ಕನ್ನಡಪ್ರಭ ವಾರ್ತೆ ಕಲಬುರಗಿ/ಕಮಲಾಪುರ
ರಾಜ್ಯದಲ್ಲಿ ತೀವ್ರ ಬರಗಾಲ ಎದುರಾಗಿದ್ದರೂ ರೈತರಿಗೆ ಪರಿಹಾರ ನೀಡಲು ವಿಫಲವಾದ ರಾಜ್ಯ ಸರ್ಕಾರವು ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ಕೊಡುವುದಾಗಿ ಘೋಷಣೆ ಮಾಡಿದೆ. ಆದರೆ ರೈತರಿಗೆ ನಾಲ್ಕೈದು ಸಾವಿರ ಕೋಟಿ ಕೊಡಲು ಸಿದ್ದರಾಮಯ್ಯ ಸರ್ಕಾರಕ್ಕೆ ನೆನಪಾಗಲಿಲ್ಲ ಎಂದು ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.ಕಮಲಾಪುರದಲ್ಲಿ ಮಂಗಳವಾರ ರಾಂಪುರೆ ಮೈದಾನದಲ್ಲಿ ಏರ್ಪಡಿಸಿದ ಬಿಜೆಪಿ ಅಭ್ಯರ್ಥಿ ಡಾ. ಉಮೇಶ್ ಜಾಧವ್ ಪರ ಚುನಾವಣಾ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ಬರಗಾಲದಿಂದ ತತ್ತರಿಸುತ್ತಿದ್ದು ಒಟ್ಟು 800ಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೈದರೂ ಪರಿಹಾರ ನೀಡಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲದಕ್ಕೂ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡಿ ಆರೋಪ ಹೊರಿಸುತ್ತಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲ ಬರಗಾಲ ಕೂಡ ಬೆನ್ನು ಹಿಡಿದು ಬರುತ್ತದೆ. ದೇವರು ಮೆಚ್ಚುವ ಹಾಗೆ ಕೆಲಸ ಮಾಡಿದರೆ ಎಲ್ಲವೂ ಒಳ್ಳೆಯದಾಗುತ್ತದೆ ಯಡಿಯೂರಪ್ಪ ಅವರು ಅಧಿಕಾರಕ್ಕೆ ಬಂದಾಗ ಪ್ರವಾಹ ಬಂದರೂ ಸಮರ್ಥವಾಗಿ ನಿರ್ವಹಣೆ ಮಾಡಿದರು. ಪ್ರಕೃತಿ ವಿಕೋಪ ಪರಿಹಾರ ನಿಯಮದಂತೆ ಒಂದು ಮನೆಗೆ ಒಂದು ಲಕ್ಷ ನಿಗದಿಯಾಗಿದ್ದರು 5 ಲಕ್ಷ ವಿತರಿಸಿದರು. ಬೆಳೆ ಹಾನಿಯಾದರೆ ಹೆಕ್ಟರ್‌ಗೆ 14,000 ತೋಟಗಾರಿಕಾ ಬೆಳೆಗೆ 24,000 ಪರಿಹಾರ ನೀಡಿದರು. ಕೇಂದ್ರ ಸರ್ಕಾರದ ಅನುದಾನಕ್ಕೆ ಅವರು ಕಾಯಲಿಲ್ಲ. ಕಾಂಗ್ರೆಸ್ ಅಲ್ಪಸಂಖ್ಯಾತರಿಗೆ 10ಸಾವಿರ ಕೋಟಿ ಕೊಡಲು ತಯಾರಿದ್ದರೂ ಬಡ ರೈತರ ಸಂಕಷ್ಟಕ್ಕೆ ಸ್ಪಂದಿಸಿ ನಾಲ್ಕೈದು ಸಾವಿರ ಕೋಟಿ ರೂಪಾಯಿಯಾದರೂ ಕೊಡಲು ಹಿಂದೇಟು ಹಾಕುತ್ತಿದ್ದಾರೆಂದರು.