ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸದ ರಾಜಕೀಯ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳನ್ನು ತಿರಸ್ಕರಿಸಿ ಶಿಕ್ಷಕರ ನೋವುಗಳನ್ನು ಬಲ್ಲವ ಶಿಕ್ಷಕ ಪ್ರತಿನಿಧಿಯನ್ನೇ ವಿಧಾನ ಪರಿಷತ್ತಿಗೆ ಆಯ್ಕೆ ಮಾಡಬೇಕೆಂದು ಈಶಾನ್ಯ ಕರ್ನಾಟಕ ಶಿಕ್ಷಕರ ಮತಕ್ಷೇತ್ರದ ಅಭ್ಯರ್ಥಿ ಶಿವಶಂಕರ ತರನಳ್ಳಿ ಮನವಿ ಮಾಡಿದರು.
ಕನ್ನಡಪ್ರಭ ವಾರ್ತೆ ಬೀದರ್
ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸದ ರಾಜಕೀಯ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳನ್ನು ತಿರಸ್ಕರಿಸಿ ಶಿಕ್ಷಕರ ನೋವುಗಳನ್ನು ಬಲ್ಲವ ಶಿಕ್ಷಕ ಪ್ರತಿನಿಧಿಯನ್ನೇ ವಿಧಾನ ಪರಿಷತ್ತಿಗೆ ಆಯ್ಕೆ ಮಾಡಬೇಕೆಂದು ಈಶಾನ್ಯ ಕರ್ನಾಟಕ ಶಿಕ್ಷಕರ ಮತಕ್ಷೇತ್ರದ ಅಭ್ಯರ್ಥಿ ಶಿವಶಂಕರ ತರನಳ್ಳಿ ಮನವಿ ಮಾಡಿದರು.ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಭಾನುವಾರ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅ. 23ರಂದು ನಡೆಯಲಿರುವ ಈಶಾನ್ಯ ಕರ್ನಾಟಕ ಶಿಕ್ಷಕರ ಮತಕ್ಷೇತ್ರದ ಚುನಾವಣೆಯಲ್ಲಿ ತಾವು ಅಖಿಲ ಕರ್ನಾಟಕ ಶಿಕ್ಷಕರ ಮಹಾಸಂಘದ ವತಿಯಿಂದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದಾಗಿ ತಿಳಿಸಿದರು.ಅನುದಾನಕ್ಕೆ ನಿರಂತರ ಹೋರಾಟ: 30 ವರ್ಷಗಳಿಂದ ಕನ್ನಡ ಹಾಗೂ ಖಾಸಗಿ ಶಾಲೆಗಳು ಯಾವುದೇ ಸರ್ಕಾರಿ ಅನುದಾನವಿಲ್ಲದೆ ನಡೆಯುತ್ತಿವೆ. ಅನುದಾನಕ್ಕಾಗಿ ಒತ್ತಾಯಿಸಿ ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಉಪವಾಸ ಸತ್ಯಾಗ್ರಹ, ಬೀದಿ ಹೋರಾಟಗಳನ್ನು ನಡೆಸಲಾಗಿದೆ. ಕಳೆದ ನವೆಂಬರ್‌ನಲ್ಲಿ ಬೆಳಗಾವಿ ಅಧಿವೇಶನದಲ್ಲಿ ಧರಣಿ ನಡೆಸುತ್ತಿದ್ದಾಗ, ಮುಖ್ಯಮಂತ್ರಿಗಳ ಪ್ರತಿನಿಧಿಯಾಗಿ ಆಗಮಿಸಿದ್ದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು 1995 ರಿಂದ 2005 ರವರೆಗೆ ಪ್ರಾರಂಭವಾದ ಖಾಸಗಿ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿ ಧರಣಿ ಹಿಂಪಡೆಯುವಂತೆ ಮನವಿ ಮಾಡಿದ್ದರು. ಆದರೆ, ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದಾಗ, ಕನಿಷ್ಠ 5 ವರ್ಷ ಅಥವಾ ಸಚಿವ ಜಾರಕಿಹೊಳಿ ಅವರ ಮನವಿಯಂತೆ 2 ವರ್ಷಗಳ ಶಾಲೆಗಳಿಗಾದರೂ ಅನುದಾನ ನೀಡಲು ಕೋರಿದರೂ, ಮುಖ್ಯಮಂತ್ರಿಗಳು ಒಂದು