ವೀರಶೈವ ಪದ ತೆಗೆಯಬೇಕೆಂಬ ದುಷ್ಟರಿಗೆ ಪಾಠ ಕಲಿಸಿ: ಡಾ. ರಾಜಶೇಖರ ಶಿವಾಚಾರ್ಯರು

KannadaprabhaNewsNetwork |  
Published : Mar 29, 2025, 12:30 AM IST
28ಡಿಡಬ್ಲೂಡಿ1ಹೊಸಯಲ್ಲಾಪೂರ ಮಳೇಮಲ್ಲೇಶ್ವರ ಸಂಸ್ಥಾನ ಹಿರೇಮಠದಲ್ಲಿ ರೇಣುಕಾಚಾರ್ಯ ಜಯಂತಿಯಲ್ಲಿ ಡಾ.ರಾಜಶೇಖರ ಶಿವಾಚಾರ್ಯರು ಆಶೀರ್ವಚನ ನೀಡಿದರು.  | Kannada Prabha

ಸಾರಾಂಶ

ಪಂಚಪೀಠಗಳು, ಬಸವಾದಿ ಶರಣರು ಬೇರಲ್ಲ. ಒಂದು ನಾಣ್ಯದ ಮುಖಗಳು ಇದ್ದಂತೆ ಎಂದು ನವನಗರದ ಕಾಶಿ ಶಾಖಾಮಠದ ಡಾ. ರಾಜಶೇಖರ ಶಿವಾಚಾರ್ಯರು ಹೇಳಿದರು.

ಧಾರವಾಡ: ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದಿಂದ ವೀರಶೈವ ಪದ ತೆಗೆಯಬೇಕೆಂದು ಕೆಲವು ಕಾವಿಧಾರಿಗಳು ಹಾಗೂ ದುಷ್ಟ ಬುದ್ಧಿ ಜನರು ಸಮಾಜದ ದಾರಿ ತಪ್ಪಿಸುತ್ತಿದ್ದು, ಬಸವಾದಿ ಶರಣರ ವಚನಗಳಲ್ಲಿಯೇ ವೀರಶೈವ ಪದವಿದೆ ಎಂಬುದನ್ನು ತಿಳಿದುಕೊಳ್ಳಲಿ ಎಂದು ನವನಗರದ ಕಾಶಿ ಶಾಖಾಮಠದ ಡಾ. ರಾಜಶೇಖರ ಶಿವಾಚಾರ್ಯರು ಸ್ಪಷ್ಟಪಡಿಸಿದರು.

ಇಲ್ಲಿಯ ಹೊಸಯಲ್ಲಾಪೂರ ಮಳೇಮಲ್ಲೇಶ್ವರ ಸಂಸ್ಥಾನ ಹಿರೇಮಠದಲ್ಲಿ ಗುರುವಾರ ಸಂಜೆ ನಡೆದ ರೇಣುಕಾಚಾರ್ಯ ಜಯಂತಿಯಲ್ಲಿ ಆಶೀರ್ವಚನ ನೀಡಿದ ಅವರು, ಪಂಚಪೀಠಗಳು, ಬಸವಾದಿ ಶರಣರು ಬೇರಲ್ಲ. ಒಂದು ನಾಣ್ಯದ ಮುಖಗಳು ಇದ್ದಂತೆ. ಇಬ್ಬರೂ ವೀರಶೈವ-ಲಿಂಗಾಯತ ಧರ್ಮಕ್ಕೆ ಅಂತಹ ಶಕ್ತಿ ನೀಡಿದವರು. ಸರಿಯಾಗಿ ಅಧ್ಯಯನ ಮಾಡದೇ ಸಮಾಜವನ್ನು ದಾರಿ ತಪ್ಪಿಸುವ ಕಾರ್ಯ ಈ ಹಿಂದೆ ಮಾಡಿದ್ದ ಮಾತೆ ಮಹಾದೇವಿಗೆ ತಕ್ಕ ಶಿಕ್ಷೆಯಾಯಿತು. ಈಗ ಅದೇ ಮಾದರಿಯ ಜನರು ವೀರಶೈವ ಪದ ತೆಗೆದುಹಾಕಬೇಕು ಎಂಬುದಾಗಿ ಹೇಳುತ್ತಿದ್ದು, ಅವರಿಗೆ ಪಾಠ ಕಲಿಸುವ ಕಾರ್ಯವಾಗಬೇಕು ಎಂದರು.

