ಮಕ್ಕಳಿಗೆ ಬಾಲ್ಯದಲ್ಲೇ ಸಂಗೀತ ಶಿಕ್ಷಣ ನೀಡಿ: ಪ್ರಮೋದ ಹೆಗಡೆ

KannadaprabhaNewsNetwork | Published : Apr 11, 2024 12:46 AM

ಸಾರಾಂಶ

ಇಡಗುಂದಿ ಗ್ರಾಪಂ ವ್ಯಾಪ್ತಿಯ ಸಂಪೇಬೈಲ್‌ನಲ್ಲಿ ಸುಕನ್ಯಾ ಮತ್ತು ವಿಶ್ವನಾಥ ಭಟ್ಟ ಮಣ್ಮನೆ ಅವರ ವಿವಾಹದ ೨೫ನೇ ವಾರ್ಷಿಕೋತ್ಸವ ಮತ್ತು ನೂತನ ಗೃಹಪ್ರವೇಶದ ವಿಶೇಷ ಕಾರ್ಯಕ್ರಮ ನಡೆಯಿತು.

ಯಲ್ಲಾಪುರ: ಸಂಗೀತ ನಮ್ಮನ್ನು ಹೊಸ ಪ್ರಪಂಚದೆಡೆಗೆ ಕೊಂಡೊಯ್ಯುತ್ತದೆ. ನಮ್ಮ ಪರಂಪರೆಯಲ್ಲಿ ಹಿರಿಯರು ಮೌಲ್ಯಯುತ ವಾತಾವರಣವನ್ನು ಮಕ್ಕಳಿಗೆ ಕಲ್ಪಿಸಿಕೊಡುತ್ತಿದ್ದರು. ಮುಂದಿನ ಜನಾಂಗಕ್ಕಾಗಿ ಮನೆಯ ಆವರಣದೊಳಗೆ ಸಂಗೀತವನ್ನು ತರುವಂತಾಗಬೇಕು ಎಂದು ಸಾಂಸ್ಕೃತಿಕ ರಾಯಭಾರಿ ಪ್ರಮೋದ ಹೆಗಡೆ ತಿಳಿಸಿದರು.

ಶನಿವಾರ ಇಡಗುಂದಿ ಗ್ರಾಪಂ ವ್ಯಾಪ್ತಿಯ ಸಂಪೇಬೈಲ್‌ನಲ್ಲಿ ಸುಕನ್ಯಾ ಮತ್ತು ವಿಶ್ವನಾಥ ಭಟ್ಟ ಮಣ್ಮನೆ ಅವರ ವಿವಾಹದ ೨೫ನೇ ವಾರ್ಷಿಕೋತ್ಸವ ಮತ್ತು ನೂತನ ಗೃಹಪ್ರವೇಶದ ವಿಶೇಷ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಉದ್ಯಮಿಯೂ, ಸಂಗೀತ ಕಲಾವಿದರೂ ಆದ ಎಂ.ಎಸ್. ರಾಜೇಂದ್ರ ಅವರನ್ನು ಸನ್ಮಾನಿಸಿ ಮಾತನಾಡಿದರು.

ಒಳ್ಳೆಯ ವ್ಯಕ್ತಿತ್ವ ನಿರ್ಮಾಣಕ್ಕೆ ಆಧ್ಯಾತ್ಮಿಕತೆ ಶಕ್ತಿಯನ್ನು ನೀಡುತ್ತದೆ. ಭಾರತದ ನೆಲದಲ್ಲಿ ಮನುಷ್ಯರಾಗಿ ಹುಟ್ಟಿ, ಸಂಗೀತದಂತಹ ಕೊಡುಗೆಯಿಂದಾಗಿ ಶ್ರೇಷ್ಠ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದಕ್ಕೆ ಸಾಧ್ಯವಾಗಿದೆ. ಹೆಣ್ಣುಮಕ್ಕಳಿಗೆ ಕರುಳಿನ ಸಂಬಂಧ ಸದಾ ಜಾಗೃತವಾಗಿರುತ್ತದೆ. ಆ ನೆಲೆಯಲ್ಲಿಯೇ ಸುಕನ್ಯಾ ತನ್ನ ಹುಟ್ಟೂರಿನ ಸಂಗೀತಗಾರರನ್ನೇ ಕಾರ್ಯಕ್ರಮಕ್ಕೆ ಕರೆಸಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಖ್ಯಾತ ಯಕ್ಷಗಾನ ಅರ್ಥಧಾರಿ ಎಂ.ಎನ್. ಹೆಗಡೆ ಹಳವಳ್ಳಿ ಮಾತನಾಡಿ, ಬದುಕಿಗಾಗಿ ಆರಿಸಿಕೊಂಡ ವೃತ್ತಿಯ ಜತೆಗೆ ಸಂಗೀತದಂತಹ ಶ್ರೇಷ್ಠ ಕಲೆಯ ಆರಾಧನೆ ನಮ್ಮ ಸಂಸ್ಕೃತಿಯ ಬೆಳವಣಿಗೆಗೆ ಕಾರಣವಾಗುತ್ತದೆ ಎಂದರು.

ನಂತರ ನಡೆದ ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ಎಂ.ಎಸ್. ರಾಜೇಂದ್ರ, ಅಶ್ವಿನ್ ರಾಜೇಂದ್ರ, ದೀಪಾ ರಾಘವೇಂದ್ರ ಮೂರು ಗಂಟೆಗಳ ಕಾಲ ಪ್ರೇಕ್ಷಕರ ಮನಸೆಳೆದರೆ, ಸ್ಥಳೀಯ ಕಲಾವಿದರಾಗಿ ಮಂಜುನಾಥ ಭಟ್ಟ ಅಬ್ಬೀತೋಟ, ಗೀತಾ ಸುಬ್ರಾಯ ಭಟ್ಟ, ಮಂಜುನಾಥ ದೇವಳಿ, ಅನ್ನಪೂರ್ಣ ಪ್ರಸನ್ನ ಭಟ್ಟ, ಶ್ರೀಕಾಂತ ಸಿದ್ದಿ, ಸುಬ್ರಹ್ಮಣ್ಯ ಸಿದ್ದಿ ತಮ್ಮ ಕಂಠಸಿರಿಯ ಮೂಲಕ ಪ್ರಶಂಸೆಗೆ ಪಾತ್ರರಾದರು. ಪ್ರಾರಂಭದಲ್ಲಿ ಮನ್ವಿತಾ ಚೇತನ್ ಭಟ್ಟ ಚಿಮ್ನಳ್ಳಿ ಇವಳ ಭರತನಾಟ್ಯ ಕಾರ್ಯಕ್ರಮ ನಡೆಯಿತು.

Share this article