ಹಾವೇರಿ: ನಗರದ ಗೆಳೆಯರ ಬಳಗದ ಪ್ರಾಥಮಿಕ ಶಾಲೆ ಕಲಾಭವನದಲ್ಲಿ ಇತ್ತೀಚೆಗೆ ಶಿರಸಿ ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರದಿಂದ ವಿದುಷಿ ದಿವ್ಯಾ ನಾಯ್ಕ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ನಡೆಯಿತು.
ಸಾಹಿತಿ ಹನುಮಂತಗೌಡ ಗೊಲ್ಲರ ಮಾತನಾಡಿ, ಸಾಹಿತ್ಯ, ಸಂಗೀತ, ನೃತ್ಯ ಕಲೆ ನೋಡುಗರ ಮನಸ್ಸಿಗೆ ಮುದ ನೀಡುತ್ತದೆ. ಆದರೆ ದೂರದರ್ಶನ ಹಾಗೂ ಸಿನಿಮಾಗಳು ಮನಸ್ಸನ್ನು ವಿರೂಪಗೊಳಿಸುತ್ತವೆ. ಹಾಗಾಗಿ ಪಾಲಕರು ಮಕ್ಕಳಿಗೆ ಸಂಸ್ಕೃತಿ, ನೃತ್ಯ ಹಾಗೂ ಸಂಗೀತ ಕಲೆಗಳನ್ನು ತಿಳಿಸುವ ಜತೆಗೆ ಅವುಗಳನ್ನು ಕಲಿಯಲು ಪ್ರೋತ್ಸಾಹಿಸಬೇಕು ಎಂದರು.
ಪತ್ರಕರ್ತ ವಿಜಯ್ ಹೂಗಾರ ಹಾಗೂ ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಡಾ. ವೆಂಕನಗೌಡ ಆರ್. ಪಾಟೀಲ ಮಾತನಾಡಿ, ಶಾಸ್ತ್ರೀಯ ನೃತ್ಯ ಕಲೆ ನಮ್ಮ ಸಂಸ್ಕೃತಿ ಶ್ರೀಮಂತಿಕೆ ಬಿಂಬಿಸುತ್ತದೆ ಹಾಗೂ ದೈಹಿಕ ಆರೋಗ್ಯಕ್ಕೂ ಸಹಕಾರಿಯಾಗಿದೆ ಎಂದರು.ಡಾ. ಸಹನಾ ಪ್ರದೀಪ ಭಟ್ಟ ಮಾತನಾಡಿದರು. ಶಿರಸಿ ನಾಟ್ಯಾಜಲಿ ನೃತ್ಯ ಕಲಾ ಕೇಂದ್ರ ದ ಪ್ರದೀಪ ಭಟ್ಟ ಅಧ್ಯಕ್ಷತೆ ವಹಿಸಿದ್ದರು.
ಗುರುವಂದನೆ: ಇದೇ ಸಂದರ್ಭದಲ್ಲಿ ಶಿರಸಿ ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರದ ಅಧ್ಯಕ್ಷ ಪ್ರದೀಪ ಭಟ್ಟ ಹಾಗೂ ಡಾ. ಸಹನಾ ಪ್ರದೀಪ ಭಟ್ ಅವರಿಗೆ ಮತ್ತು ವಿನುತಾ ಭಟ್ ಅವರಿಗೆ ವಿದುಷಿ ದಿವ್ಯಾ ಹನುಮಂತ ನಾಯ್ಕ ಗುರುವಂದನೆ ಸಮರ್ಪಿಸಿದರು. ರಾಘವೇಂದ್ರ ಹೆಗಡೆ ಸ್ವಾಗತಿಸಿದರು. ಸತೀಶ ಮೂರೂರು ಕಾರ್ಯಕ್ರಮ ನಿರೂಪಿಸಿದರು.ಸತತ 3 ಗಂಟೆ ನೃತ್ಯ ಪ್ರದರ್ಶನ:
ವಿದುಷಿ ದಿವ್ಯಾ ಹನುಮಂತ ನಾಯ್ಕ ಅವರು ಪುಷ್ಪಾಂಜಲಿ, ಗಣೇಶ ಸ್ತುತಿ, ಅಲಾರಿಪು, ಜತಿಸ್ವರ, ಶಿವಸ್ತುತಿ, ಗಂಗಾ, ವರ್ಣ, ದೇವರನಾಮ ಹಾಗೂ ತಿಲ್ಲಾನ ನೃತ್ಯಗಳನ್ನು ನವರಸ ಭಂಗಿಗಳನ್ನು ಅತ್ಯಂತ ಸುಂದರವಾಗಿ ವ್ಯಕ್ತಪಡಿಸುವ ಮೂಲಕ ಆಕರ್ಷಕ ಹಾಗೂ ಅದ್ಭುತವಾಗಿ ಸತತ 3 ತಾಸುಗಳ ಕಾಲ ನೃತ್ಯ ಪ್ರದರ್ಶನ ಮಾಡಿದರು.ಡಾ. ಸಹನಾ ಪ್ರದೀಪ ಭಟ್ಟ ಅವರಿಂದ ನಟುವಾಂಗ, ವಿದ್ವಾನ್ ಬಾಲಸುಬ್ರಹ್ಮಣ್ಯ ಶರ್ಮಾ ಅವರ ಹಾಡುಗಾರಿಕೆ, ವಿದ್ವಾನ್ ಪಂಚಮ್ ಉಪಾಧ್ಯಾಯ ಅವರ ಮೃದಂಗ ವಾದನ, ವಿದ್ವಾನ್ ಜಯರಾಮ ಕೊಳಲುವಾದನ ಹಾಗೂ ವಿದ್ವಾನ್ ಅರುಣ ಕುಮಾರ ಅವರು ರಿದಂ ಪ್ಯಾಡ್ ಸಾಥ್ ನೀಡಿದರು.