ಗ್ಯಾರಂಟಿಗಳನ್ನು ಟೀಕೆ ಮಾಡುತ್ತಿಲ್ಲ ಆದರೆ ಪುಕ್ಸಟ್ಟೆ ಭಾಷಣವನ್ನು ಮಾಡಿ ಜನರ ಜೇಬಿಗೆ ಕತ್ತರಿ ಹಾಕಿ ನಾಲ್ಕು ಸಾವಿರದಿಂದ ಎಂಟು ಸಾವಿರದವರೆಗೆ ಪ್ರತಿ ತಿಂಗಳು ವಸೂಲಿ ಮಾಡಿದ ಹಣವನ್ನು ಹಂಚುತ್ತಿದ್ದಾರೆ. ಉಚಿತ ಬಸ್ ಭಾಗ್ಯ ಎಂದು ಹೇಳಿ ಪುರುಷರ ಟಿಕೆಟ್ ದರವನ್ನು ಹೆಚ್ಚಳ ಮಾಡಿ ವಸೂಲಿ ಮಾಡುತ್ತಿದ್ದಾರೆ. ಹತ್ತು ಕಿಲೋ ಅಕ್ಕಿ ಕೊಡುವುದಾಗಿ ಹೇಳಿ ಈಗ ಕೇಂದ್ರ ಸರ್ಕಾರದ ಮೋದಿ ನೀಡಿದ ಐದು ಕಿಲೋ ಅಕ್ಕಿ ಮಾತ್ರ ವಿತರಣೆ ಯಾಗುತ್ತಿದೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದಿಂದ ಅಭಿವೃದ್ಧಿ ಕುಂಠಿತವಾಗಿದ್ದು ತುಷ್ಟಿಕರಣ ರಾಜಕಾರಣದಿಂದ ಕಾನೂನು ಸುವ್ಯವಸ್ಥೆ ಪೂರ್ಣ ಹದಗೆಟ್ಟಿದೆ. ಹುಬ್ಬಳ್ಳಿಯ ನೇಹಾ ಳನ್ನು ಫಯಾಜ್ ಎಂಬ ಪಾತಕಿ ಬರ್ಬರ ಹತ್ಯೆ ಮಾಡಿದ ಘಟನೆಯನ್ನು ವೈಯಕ್ತಿಕ ಘಟನೆ ಎಂದು ಸರ್ಕಾರ ಹೇಳಿಕೆ ನೀಡಿತು. ಯಾದಗಿರಿಯಲ್ಲಿ ದಲಿತ ಯುವಕನನ್ನು ಕೊಲೆ ಮಾಡಿದ ಘಟನೆ ಇವೆಲ್ಲ ತುಷ್ಟಿ ಕರಣ ನೀತಿಗೆ ಸಾಕ್ಷಿಗಳಾಗಿವೆ. ಬೆಳಗಾವಿ ವಿಧಾನಸೌಧ ಅಧಿವೇಶನ ಸಂದರ್ಭದಲ್ಲಿ ಪಕ್ಕದಲ್ಲೇ ಮಹಿಳೆಯೊಬ್ಬಳ ವಿವಸ್ತ್ರ ಘಟನೆ ನಡೆದರರೂ ಮುಖ್ಯಮಂತ್ರಿಗಳು ಅಲ್ಲಿಗೆ ತೆರಳಿ ಆ ತಾಯಿಗೆ ಧೈರ್ಯ ಹೇಳಲಿಲ್ಲ. ಪರಿಹಾರವನ್ನು ಕೊಡಲಿಲ್ಲ . ನಾನು ಹೋಗಿ ಭೇಟಿ ಮಾಡಿ ಸಾಂತ್ವನ ಹೇಳಿದೆ ಎಂದು ದೂರಿದರು.ಭ್ರಷ್ಟಾಚಾರ ರಹಿತ ಮೋದಿ ಆಡಳಿತ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 10 ವರ್ಷಗಳ ಆಡಳಿತಾವಧಿಯಲ್ಲಿ ಒಂದೇ ಒಂದು ಭ್ರಷ್ಟಾಚಾರದ ಆರೋಪವಿಲ್ಲದೆ ಆಡಳಿತ ನೀಡಿ ದ್ದಾರೆ. ಅವರು ಮತ್ತೊಮ್ಮೆ ಪ್ರಧಾನಿಯಾಗಲು ಇಲ್ಲಿಂದ ಜಾಧವ್ ಅವರಿಗೆ ಆರಿಸಿ ಕಳುಹಿಸಬೇಕೆಂದರು.