ವರ್ಷಕ್ಕೂ ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ನಿರಾಕರಿಸಿದರು. ಇದನ್ನು ವಿರೋಧಿಸಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಮನೆ ಘೇರಾವ್ ಮಾಡಿದಾಗ ನಮ್ಮ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಯಿತು ಎಂದು ತರನಳ್ಳಿ ಅವರು ಅಸಮಾಧಾನ ವ್ಯಕ್ತಪಡಿಸಿದರು.ಇಷ್ಟೆಲ್ಲ ಹೋರಾಟಗಳು ನಡೆದರೂ, ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿ ಹೋದ ಎಂಎಲ್‌ಸಿಗಳಾಗಲಿ ಅಥವಾ ಶಾಸಕರಾಗಲಿ ಸದನದಲ್ಲಿ ಈ ಬಗ್ಗೆ ಗಂಭೀರವಾಗಿ ಧ್ವನಿ ಎತ್ತಿಲ್ಲ, ಸದನದ ಬಾವಿಗಿಳಿದು ಪ್ರತಿಭಟಿಸಿಲ್ಲ ಮತ್ತು ಸಭಾತ್ಯಾಗವನ್ನೂ ಮಾಡಿಲ್ಲ. ಆರು ವರ್ಷಗಳ ಕಾಲ ಯಾವ ಶಾಲೆಗಳಿಗೂ ಭೇಟಿ ನೀಡದ, ಹೋರಾಟಕ್ಕೆ ಬೆಂಬಲ ನೀಡದವರು ಈಗ ಚುನಾವಣೆ ಬಂದ ತಕ್ಷಣ ಮತ್ತೆ ಮತಯಾಚಿಸಲು ಬರುತ್ತಿದ್ದಾರೆ ಎಂದು ಟೀಕಿಸಿದರು.ಸರ್ಕಾರದಿಂದ ಶಿಕ್ಷಕರಿಗೆ ಅನ್ಯಾಯ: ಖಾಸಗಿ ಶಾಲಾ ಶಿಕ್ಷಕರು ಸರ್ಕಾರದ ನಿಯಮದಂತೆ ಪಠ್ಯಕ್ರಮ ಪೂರ್ಣಗೊಳಿಸಿ, ಪರೀಕ್ಷೆ ನಡೆಸಿ ಮಕ್ಕಳ ಶ್ರೇಯಸ್ಸಿಗಾಗಿ ಪೂರ್ಣಾವಧಿ ದುಡಿಯುತ್ತಾರೆ. ಅವರು ಕಲಿಸಿದ ವಿದ್ಯಾರ್ಥಿಗಳ 10ನೇ ತರಗತಿಯ ಅಂಕಪಟ್ಟಿಯನ್ನು ಸರ್ಕಾರ ಅಧಿಕೃತವೆಂದು ಪರಿಗಣಿಸುತ್ತದೆ. ಆದರೆ ಕೇವಲ 5 ರಿಂದ 10 ಸಾವಿರ ರು. ಅಲ್ಪ ವೇತನಕ್ಕೆ ದುಡಿಯುವ ಆ ಶಿಕ್ಷಕರನ್ನು ಮಾತ್ರ ಸರ್ಕಾರ ಅಧಿಕೃತಗೊಳಿಸಿಲ್ಲ. ಅವರಿಗೆ ಸೂಕ್ತ ವೇತನವೂ ಇಲ್ಲ. ಅನೇಕರು ಇದೇ ಸ್ಥಿತಿಯಲ್ಲಿ ನಿವೃತ್ತಿ ಹೊಂದುತ್ತಿದ್ದು, ಅವರ ಕುಟುಂಬಗಳ ಬಗ್ಗೆ ಯಾರೂ ಚಿಂತಿಸುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.ಬೆಳಗಾವಿ ಅಧಿವೇಶನದಲ್ಲಿ ಅನುದಾನರಹಿತ ಶಿಕ್ಷಕ ಮತ್ತು ಶಿಕ್ಷಣ ಸಂಸ್ಥೆಗಳ ಪದಾಧಿಕಾರಿಗಳ ಆಗ್ರಹಕ್ಕೆ ಮಣಿದು ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದಾಗಿ ವಿವರಿಸಿದರು. ನವೆಂಬರ್‌ನಿಂದ ಹಿಡಿದು ಬೀದರ್‌ನಿಂದ ಹರಪನಹಳ್ಳಿಯವರೆಗೆ ಇಡೀ ಕ್ಷೇತ್ರದಲ್ಲಿ ಸಂಚರಿಸಿ ಪ್ರಾಥಮಿಕ ಶಾಲೆಯಿಂದ ವಿಶ್ವವಿದ್ಯಾಲಯದವರೆಗಿನ ಶಿಕ್ಷಕರನ್ನು ಭೇಟಿ ಮಾಡಿದ್ದೇನೆ ಎಂದರು.ಬೆಂಗಳೂರಿನ ನಿವೃತ್ತ ಸರ್ಕಾರಿ ನೌಕರರ ಸಂಘದ ಜಂಟಿ ಕಾರ್ಯದರ್ಶಿ ಪ್ರಭಾಕರ ಸೋನೆ ಅವರು ಮಾತನಾಡಿದರು. ನಿವೃತ್ತ ಶಿಕ್ಷಕ ಮಲ್ಲಿಕಾರ್ಜುನ ಭಂಗೂರೆ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.