್ರವಾಸೋಧ್ಯಮ ತಾಣ ಆಗಬೇಕು ರಾಜಧಾನಿ ಬೆಂಗಳೂರಿನಿಂದ ದೂರ ಇರುವ ಕಾರಣಕ್ಕೆ ಪಾರಂಪರಿಕ ಸಂಪತ್ತಾದ ಐತಿಹಾಸಿಕ ದೇವಸ್ಥಾನ ಹೊಂದಿದ ಜಿಲ್ಲೆಯನ್ನು ಪ್ರವಾಸೋಧ್ಯಮ ತಾಣವಾಗಿಸಲು ಪ್ರವಾಸೋಧ್ಯಮ ಇಲಾಖೆಯಿಂದ ಕೆಲಸ ಪ್ರಾರಂಭವಾಗಿದೆ, ಯುವಕರು ಸ್ವಯಂ ಉದ್ಯೋಗ ಮಾಡಿ ಪ್ರವಾಸೋಧ್ಯಮಕ್ಕೆ ಒತ್ತು ನೀಡಬೇಕು ಎನ್ನುವ ಹಂಬಲದಿಂದ 200 ಯುವ ಜನಕ್ಕೆ ಟ್ಯಾಕ್ಸಿ ವಿತರಣೆ ಮಾಡಲಾಗಿದೆ. ಯುವಕರು ಶ್ರದ್ಧೆಯಿಂದ ಟ್ಯಾಕ್ಸಿಯನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಜೀವನ ನಡೆಸಬೇಕು ಎಂದರು.
ಪ್ರವಾಸೋಧ್ಯಮ ನಿಗಮದ ಅಧಿಕಾರಿ ರ್ರಾಜೇಂದ್ರ ಮಾತನಾಡಿ, ಗದಗ ಜಿಲ್ಲೆಯ ಯುವಕರು ಉತ್ಸಾಹದಿಂದ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಬೇಕು. ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಸಂಚಾರಕ್ಕಾಗಿ ಬಳಸುವ ಟ್ಯಾಕ್ಸಿಗಳನ್ನು ಜಿಲ್ಲೆಯಲ್ಲಿ ಪಡೆದುಕೊಂಡಿರುವ ಯುವಕರು ಸದುಪಯೋಗ ಮಾಡಿಕೊಳ್ಳಬೇಕು ಎಂದರು.ವಿಧಾನ ಪರಿಷತ್ ಶಾಸಕ ಎಸ್.ವಿ.ಸಂಕನೂರು ಮಾತನಾಡಿ, ಟ್ಯಾಕ್ಸಿಗಳನ್ನು ಪಡೆದ ಯುವಕರು ಗದಗ ಜಿಲ್ಲೆಯನ್ನು ಪ್ರವಾಸೋಧ್ಯಮ ತಾಣವನ್ನಾಗಿಸಿ ಅಭಿವೃದ್ಧಿ ಪಡಿಸುವ ಗುರಿ ಹೊಂದಬೇಕು. ಟ್ಯಾಕ್ಸಿ ಪಡೆದ ಯುವಕರು ಗದಗ ಜಿಲ್ಲೆಗೆ ಸೀಮಿತವಾಗದೆ ರಾಜ್ಯದಲ್ಲಿರುವ ವಿವಿಧ ದೊಡ್ಡ ದೇವಾಲಯ, ಸ್ಮಾರಕ, ನಿಸರ್ಗ ಧಾಮ ಅಲ್ಲಿನ ವಸತಿ, ಊಟ ವ್ಯವಸ್ಥೆ, ಐತಿಹಾಸಿಕ ಹಿನ್ನೆಲೆ ಬಗ್ಗೆ ಮಾಹಿತಿ ಹೊಂದಿರಬೇಕು. ಮುಖ್ಯವಾಗಿ ಯಾವುದೇ ದುಶ್ಚಟಕ್ಕೆ ಬಲಿಯಾಗದೇ ಆರೋಗ್ಯಯುತ ಜೀವನ ನಡೆಸಬೇಕು ಎಂದರು.
ಅತೀವ ಸಂತಸ: ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡಿದ್ದ ವಿಪ ಸದಸ್ಯ ಎಸ್.ವಿ.ಸಂಕನೂರ ಮಾತನಾಡುವ ವೇಳೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಹೊಗಳಿದ್ದೇ ಹೊಗಳಿದ್ದು, ಮಾತಿನ ಭರದಲ್ಲಿ ಇಷ್ಟೊಂದು ದೊಡ್ಡ ಕ್ರೀಡಾಂಗಣದಲ್ಲಿ ಇಷ್ಟೊಂದು ಸಂಖ್ಯೆಯ ಕಾರುಗಳನ್ನು ನಾನು ನೋಡಿಯೇ ಇಲ್ಲ, ಇಷ್ಟೊಂದು ಸಂಖ್ಯೆಯಲ್ಲಿ ಟ್ಯಾಕ್ಸಿ ವಿತರಣೆ ಮಾಡಿದ್ದು ದಾಖಲೆ ಎಂದು ಮೆಚ್ಚುಗೆಯ ಸುರಿಮಳೆಯನ್ನೇ ಸುರಿಸಿದರು.