40 ಕ್ಷೇತ್ರ ಗೆಲ್ಲಲಾಗದ ಕಾಂಗ್ರೆಸ್ ಗೆ ಮತ ನೀಡಬೇಕಾ? ಅಥವಾ 400 ಸ್ಥಾನಗಳನ್ನು ಗೆದ್ದು ಮೋದಿ ಅವರ ಜೊತೆ ಕುಳಿತು ಕೊಳ್ಳುವ ಅಭ್ಯರ್ಥಿಗೆ ಮತ ನೀಡಬೇಕಾ? ಎಂಬುದನ್ನು ಮತದಾರರು ತೀರ್ಮಾನಿಸಬೇಕಾಗಿದೆ. ಕಲ್ಬುರ್ಗಿ ಲೋಕಸಭಾ ಕ್ಷೇತ್ರದಿಂದ ಡಾ. ಉಮೇಶ್ ಜಾಧವ್ ಅವರನ್ನು ಈ ಬಾರಿ ಬಹುಮತದಿಂದ ಆರಿಸಿ ಕಳುಹಿಸಬೇಕು ಎಂದು ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ಬಿ.ವೈ ವಿಜಯೇಂದ್ರ ಲಂಬಾಣಿ ಭಾಷೆಯಲ್ಲಿ ಮಾತನಾಡುತ್ತಾ ಬಂಜಾರ ಸಮುದಾಯದ ಪವಿತ್ರ ಕ್ಷೇತ್ರ ಸೂರಗೊಂಡನ ಕೊಪ್ಪದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿದ್ದಾಗ ಹತ್ತಾರು ಕೋಟಿ ಅನುದಾನ ನೀಡಿ ಅಭಿವೃದ್ಧಿ ಕಾರ್ಯ ಕೈಗೊಂಡರು ಎಂದಾಗ ಸಭೆಯಲ್ಲಿ ಜನರು ಕರತಾಡನದೊಂದಿಗೆ ಸಂತಸ ವ್ಯಕ್ತಪಡಿಸಿದರು.
ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್, ಬೆಳ್ತಂಗಡಿ ಕ್ಷೇತ್ರದ ಶಾಸಕರಾದ ಹರೀಶ್ ಪೂಂಜ, ಶಾಸಕರಾದ ಬಸವರಾಜ ಮತ್ತಿ ಮೂಡು ವಿಧಾನ ಪರಿಷತ್ ಸದಸ್ಯರಾದ ಶಶಿಲ್ ನಮೋಶಿ, ಚಂದು ಪಾಟೀಲ್, ಬಾಬುರಾವ್ ಚೌಹಾಣ್, ಶರಣಬಸಪ್ಪ ಪಾಟೀಲ್ ಹರ್ಷವರ್ಧನ ಗುಗಳೆ ಸಿದ್ದರಾಮಯ್ಯ ಪಾಟಿಲ್ ಗೌತಮ್ ಪಾಟೀಲ್ ಶಶಿಕಲಾ ತೆಂಗಳಿ ಸಂಗಮೇಶ್ ವಾಲಿ ರಾಜಶೇಖರ್ ದೋಶೆಟ್ಟಿ ಜಗನ್ನಾಥ್ ಮಾಲಿಪಾಟೀಲ್ ಶಿವಕುಮಾರ್ ರಾಜಕುಮಾರ್ ಕೋಟಿ, ತಮ್ಮೇಗೌಡ ಗಂಗಪ್ಪ ಗೌಡ, ಸುರೇಶ್ ಬಾಬು ಹನುಮಂತ್ ರಾವ್ ಮಾಲಾಜಿ, ಶರಣು ತಳ್ಳಿಕೆರೆ ಜಯಶ್ರೀ ಮತ್ತಿಮುಡು ಮತ್ತಿತರರು ಉಪಸ್ಥಿತರಿದ್ದರು.ಕಮಲ ಗುರುತಿಗೆ 25 ಸಾವಿರ ಮುನ್ನಡೆ ಖಚಿತ: ಕಲ್ಬುರ್ಗಿ ಗ್ರಾಮೀಣ ಮತಕ್ಷೇತ್ರವು ಬಿಜೆಪಿಯ ಅತ್ಯಂತ ಬಲಿಷ್ಠ ಕ್ಷೇತ್ರವಾಗಿದ್ದು 2019ರಲ್ಲಿ ಬಿಜೆಪಿಗೆ 20,000 ಮತಗಳ ಮುನ್ನಡೆ ನೀಡಿದ್ದು 2023ರಲ್ಲಿ ಶಾಸಕನಾಗಿ ನನಗೆ 13000 ಮತಗಳ ಮುನ್ನಡೆ ನೀಡಿ ಗೆಲ್ಲಿಸಿದ್ದಾರೆ. 