ವಿದ್ಯಾರ್ಥಿಗಳಿಗೆ ಸಂಸ್ಕಾರ ಕಲಿಸಿ ದೇಶಸೇವೆಗೆ ಅಣಿಗೊಳಿಸಿ: ಶಾಂತಾರಾಮ ಸಿದ್ದಿ

KannadaprabhaNewsNetwork |  
Published : May 30, 2024, 12:52 AM IST
ಕಾರ್ಯಕ್ರಮದಲ್ಲಿ ವನವಾಸಿ ಪ್ರಮುಖ ನಾರಾಯಣ ಕುಣಬಿ ಇಳೇಹಳ್ಳಿ ಅವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಸಮಾಜಕ್ಕೋಸ್ಕರ ಯಾವುದೇ ಆಸೆ ಆಮಿಷಗಳಿಲ್ಲದೇ ಕೆಲಸ ಮಾಡುತ್ತಿರುವ ಕಾರ್ಯ ಅಭಿನಂದನೀಯ.

ಯಲ್ಲಾಪುರ: ಸಮುದಾಯದಲ್ಲಿ ಕೆಲಸ ಮಾಡುವಾಗ ದೃಢತೆ ಬೇಕು. ಎಲ್ಲ ವಿಕಾರಗಳನ್ನು ಸಂಸ್ಕಾರದ ಮೂಲಕ ಹೊಡೆದೋಡಿಸಿ. ಸಂಸ್ಕಾರವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಿ ರಾಷ್ಟ್ರಸೇವೆಯಲ್ಲಿ ತೊಡಗಿಸಿ ಎಂದು ವನವಾಸಿ ಕಲ್ಯಾಣದ ರಾಜ್ಯ ಕಾರ್ಯದರ್ಶಿ, ರಾಷ್ಟ್ರೀಯ ಸಮಿತಿ ಸದಸ್ಯ, ಎಂಎಲ್‌ಸಿ ಶಾಂತಾರಾಮ ಸಿದ್ದಿ ಮನವಿ ಮಾಡಿದರು.

ಪಟ್ಟಣದ ಎಪಿಎಂಸಿಯ ರೈತ ಸಭಾಭವನದಲ್ಲಿ ನಡೆದ ವನವಾಸಿ ಕಲ್ಯಾಣದ ಮನೆ ಪಾಠದ ಶಿಕ್ಷಕರ ಪ್ರಾಂತ ಆಚಾರ್ಯರ ಅಭ್ಯಾಸ ವರ್ಗ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಸಮಾಜಕ್ಕೋಸ್ಕರ ಯಾವುದೇ ಆಸೆ ಆಮಿಷಗಳಿಲ್ಲದೇ ಕೆಲಸ ಮಾಡುತ್ತಿರುವ ಕಾರ್ಯ ಅಭಿನಂದನೀಯ. ಯಾವುದೇ ಬಯಕೆಗಳಿಲ್ಲದೇ ಕಾರ್ಯ ಮಾಡಿದಲ್ಲಿ ಸಮಾಜ ಗುರುತಿಸುತ್ತದೆ. ದೇಶ ನಮ್ಮದು ಎಂದುಕೊಳ್ಳುವುದಕ್ಕಿಂತ ನನ್ನದು ಅಂದುಕೊಂಡಾಗ ಕಾಳಜಿ ಹೆಚ್ಚಾಗುತ್ತದೆ ಎಂದರು.ಅಧ್ಯಕ್ಷತೆ ವಹಿಸಿದ್ದ ವಿಠ್ಠಲ ವನವಾಸಿ ವಸತಿ ಗೃಹದ ಅಧ್ಯಕ್ಷ ಟಿ.ಆರ್. ಹೆಗಡೆ ಮಾತನಾಡಿ, ದೇಶವನ್ನು ಪರಮ ವೈಭವದ ಸ್ಥಿತಿಗೆ ತರಬೇಕು ಎನ್ನುವುದು ನಮ್ಮೆಲ್ಲರ ಕನಸು ಎಂದರು.

