ಮಕ್ಕಳಿಗೆ ವಿದ್ಯೆ ಜೊತೆಗೆ ಸಂಸ್ಕಾರ ಕಲಿಸಿ: ಧರ್ಮಶೆಟ್ಟಿ

KannadaprabhaNewsNetwork |  
Published : Jun 09, 2026, 01:45 AM IST
8ಕೆಎಂಎನ್ ಡಿ12 | Kannada Prabha

ಸಾರಾಂಶ

ವಿದ್ಯೆ ಎಂಬುದು ಸಾಧಕ, ಶ್ರಮಿಕನ ಸ್ವತ್ತೆ ಹೊರತು ಸೋಮಾರಿಗಳ ಸ್ವತ್ತಲ್ಲ. ಜೀವನದಲ್ಲಿ ವಿದ್ಯೆ ಮತ್ತು ಆರೋಗ್ಯ ಇದ್ದರೆ ಹಣವನ್ನು ಸಂಪಾದನೆ ಮಾಡಬಹುದು. ನಗರ ಪ್ರದೇಶದ ಮಕ್ಕಳಿಗಿಂತ ಗ್ರಾಮೀಣ ಪ್ರದೇಶದ ಮಕ್ಕಳು ಸಾಕಷ್ಟು ಬುದ್ದಿವಂತರಾಗಿರುತ್ತಾರೆ. ಅವರಿಗೆ ಸೂಕ್ತವಾದ ಮಾರ್ಗದರ್ಶನ ನೀಡಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಮಕ್ಕಳಿಗೆ ವಿದ್ಯೆ ಜೊತೆಗೆ ಗುರು-ಹಿರಿಯರನ್ನು ಗೌರವದಿಂದ ಕಾಣುವ ಸಂಸ್ಕಾರ ಬೆಳೆಸಬೇಕು ಎಂದು ಬಿಇಒ ಧರ್ಮಶೆಟ್ಟಿ ಹೇಳಿದರು.

ಪಟ್ಟಣದ ಬಿಜಿಎಸ್ ಶಾಲೆಯಲ್ಲಿ ನಡೆದ ಅಕ್ಷರಾಭ್ಯಾಸ ಹಾಗೂ ಪರಿಸರ ದಿನಾಚರಣೆಯಲ್ಲಿ ಮಾತನಾಡಿ, ಬಿಜಿಎಸ್ ಶಿಕ್ಷಣ ಸಂಸ್ಥೆಯೂ ಮಕ್ಕಳಿಗೆ ಶಿಕ್ಷಣ ನೀಡುವ ಜೊತೆಗೆ ಮಕ್ಕಳಿಗೆ ಸಂಸ್ಕಾರ ಬೆಳೆಸಲು ಪೂರಕವಾದ ಹಲವು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ ಎಂದರು.

ಅಕ್ಷರಾಭ್ಯಾಸದಂತಹ ಕಾರ್ಯಕ್ರಮವನ್ನು ಹಣವಂತರು ಶೃಂಗೇರಿ ಶಾರಧಾಂಬೆ ದೇವಾಲಯದಲ್ಲಿ ಮಾಡಿಸುತ್ತಿದ್ದಾರೆ. ಆದರೆ, ಬಿಜಿಎಸ್ ಶಾಲೆಯೂ ತಮ್ಮ ಶಾಲೆಯಲ್ಲಿಯೇ ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮ ಮಾಡಿಸುತ್ತಿರುವುದು ಶ್ಲಾಘನೀಯ ವಿಚಾರವಾಗಿದೆ ಎಂದರು.

ವಿದ್ಯೆ ಎಂಬುದು ಸಾಧಕ, ಶ್ರಮಿಕನ ಸ್ವತ್ತೆ ಹೊರತು ಸೋಮಾರಿಗಳ ಸ್ವತ್ತಲ್ಲ. ಜೀವನದಲ್ಲಿ ವಿದ್ಯೆ ಮತ್ತು ಆರೋಗ್ಯ ಇದ್ದರೆ ಹಣವನ್ನು ಸಂಪಾದನೆ ಮಾಡಬಹುದು. ನಗರ ಪ್ರದೇಶದ ಮಕ್ಕಳಿಗಿಂತ ಗ್ರಾಮೀಣ ಪ್ರದೇಶದ ಮಕ್ಕಳು ಸಾಕಷ್ಟು ಬುದ್ದಿವಂತರಾಗಿರುತ್ತಾರೆ. ಅವರಿಗೆ ಸೂಕ್ತವಾದ ಮಾರ್ಗದರ್ಶನ ನೀಡಬೇಕು ಎಂದರು.

ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಮಾತನಾಡಿ, ಪೂರ್ವಿಕರು ಮಕ್ಕಳಿಗೆ ಮರಳಿನಲ್ಲಿ ಅಕ್ಷರಾಭ್ಯಾಸ ಮಾಡಿಸುತ್ತಿದ್ದರು. ಆದರೀಗ ಆ ಸಂಸ್ಕೃತಿ ಗ್ರಾಮೀಣ ಪ್ರದೇಶದಲ್ಲಿ ಕಣ್ಮರೆಯಾಗಿದೆ. ಬಿಜಿಎಸ್ ಶಿಕ್ಷಣ ಸಂಸ್ಥೆ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುತ್ತಿರುವುದು ನಿಜಕ್ಕೂ ಖುಷಿಯಾಗಿದೆ ಎಂದರು.

ಇದೇ ವೇಳೆ ಶಾಲಾ ಮಕ್ಕಳಿಂದ ಪರಿಸರ ದಿನಾಚರಣೆಯ ಅಂಗವಾಗಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಹಲವು ಚಿತ್ರಗಳನ್ನು ಪ್ರದರ್ಶಿಸಿದರು. ಶಾಲಾ ಮಕ್ಕಳಿಗೆ ಪೋಷಕರಿಂದ ಹಲವು ಪೂಜಾ ವಿಧಾನಗಳೊಂದಿಗೆ ಅಕ್ಷರಾಭ್ಯಾಸ ಮಾಡಿಸಲಾಯಿತು.

ಈ ವೇಳೆ ಬಿಜಿಎಸ್ ಶಿಕ್ಷಣ ಸಂಸ್ಥೆ ಕಾರ್‍ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ, ಜೆಡಿಎಸ್ ಅಧ್ಯಕ್ಷ ಎಸ್.ಎ.ಮಲ್ಲೇಶ್, ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಿ.ಆರ್.ರಮೇಶ್, ಬಿಜೆಪಿ ಮುಖಂಡ ಎಚ್.ಎನ್.ಮಂಜುನಾಥ್, ಗೃಹ ನಿರ್ಮಾಣ ಮಂಡಳಿ ನಿರ್ದೇಶಕ ಬಿ.ಎಸ್.ಜಯರಾಮು, ರೈತಸಂಘದ ಮಹಿಳಾ ಅಧ್ಯಕ್ಷೆ ರೂಪನಿತೀನ್, ಪ್ರಾಂಶುಪಾಲ ರಘು, ಮುಖ್ಯಶಿಕ್ಷಕಿ ಚಂಪ ಸೇರಿದಂತೆ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿ ಸುಧಾಕರ್ ಮಾನವೀಯ ವ್ಯಕ್ತಿತ್ವ ಅಜರಾಮರ: ಡಾ.ಸಿ ಶಿವಲಿಂಗಪ್ಪ
ಎಸ್‌ಐಆರ್ ಮ್ಯಾಪಿಂಗ್ ಕುರಿತು ತರಬೇತಿ