ಬಸವಾದಿ ಶರಣರು ನುಡಿದ ನುಡಿಗಳಲ್ಲಿ ಬರೆದ ವಚನಗಳಲ್ಲಿ ವೀರಶೈವ ಇದೆ. ಸರಿಯಾಗಿ ಅಧ್ಯಯನ ಮಾಡಿ ಈ ಬಗ್ಗೆ ಜಾಗೃತರಾಗುವ ಬದಲು ಸಮಾಜ ಒಡೆಯುವುದು ಸರಿಯಲ್ಲ. ಇಂತಹ ಮಾತು, ಕೃತಿಯಿಂದ ಬಸವಾದಿ ಶರಣರನ್ನು ಹಾಗೂ ಪಂಚ ಪೀಠಗಳನ್ನು ಯಾರೂ ನಾಶ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಈ ಪ್ರಯತ್ನ ಮಾಡಿದರೆ ತಕ್ಕ ಶಾಸ್ತಿ ಅನುಭವಿಸಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದರು.

ಶಿವಧರ್ಮ ಪ್ರಚಾರ ಮಾಡುವವನೇ ಜಂಗಮ. ಅದಕ್ಕಾಗಿಯೇ ರೇಣುಕಾಚಾರ್ಯರು ಹಲವು ಅವತಾರ ಎತ್ತಿದ್ದಾರೆ. ನಾವು ಯಾವತ್ತೂ ರೇಣುಕಾಯ ನಮಃ, ರಾಜಶೇಖರಾಯ ನಮಃ ಎಂದಿಲ್ಲ. ಓಂ ನಮಃ ಶಿವಾಯ ಎಂಬ ಮೂಲ ಪಂಚಾಕ್ಷರಿ ಮಹಾಮಂತ್ರವನ್ನು ಪಠಿಸುತ್ತೇವೆ. ಈ ಪದವನ್ನು ಕೊಟ್ಟಿರುವುದು ವೀರಶೈವ ಧರ್ಮ ಎಂದು ಶಿವಾಚಾರ್ಯರು ಪ್ರತಿಪಾದಿಸಿದರು.

ಹೊಸಯಲ್ಲಾಪೂರ ಹಿರೇಮಠದ ಶಶಾಂಕ ಸ್ವಾಮೀಜಿ ಮಾತನಾಡಿ, ವಿರೋಧ ರಹಿತರು, ಎಲ್ಲವನ್ನು ಸ್ವಾಗತ ಮಾಡುವವರು ಹಾಗೂ ಧರ್ಮದಿಂದ ನಡೆಯುವವರು ವೀರಶೈವರು. ಅಂತಹ ವೀರಶೈವ ಧರ್ಮ ಸ್ಥಾಪನೆ ಮಾಡಿದ ರೇಣುಕಾಚಾರ್ಯರು ಸಮಸ್ತ ಮಾನವ ಕುಲಕ್ಕೆ ಜಯವಾಗಲಿ ಎಂದಿದ್ದಾರೆ. ರೇಣುಕರ ಆಶಯದಂತೆ ನಾವು ಬದುಕಿಗೆ ಗೌರವ ಕೊಡುವಂತೆ ನಡೆದುಕೊಳ್ಳಬೇಕು. ಸಮಾಜದ ಎಲ್ಲರೊಂದಿಗೆ ಪ್ರೀತಿ-ವಿಶ್ವಾಸದಿಂದ ನಡೆದುಕೊಳ್ಳಬೇಕು. ನಮ್ಮ ಬದುಕು ಮತ್ತೊಬ್ಬರಿಗೆ ಆದರ್ಶವಾಗಬೇಕೆ ಹೊರತು ಮಾರಕವಾಗಬಾರದು ಎಂದರು.

ಪ್ರಾಸ್ತಾವಿಕವಾಗಿ ಸರೋಜಾ ಪಾಟೀಲ ಮಾತನಾಡಿದರು. ಹೊಸಯಲ್ಲಾಪುರ ಹಿರೇಮಠದ ಹಿರಿಯ ಸ್ವಾಮೀಜಿ ಗದಿಗಯ್ಯ ಸ್ವಾಮೀಜಿ, ಕರಡಿಗುಡ್ಡದ ಚೆನ್ನಬಸವ ಸ್ವಾಮೀಜಿ, ಮಂಜುನಾಥ ಹಿರೇಮಠ ಸ್ವಾಗತಿಸಿದರು. ರಾಜೇಂದ್ರ ಹಿರೇಮಠ ವಂದಿಸಿದರು. ಸಿ.ಎನ್. ಹಿರೇಮಠ, ಶಕುಂತಲಾ ಹಿರೇಮಠ, ಜಯಲಕ್ಷ್ಮಿ ಹಿರೇಮಠ, ಬಸವರಾಜ ಕುರಹಟ್ಟಿಮಠ ಸೇರಿದಂತೆ ಮತ್ತಿತರರು ಇದ್ದರು. ಇದಕ್ಕೂ ಮುಂಚೆ ರೇಣುಕಾಚಾರ್ಯರ ಭಾವಚಿತ್ರ ಮೆರವಣಿಗೆಯನ್ನು ಹಳೇ ಧಾರವಾಡದ ಭಾಗದಲ್ಲಿ ಮಾಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!