ಮಲೆನಾಡು ಕೃಷಿ ಅಭಿವೃದ್ಧಿ ಸಹಕಾರಿ ಸಂಘದ ಅಧ್ಯಕ್ಷ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ ಮಾತನಾಡಿ, ಬೆಟ್ಟಗುಡ್ಡ ಅರಣ್ಯ ಪ್ರದೇಶದ ಮಧ್ಯೆ ಜೀವನ ಸಾಗಿಸುತ್ತಿರುವ ವನವಾಸಿಗಳನ್ನು ಮೇಲಕ್ಕೆತ್ತುವ ಕಾರ್ಯವನ್ನುಮಾಡಬೇಕು. ಅವರನ್ನು ಸಮಾಜಮುಖಿಯಾಗಿ ಮುಖ್ಯವಾಹಿನಿಗೆ ತರಬೇಕು ಎನ್ನುವ ನಿಟ್ಟಿನಲ್ಲಿ ವನವಾಸಿ ಕಲ್ಯಾಣ ಕಾರ್ಯ ನಿರ್ವಹಿಸುತ್ತಿದೆ. ಸೇವಾ ಮನೋಭಾವದಿಂದ ನೀವೆಲ್ಲ ಈ ಕೈಂಕರ್ಯದಲ್ಲಿ ಪಾಲ್ಗೊಳ್ಳುತ್ತಿರುವುದು ಹೆಮ್ಮೆಯ ವಿಷಯ ಎಂದರು.

ನಾಗರಾಜ ಮದ್ಗುಣಿ ಮಾತನಾಡಿ, ಇಡೀ ಜಗತ್ತಿನ ಮೂಲ ನಿವಾಸಿಗಳು ವನವಾಸಿಗಳು. ಜಗತ್ತಿನ ಮೊದಲ ವಿಜ್ಞಾನಿಗಳು ಸನಾತನ ಧರ್ಮದ ಭಾರತೀಯರು, ಜಗತ್ತಿನ ಮೊದಲ ಶಸ್ತ್ರಚಿಕಿತ್ಸಕರು ಭಾರತೀಯರು. ಜಗತ್ತು ಕಣ್ತೆರೆಯುವ ಮೊದಲೇ ಅನೇಕ ಸಿದ್ಧಾಂತಗಳನ್ನು ಭಾರತೀಯರು ಜಗತ್ತಿಗೆ ತೋರಿದ್ದಾರೆ ಎಂದರು.

ಲಯನ್ಸ್ ಕ್ಲಬ್ ಅಧ್ಯಕ್ಷ ಸುರೇಶ ಬೋರ್ಕರ್ ಮಾತನಾಡಿದರು. ವನವಾಸಿ ಪ್ರಮುಖ ನಾರಾಯಣ ಕುಣಬಿ ಇಳೇಹಳ್ಳಿ ಅವರನ್ನು ಸನ್ಮಾನಿಸಲಾಯಿತು. ಶಿಬಿರಾಧಿಕಾರಿ ಡಾ. ಸುಚೇತಾ ಮದ್ಗುಣಿ, ಪ್ರಮುಖರಾದ ನಾರಾಯಣ ಕುಣಬಿ, ರಾಮು ನಾಯ್ಕ, ಮಣಿವಣ್ಣನ್, ನಾರಾಯಣ ಮರಾಠೆ ವೇದಿಕೆಯಲ್ಲಿದ್ದರು. ಮಹೇಶ ಗುಂಡ್ಲುಪೇಟೆ ಸ್ವಾಗತಿಸಿದರು. ಪ್ರಾಂತ ಶಿಕ್ಷಣ ಪ್ರಮುಖ ರಾಮಚಂದ್ರಜಿ ಶಿಬಿರದ ವರದಿ ವಾಚಿಸಿದರು. ಭಾಸ್ಕರ್ ಸಿದ್ದಿ ನಿರೂಪಿಸಿದರು. ಬೊಮ್ಮು ಪಾಟೀಲ ವಂದಿಸಿದರು.

PREV

Recommended Stories

ನೀಲಿ ಮೊಟ್ಟೆ ಇಟ್ಟ ಚನ್ನಗಿರಿಯ ನಾಟಿ ಕೋಳಿ: ಸ್ಥಳೀಯರಲ್ಲಿ ತೀವ್ರ ಕುತೂಹಲ
ಸಿಗಂದೂರಿನಲ್ಲಿ ವಾಟರ್ ಏರೋಡ್ರೋಮ್: ವಿಮಾನ ಟೇಕಾಫ್‌, ಲ್ಯಾಂಡಿಂಗ್‌! ಪ್ರವಾಸೋದ್ಯಮಕ್ಕೆ ಹೊಸ ಹೆಜ್ಜೆ?