ಕನ್ನಡಪ್ರಭ ವಾರ್ತೆ ಮಂಗಳೂರುಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆ ವೇಳೆ ಚುನಾವಣಾ ಕರ್ತವ್ಯಗಳಿಗಾಗಿ ಬಳಕೆ ಮಾಡಿದ ಟ್ಯಾಕ್ಸಿಗಳ ಗೌರವಧನ ನೀಡದೆ ಇನ್ನೂ ಸತಾಯಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಂಬರುವ ಲೋಕಸಭಾ ಚುನಾವಣಾ ಕರ್ತವ್ಯಕ್ಕೆ ತಮ್ಮ ಸಂಘಟನೆ ಸದಸ್ಯರ ವಾಹನಗಳನ್ನು ನೀಡಲ್ಲ ಎಂದು ದ.ಕ. ಜಿಲ್ಲಾ ಟ್ಯಾಕ್ಸಿಮನ್ ಮತ್ತು ಮ್ಯಾಕ್ಸಿಕ್ಯಾಬ್ ಎಸೋಸಿಯೇಶನ್ ಹೇಳಿದೆ.ಈ ಕುರಿತು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಎಸೋಸಿಯೇಶನ್‌ನ ಮುಖಂಡ ಆನಂದ್ ಗೌಡ, ಕಳೆದ ಬಾರಿ ನಡೆದ ಚುನಾವಣಾ ಕರ್ತವ್ಯಕ್ಕೆ ಜಿಲ್ಲಾದ್ಯಂತ ಹಲವಾರು ವಾಹನಗಳನ್ನು ನಮ್ಮ ಸಂಘದ ಸದಸ್ಯರು ನೀಡಿದ್ದು, ಅವುಗಳಲ್ಲಿ ಬೆರಳೆಣಿಕೆಯ ವಾಹನಗಳಿಗೆ ಮಾತ್ರ ಗೌರವ ಧನ ನೀಡಲಾಗಿದೆ. ಅದರಲ್ಲೂ ಸರ್ಕಾರದಿಂದ ನಿಗದಿಪಡಿಸಿದ ಮೊತ್ತವನ್ನು ಸರಿಯಾದ ರೀತಿಯಲ್ಲಿ ನೀಡಿಲ್ಲ. ಈ ಕುರಿತು ಸಂಘದ ವತಿಯಿಂದ ಹಲವು ಬಾರಿ, ಜಿಲ್ಲಾಡಳಿತ, ಜಿಲ್ಲಾಧಿಕಾರಿ, ಸಾರಿಗೆ ಇಲಾಖೆ, ಸರ್ಕಾರದ ಸಚಿವರಿಗೆ ಅಲ್ಲದೆ ಕೇಂದ್ರ ಚುನಾವಣಾ ಆಯೋಗ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೂ ಮನವಿ ನೀಡಿ ಒತ್ತಾಯ ಮಾಡಿದ್ದೇವೆ. ಆದರೂ ಇದುವರೆಗೂ ನೀಡಿಲ್ಲ ಎಂದು ಅಳಲು ತೋಡಿಕೊಂಡರು.ಇದೀಗ ಲೋಕಸಭೆ ಚುನಾವಣೆ ದಿನಾಂಕ ಶೀಘ್ರ ಘೋಷಣೆಯಾಗಲಿದ್ದು, ನಮ್ಮ ಸಂಘದ ಸದಸ್ಯರ ವಾಹನಗಳನ್ನು ಚುನಾವಣಾ ಕರ್ತವ್ಯಕ್ಕೆ ಬಳಸುವ ಸುಳಿವನ್ನು ಸಂಬಂಧಪಟ್ಟ ಇಲಾಖೆಯವರು ನೀಡಿದ್ದಾರೆ. ಆದರೆ ಕಳೆದ 8 ತಿಂಗಳುಗಳಿಂದ ಹಳೆ ಬಾಕಿ ನೀಡದೆ ನಿರ್ಲಕ್ಷ್ಯತನ ಮಾಡಿರುವ ಇಲಾಖೆಗಳಿಗೆ ಯಾವುದೇ ಕಾರಣಕ್ಕೂ ನಮ್ಮ ಸಂಘದ ಸದಸ್ಯರ ವಾಹನವನ್ನು ನೀಡದೆ ಇರಲು ತೀರ್ಮಾನಿಸಲಿದ್ದೇವೆ ಎಂದರು.ಹೋರಾಟ ಎಚ್ಚರಿಕೆ: ಒಂದು ವೇಳೆ ಸಂಘದ ಸದಸ್ಯರ ವಾಹನಗಳನ್ನು ವಶಪಡಿಸಿಕೊಂಡರೆ ಜಿಲ್ಲೆಯ ಸಮಾನ ಮನಸ್ಕ ಸಂಘಟನೆಗಳ ಜತೆ ಸೇರಿಕೊಂಡು ಉಗ್ರ ಹೋರಾಟದ ಜೊತೆಗೆ ಕಾನೂನು ಹೋರಾಟವನ್ನೂ ನಡೆಸಲಿದ್ದೇವೆ ಎಂದು ಆನಂದ್ ಗೌಡ ಎಚ್ಚರಿಕೆ ನೀಡಿದರು. ಪದಾಧಿಕಾರಿಗಳಾದ ಶುಭಕರ ಶೆಟ್ಟಿ, ಲೋಕೇಶ್ ಕಶೆಕೋಡಿ ಮತ್ತಿತರರು ಇದ್ದರು.