ನವಲಗುಂದ: ಮಕ್ಕಳಲ್ಲಿ ವಿದ್ಯಾಭ್ಯಾಸದ ಜತೆಗೆ ಸಂಸ್ಕಾರ ಕಲಿಸುವ ಜವಾಬ್ದಾರಿ ಪಾಲಕರ ಮೇಲಿದೆ. ಸಂಸ್ಕೃತಿ, ಸಂಸ್ಕಾರವು ಮಕ್ಕಳು ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು.
ನವಲಗುಂದ ಗವಿಮಠದ ಬಸವಲಿಂಗ ಶ್ರೀಗಳು ಮಾತನಾಡಿ, ನಾವು ಹುಟ್ಟಿದ ಜನ್ಮಭೂಮಿ ಸ್ವರ್ಗಕ್ಕಿಂತಲೂ ಮಿಗಿಲು. ಅದನ್ನು ಮರೆತ ಜೀವನ ಜೀವನವೇ ಅಲ್ಲ. ಜೀವನದಲ್ಲಿ ಹಣ, ಆಸ್ತಿ, ಬಂಗಾರ ಗಳಿಕೆ ಮಾಡಿ ಶ್ರೀಮಂತರಾಗುವುದಕ್ಕಿಂತ ಬಂಧು, ಬಾಂಧವರ ಜತೆಗಿನ ಸಂಬಂಧವನ್ನು ಉಳಿಸಿಕೊಂಡು ಹೋಗುವುದೇ ನಿಜವಾದ ಶ್ರೀಮಂತಿಕೆ ಎಂದರು.
ನರಗುಂದ ಪಂಚಗ್ರಹ ಗುಡ್ಡದ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯರು ಆಶೀರ್ವಚನ ನೀಡಿದರು. ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರದಿಂದ ಸರ್ವೋತ್ತಮ ಸೇವಾ ಪ್ರಶಸ್ತಿ ಪಡೆದ ಹುಬ್ಬಳ್ಳಿ ಗ್ರಾಮೀಣ ತಾಲೂಕು ತಹಸೀಲ್ದಾರ್ ಜಂಬುನಾಥ ಮಜ್ಜಗಿ ಅವರನ್ನು ಖನ್ನೂರ ಗ್ರಾಮದ ಬನಶಂಕರಿ ಸೇವಾ ಸಮಿತಿಯಿಂದ ಸನ್ಮಾನಿಸಲಾಯಿತು.ಸನ್ಮಾನ ಸ್ವೀಕರಿಸಿ ಮಾತನಾಡಿದ ಮಜ್ಜಗಿ, ನನ್ನೂರು ನನ್ನ ಹೆಮ್ಮೆ, ಇಲ್ಲಿನ ಪರಿಸರ, ಸ್ನೇಹ ಇಂದಿಗೂ ಹಚ್ಚ ಹಸಿರಾಗಿದೆ. ತಾವು ಪ್ರಾಥಮಿಕ ಶಿಕ್ಷಣ ಪೂರೈಸಿದ ಶಾಲೆಯ ದತ್ತಿ ನಿಧಿಗೆ ₹1 ಲಕ್ಷ ನೀಡಿದರು. ಇದೇ ವೇಳೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಗ್ರಾಮದ ಮಕ್ಕಳನ್ನು ಸನ್ಮಾನಿಸಲಾಯಿತು.