ಮಹಿಳೆ ಬಗ್ಗೆ ಹಗುರವಾಗಿ ಮಾತಾಡಿದ ಕುಮಾರಸ್ವಾಮಿಗೆ ಚುನಾವಣೆಯಲ್ಲಿ ತಕ್ಕಪಾಠ ಕಲಿಸಿ

KannadaprabhaNewsNetwork | Published : Apr 17, 2024 1:16 AM

ಸಾರಾಂಶ

ಕುಮಾರಸ್ವಾಮಿ ಮಾತುಗಳನ್ನು ಅರಿತ ರಾಜ್ಯದ ಮಹಿಳೆಯರು, ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ.

ಹಗರಿಬೊಮ್ಮನಹಳ್ಳಿ: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮಹಿಳೆಯರ ಬಗ್ಗೆ ಅವಹೇಳನವಾಗಿ ಹಗುರವಾಗಿ ಮಾತನಾಡಿರುವುದು ಅವರ ಚಾರಿತ್ರ್ಯ ಎಂತಹದ್ದು ಎಂಬುದು ಬಿಂಬಿತವಾಗುತ್ತಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಯಲಕ್ಷ್ಮಿ ಹೇಳಿದರು.ಪಟ್ಟಣದಲ್ಲಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೆಎಂಎಫ್ ಅಧ್ಯಕ್ಷ ಎಸ್.ಭೀಮನಾಯ್ಕ ಅವರ ಜನಸಂಪರ್ಕ ಕಚೇರಿಯಲ್ಲಿ ಕಾಂಗ್ರೆಸ್ ಮಹಿಳಾ ಘಟಕದಿಂದ ನಡೆದ ಕಾಂಗ್ರೆಸ್ ಕಾರ್ಯಕರ್ತೆಯರ ಸಭೆಯಲ್ಲಿ ಅವರು ಮಾತನಾಡಿದರು.

ಕುಮಾರಸ್ವಾಮಿ ಮಾತುಗಳನ್ನು ಅರಿತ ರಾಜ್ಯದ ಮಹಿಳೆಯರು, ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ. ಜನರಿಗೆ ಅಪಾರ ಭರವಸೆ ಹುಟ್ಟುಹಾಕಿದ್ದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎಲ್ಲ ಕ್ಷೇತ್ರಗಳಲ್ಲೂ ವಿಫಲವಾಗಿದೆ. ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ಗ್ಯಾರಂಟಿಗಳನ್ನು ಕುರಿತಂತೆ ಲೇವಡಿ ಮಾಡಿದ್ದ ಬಿಜೆಪಿಗರಿಗೆ ಇದೀಗ ಗ್ಯಾರಂಟಿಗಳ ಅನುಷ್ಠಾನದ ಮೂಲಕ ತಕ್ಕ ಉತ್ತರ ನೀಡಿದೆ. ಕಾಂಗ್ರೆಸ್ ಅಭ್ಯರ್ಥಿ ತುಕಾರಾಮ ಒಬ್ಬ ಸಜ್ಜನ ಮತ್ತು ಅಭಿವೃದ್ಧಿ ಚಿಂತನೆಯ ಪ್ರಾಮಾಣಿಕ ರಾಜಕಾರಣಿ. ಕನಿಷ್ಠ ೨ ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುವರು. ಶ್ರೀರಾಮುಲು ಈವರೆಗೂ ಜನರಿಗೆ ಸುಳ್ಳುಹೇಳುತ್ತಾ ಅಭಿವೃದ್ಧಿ ಕಡೆಗಣಿಸಿದ್ದಾರೆ. ಕಳೆದ ಬಾರಿ ರಾಜ್ಯದಿಂದ ಆಯ್ಕೆಯಾದ ಬಿಜೆಪಿ ಎಂಪಿಗಳು ನರೇಂದ್ರ ಮೋದಿ ಕೈಗೊಂಬೆಯಾಗಿ ಕಾರ್ಯನಿರ್ವಹಿಸಿದ್ದಾರೆ. ಈ ಬಾರಿ ದೇಶದಲ್ಲಿ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು.

ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸಾಹಿರಾಬಾನು ಮಾತನಾಡಿ, ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ಬಡವರ ಕಣ್ಣೀರೊರೆಸಿದ್ದಾರೆ. ಮಹಿಳೆಯರ ಬಗ್ಗೆ ಕೇವಲವಾಗಿ ಮಾತನಾಡಿರುವ ಕುಮಾರಸ್ವಾಮಿಗೆ ಮಹಿಳೆಯರೇ ತಕ್ಕಪಾಠ ಕಲಿಸಲಿದ್ದಾರೆ. ಕಾಂಗ್ರೆಸ್ ಜನಪರ ಆಡಳಿತವನ್ನು ನೋಡಿ ಬಿಜೆಪಿಗೆ ಅಸೂಯೆಯುಂಟಾಗಿದೆ ಎಂದರು.

ಇದೇ ವೇಳೆ ಮಹಿಳೆಯರನ್ನು ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಘೋಷಣೆ ಕೂಗಿದರು. ತಾಪಂ ಮಾಜಿ ಅಧ್ಯಕ್ಷೆ ಕೆ.ನಾಗಮ್ಮ, ಸುಕನ್ಯಮ್ಮ, ಚೈತನ್ಯ ತುಕಾರಾಮ, ಜುಬೇದಾ, ಲಕ್ಷ್ಮಿ, ನಜ್ಮಾ, ಭಾರತಿಬಾಯಿ, ಜ್ಯೋತಿ, ಯೋಗಲಕ್ಷ್ಮಿ ಇದ್ದರು.

Share this article