2024ರಲ್ಲಿ 25 ಸಾವಿರ ಮತಗಳ ಮುನ್ನಡೆಯನ್ನು ಕಮಲದ ಗುರುತು ಪಡೆಯಲಿದೆ ಎಂದು ಶಾಸಕ ಬಸವರಾಜ್ ಮತ್ತಿಮುಡು ಭರವಸೆ ನೀಡಿದರು.
ಕ್ಷೇತ್ರದ ಜನತೆ ಸದಾ ಬಿಜೆಪಿಯನ್ನು ಬೆಂಬಲಿಸುತ್ತಿದ್ದು ಜನರ ಪೂರ್ಣ ಸಹಕಾರದಿಂದ ನಮ್ಮ ಅಳಿಯ ಹಾಗೂ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರಿಗೆ ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಒಂದುವರೆ ಲಕ್ಷ ಮತಗಳ ಅಂತರದಿಂದ ಕಾಂಗ್ರೆಸ್ಸನ್ನು ಸೋಲಿಸುವುದು ಖಚಿತ ಎಂದು ಜನಸ್ತೋಮದ ಕರತಾಂಡದೊಂದಿಗೆ ಹೇಳಿದರು.ದೇಶ ವ್ಯಾಪಿ 36 ರೈಲು ಬಿಟ್ಟರೂ ಕಲ್ಬುರ್ಗಿಯಿಂದ ಬಿಡಲಿಲ್ಲವಲ್ಲ: ಕಾಂಗ್ರೆಸ್ ಸುಳ್ಳು ಹೇಳುವುದರಲ್ಲಿ ನಿಸ್ಸೀಮವಾಗಿದ್ದು ಮಲ್ಲಿಕಾರ್ಜುನ ಖರ್ಗೆಯವರು ರೈಲ್ವೆ ಖಾತೆಯ ಸಚಿವರಾಗಿದ್ದಾಗ ದೇಶಾದ್ಯಂತದ 36 ರೈಲು ಬಿಟ್ಟರೂ ಕಲಬುರ್ಗಿಯಿಂದ ಒಂದೇ ಒಂದು ರೈಲು ನಿಮಗೆ ಬಿಡಲಾಗಲಿಲ್ಲವಲ್ಲ ಎಂದು ಸಂಸದ ಡಾ. ಉಮೇಶ್ ಜಾಧವ್ ತಿರುಗೇಟು ನೀಡಿದರು. ಎರಡು ರೈಲು ಬಿಟ್ಟಿದ್ದನ್ನು ಸಾಧನೆ ಎನ್ನುತಿದ್ದಾರೆ, ನಾನು 36 ರೈಲುಗಳನ್ನು ಬಿಟ್ಟಿದ್ದೇನೆ ಎಂದು ಹೇಳಿಕೆ ನೀಡಿದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ತಿರುಗೇಟು ನೀಡಿ, ದೇಶ ವ್ಯಾಪಿ 36 ರೈಲು ಬಿಟ್ಟರೂ ಕಲ್ಬುರ್ಗಿಯ ಜನತೆಗಾಗಿ ಒಂದೇ ಒಂದು ರೈಲು ಬಿಡಲು ನಿಮ್ಮಿಂದ ಯಾಕೆ ಸಾಧ್ಯವಾಗಲಿಲ್ಲ. ಸ್ವಾತಂತ್ರ್ಯ ನಂತರ ವಂದೇ ಭಾರತ್ ಸೇರಿದಂತೆ ಎರಡು ರೈಲುಗಳನ್ನು ಕಲ್ಬುರ್ಗಿಯಿಂದ ಆರಂಭಿಸಿದ ಹೆಗ್ಗಳಿಕೆ ಬಿಜೆಪಿಗೆ ಸಲ್ಲುತ್ತದೆ ಎಂದರು.
