ಸನಾತನ ಧರ್ಮವನ್ನು ಯಾರೂ ಹುಟ್ಟುಹಾಕಿಲ್ಲ. ಅದರಂತೆ ಸನಾತನ ಧರ್ಮಕ್ಕೆ ಸಾವಿಲ್ಲ. ಸನಾತನ ಧರ್ಮ ಸತ್ಯವನ್ನು ಹೇಳುತ್ತದೆ.
ಕನ್ನಡಪ್ರಭ ವಾರ್ತೆ ಸಿದ್ದಾಪುರಸನಾತನ ಧರ್ಮವನ್ನು ಯಾರೂ ಹುಟ್ಟುಹಾಕಿಲ್ಲ. ಅದರಂತೆ ಸನಾತನ ಧರ್ಮಕ್ಕೆ ಸಾವಿಲ್ಲ. ಸನಾತನ ಧರ್ಮ ಸತ್ಯವನ್ನು ಹೇಳುತ್ತದೆ. ಶಾಂತಿ, ನೆಮ್ಮದಿ ಸಿಗುವುದು ಸನಾತನ ಧರ್ಮದಲ್ಲಿ. ನಮ್ಮ ಸಂತರು ದೇವರನ್ನು ಕಂಡುಕೊಂಡವರಲ್ಲ. ಸಾಕ್ಷಾತ್ಕರಿಸಿಕೊಂಡವರು ಎಂದು ಶಿರಳಗಿಯ ಚೈತನ್ಯ ರಾಜಾರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಭಾರತಿ ಮಹಾಸ್ವಾಮಿಗಳು ಹೇಳಿದರು.ತಾಲೂಕಿನ ಹಲಗೇರಿಯ ದೇವಾಲಯದ ಆವರಣದಲ್ಲಿ ಹಿಂದೂ ಸಮಾವೇಶ ಸಮಿತಿ ಆಯೋಜಿಸಿದ್ದ ಹಿಂದೂ ಸಮಾವೇಶದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಈ ಜಗತ್ತು ಧರ್ಮದ ಆಧಾರದ ಮೇಲೆ ನಡೆಯುತ್ತಿದೆ. ಪ್ರತಿಯೊಂದು ಪ್ರಾಣಿಗಳಿಗೂ ಅವುಗಳದೇ ಆದ ಧರ್ಮ ಇದೆ. ಉದ್ದೇಶಪೂರ್ವಕವಾಗಿ ಸನಾತನ ಶಿಕ್ಷಣವನ್ನು ಬದಿಗಿಡಲಾಗಿದೆ. ಆದರೆ ಶಾಲೆಗಳಲ್ಲಿ ಸನಾತನ ಶಿಕ್ಷಣ ಇಲ್ಲ. ನಾವೇ ನಮ್ಮ ಮಕ್ಕಳಿಗೆ ಸನಾತನ ಧರ್ಮದ ಶಿಕ್ಷಣ, ಸಂಸ್ಕೃತಿ ಹಾಗೂ ಸಂಸ್ಕಾರದ ಬಗ್ಗೆ ತಿಳಿಸಬೇಕಾಗಿದೆ. ಯಾರು ಸನಾತನ ಧರ್ಮವನ್ನು ಈ ದೇಶವನ್ನು ಗೌರವಿಸುತ್ತಾನೋ ಯಾರಿಗೆ ವಂದೇ ಮಾತರಂ ಹೇಳಲು ಹೆಮ್ಮೆ ಇದೆಯೋ ಅಂತವರನ್ನು ಗೌರವಿಸೋಣ. ನಮ್ಮಲ್ಲಿ ಸಂಘಟನೆ, ಸ್ವಾಭಿಮಾನ ಹೆಚ್ಚಾಗಬೇಕು ಎಂದರು.ದಿಕ್ಸೂಚಿ ಭಾಷಣ ಮಾಡಿದ ರಾಷ್ಟ್ರ ಗೋರಕ್ಷಣಾ ಪಡೆಯ ಸಂಸ್ಥಾಪಕ ಪುನೀತ ಕೆರೆಹಳ್ಳಿ, ರಾಷ್ಟ್ರದ ಹೊರತು ಬೇರೆ ಧರ್ಮ ಇಲ್ಲ ಎನ್ನುವ ಸಿದ್ದಾಂತ ಹೊಂದಿರುವುದು ನಮ್ಮ ಸನಾತನ ಧರ್ಮ. ನಮ್ಮ ಧರ್ಮ ನಮ್ಮ ಹೆಮ್ಮೆ ಎನ್ನುವುದನ್ನು ನಾವು ನಮ್ಮ ಮಕ್ಕಳಿಗೆ ತಿಳಿಸಿಕೊಡುವ ಜವಾಬ್ದಾರಿ ನಮ್ಮ ಮೇಲಿದೆ. ನಮ್ಮ ಸಂಸ್ಕೃತಿ, ಪರಂಪರೆಯ ಬಗ್ಗೆ ಜಾಗೃತಿ ಮೂಡಿಸುವ ಶಿಕ್ಷಣ ನೀಡಬೇಕಾಗಿದೆ ಪ್ರತಿ ಮನೆಯಿಂದ ಒಬ್ಬೊಬ್ಬರು ದೇಶದ ರಕ್ಷಣೆಗಾಗಿ, ಧರ್ಮದ ರಕ್ಷಣೆಗಾಗಿ ಬರಬೇಕು ಎಂದರು.ಸಮಾವೇಶ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಊರಿನ ಹಿರಿಯರಾದ ವೀರಭದ್ರ ಹುಚ್ಚ ನಾಯ್ಕ ಸುಂಕತ್ತಿ ಹಾಗೂ ಅಮೃತ ಎಸ್.ಹೆಗಡೆ ಕಿಲಾರ ಉಪಸ್ಥಿತರಿದ್ದರು. ರಾಷ್ಟ್ರಗೋರಕ್ಷಣಾ ಪಡೆಯ ಸಂಸ್ಥಾಪಕ ಪುನೀತ ಕೆರೆಹಳ್ಳಿ ಅವರನ್ನು ಸಮಿತಿಯಿಂದ ಗೌರವಿಸಲಾಯಿತು. ಚಂದ್ರಶೇಖರ ಕೊಡಿಯಾ ನಿರ್ವಹಿಸಿದರು. ಶ್ರೀಧರ ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ರವಿ ನಾಯ್ಕ ಸ್ವಾಗತಿಸಿದರು. ಮಂಜುನಾಥ ನಾಯ್ಕ ದಂಪತಿ ಶ್ರೀಗಳನ್ನು ಗೌರವಿಸಿದರು. ನಾಗರಾಜ ನಾಯ್ಕ ವರದಿ ವಾಚಿಸಿದರು. ಕಾರ್ಯಕ್ರಮದ ಪೂರ್ವದಲ್ಲಿ ಸುಂಕತ್ತಿ ಶಾಲಾ ಮೈದಾನದಿಂದ ಹಲಗೇರಿ ದೇವಾಲಯದವರೆಗೆ ಶೋಭಾಯಾತ್ರೆ ನಡೆಯಿತು. ಈ ಸಂದರ್ಭ ನೂರಾರು ಮಹಿಳೆಯರು ಪೂರ್ಣಕುಂಬದೊಂದಿಗೆ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.