ಇಬ್ಬರು ಉಸ್ತುವಾರಿ ಸಚಿವರುಗಳು ಕಲ್ಬುರ್ಗಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಉಸಿರುಗಟ್ಟಿ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಹಿಂದುಳಿದವರ ಮೀಸಲಾತಿಯನ್ನು ಕಡಿತಗೊಳಿಸಿ ಅಲ್ಪಸಂಖ್ಯಾತರಿಗೆ ನೀಡಲು ಹುನ್ನಾರ ನಡೆಸಿದೆ. ಈ ಬಗ್ಗೆ ಕಾಂಗ್ರೆಸ್ ಸ್ಪಷ್ಟನೆ ನೀಡಬೇಕು. ಕಾಂಗ್ರೆಸ್‌ನವರು ಒಂದು ಸುಳ್ಳನ್ನು 10 ಬಾರಿ ಹೇಳಿದರೆ ನಿಜವಾಗುತ್ತದೆ ಎಂಬ ಒಣ ಭ್ರಮೆಯಲ್ಲಿದ್ದಾರೆ. ಮೋದಿ ಕೊಡುಗೆ ಏನು? ಜಾಧವ್ ಕೊಡುಗೆ ಏನು? ಎಂಬ ಪ್ರಶ್ನೆಯನ್ನು ಎತ್ತುವ ಕಾಂಗ್ರೆಸಿಗರಿಗೆ ಎಸಿಸಿ ಶಹಾಬಾದ್, ಕುರುಕುಂಟಾದ ಸಿಸಿಐ ಕಾರ್ಖಾನೆ, ಎಂಎಸ್‌ಕೆ ಮಿಲ್ ಮುಚ್ಚಿದ್ದು ನೆನಪಾಗುವುದಿಲ್ಲವೇ? ಬೆಣ್ಣೆ ತೋರಾ, ಎಡದಂಡೆ ಮತ್ತು ಬಲದಂಡೆ ಯೋಜನೆಯಲ್ಲಿ 200 ರಿಂದ 300 ಕೋಟಿ ರುಪಾಯಿಯ ಕಳಪೆ ಕೆಲಸ ಮಾಡಿದರೂ ರೈತರ ಹೊಲಗಳಿಗೆ ನೀರು ಹರಿಸಲಾಗದ ಭ್ರಷ್ಟ ಕಾಂಗ್ರೆಸ್ ಆಡಳಿತದ ಬಗ್ಗೆ ಮಾತನಾಡುತ್ತಿಲ್ಲ. ಐದು ವರ್ಷಗಳ ನನ್ನ ಅವಧಿಯಲ್ಲಿ ಎರಡು ವರ್ಷ ಕರೋನದಿಂದ ಕಳೆದು ಹೋದರೂ ಕೇವಲ ಮೂರು ವರ್ಷಗಳಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ ಎಂದರು.