ಯುವಪೀಳಿಗೆಗೆ ಜಾನಪದದ ಮಹತ್ವ ತಿಳಿಸಿ

KannadaprabhaNewsNetwork | Published : Mar 10, 2025 12:15 AM

ಸಾರಾಂಶ

ಆನಂದಪುರ: ಆಧುನಿಕತೆಯ ಅಬ್ಬರದಲ್ಲಿ ಜನಮನದಿಂದ ಮರೆಯಾಗುತ್ತಿರುವ ಜಾನಪದವನ್ನು ಉಳಿಸುವ ನಿಟ್ಟಿನಲ್ಲಿ ಅವರ ಮಹತ್ವ ಮತ್ತು ಅಗತ್ಯವನ್ನು ಇಂದಿನ ಯುವಪೀಳಿಗೆಗೆ ತಿಳಿಸುವ ಕೆಲಸವಾಗಬೇಕಾಗಿದೆ ಎಂದು ಮೈಸೂರಿನ ಜಾನಪದ ವಿದ್ವಾಂಸ ಪ್ರೊ.ಕಾಳೇಗೌಡ ನಾಗವಾರ ತಿಳಿಸಿದರು.

ಆನಂದಪುರ: ಆಧುನಿಕತೆಯ ಅಬ್ಬರದಲ್ಲಿ ಜನಮನದಿಂದ ಮರೆಯಾಗುತ್ತಿರುವ ಜಾನಪದವನ್ನು ಉಳಿಸುವ ನಿಟ್ಟಿನಲ್ಲಿ ಅವರ ಮಹತ್ವ ಮತ್ತು ಅಗತ್ಯವನ್ನು ಇಂದಿನ ಯುವಪೀಳಿಗೆಗೆ ತಿಳಿಸುವ ಕೆಲಸವಾಗಬೇಕಾಗಿದೆ ಎಂದು ಮೈಸೂರಿನ ಜಾನಪದ ವಿದ್ವಾಂಸ ಪ್ರೊ.ಕಾಳೇಗೌಡ ನಾಗವಾರ ತಿಳಿಸಿದರು.

ಸಮೀಪದ ಚನ್ನಶೆಟ್ಟಿ ಕೊಪ್ಪ ಗ್ರಾಮದಲ್ಲಿ ಭಾನುವಾರ ಜಿಲ್ಲಾ ಜಾನಪದ ಪರಿಷತ್, ತಾಲೂಕು ಜಾನಪದ ಪರಿಷತ್, ಹೋಬಳಿ ಜಾನಪದ ಪರಿಷತ್ ಸಂಯುಕ್ತ ಆಶ್ರಯದಲ್ಲಿ ಚೆನ್ನಮ್ಮಾಜಿ ಜಾನಪದ ಕಲಾ ಸಂಘ ಚನ್ನಶೆಟ್ಟಿ ಕೊಪ್ಪ ಅವರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಶಿವಮೊಗ್ಗ ಜಿಲ್ಲಾಮಟ್ಟದ 6ನೇ ಜಾನಪದ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದಿನ ಜಾನಪದ ಕಲೆಗಳು ಆಧುನಿಕತೆಯ ಅಬ್ಬರದಲ್ಲಿ ಮರೆಯಾಗುತ್ತಿವೆ. ಗ್ರಾಮೀಣ ಭಾಗದ ಜನಸಾಮಾನ್ಯರ ಬಾಯಿಂದ ಬಾಯಿಗೆ ಬರುವಂತಹ ಜಾನಪದವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಜಾನಪದ ಕಲಾ ಸಂಘಗಳು ಮುಂದಾಗಬೇಕು ಎಂದು ಕರೆ ನೀಡಿದರು.ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಇಂದಿನ ಪಾಶ್ಚಿಮಾತ್ಯ ಸಂಸ್ಕೃತಿಗೆ ಯುವ ಜನಾಂಗ ಆಕರ್ಷಿತರಾಗುತ್ತಿರುವುದು ವಿಷಾದನೀಯ. ಇಂತಹ ಸಂದರ್ಭದಲ್ಲಿ ಜಾನಪದ ಕಲೆ ಉಳಿಸಿಕೊಳ್ಳುವುದು ಕಷ್ಟಕರವಾಗಿದೆ. ನಮ್ಮ ಗ್ರಾಮೀಣ ಭಾಗದ ಸೊಗಡಿನ ಜಾನಪದ ಕಲೆ ಉಳಿಸಿ ಬೆಳೆಸಬೇಕಾದರೆ ಹೆಚ್ಚು ಹೆಚ್ಚು ಜಾನಪದ ಸಮ್ಮೇಳನಗಳು ನಡೆಯಬೇಕು ಎಂದರು.

ಗ್ರಾಮೀಣ ಭಾಗದ ಜಾನಪದ ಕಲೆಗಳಾದ ಸುಗ್ಗಿ ಹಾಡು, ಮದುವೆ ಹಾಡು, ಬೀಸುವ ಕಲ್ಲಿನ ಹಾಡು, ಅಂಟಿಕೆ ಪಿಂಟಿಕೆ, ನಾಟಕಗಳು ಜೀವಂತವಾಗಿದ್ದರೂ ಪ್ರೋತ್ಸಾಹ ಸಿಗದೇ ತೆರೆಮರೆಯಲ್ಲಿ ಹಾಗೆ ಸೊರಗುತ್ತಿವೆ. ರಾಜ್ಯ ಸರ್ಕಾರಗಳು ಜಾನಪದ ಸಾಹಿತ್ಯ ಸಮ್ಮೇಳನಕ್ಕೆ ಅನುದಾನಗಳನ್ನು ನೀಡುವುದರ ಮೂಲಕ ಇನ್ನೂ ಹೆಚ್ಚು ಹೆಚ್ಚು ಜಾನಪದ ಸಮ್ಮೇಳನಗಳು ಗ್ರಾಮೀಣ ಭಾಗದಲ್ಲಿ ನಡೆಯುವಂತೆ ಶ್ರಮಿಸುವ ಅನಿವಾರ್ಯತೆ ಇದೆ ಎಂದು ಹೇಳಿದರು.ಜಿಪಂ ಸದಸ್ಯ ರತ್ನಾಕರ ಹೊನಗೋಡು ಮಾತನಾಡಿ, ಗ್ರಾಮೀಣ ಭಾಗದ ಜಾನಪದ ಕಲೆಗಳು ಅವನತಿಯ ಹಂತದಲ್ಲಿವೆ. ಇವುಗಳ ಪೋಷಣೆ ನಮ್ಮೆಲ್ಲರ ಹೊಣೆಯಾಗಿದೆ. ಮುಂದಿನ ಯುವ ಪೀಳಿಗೆಗೆ ನಮ್ಮ ಜಾನಪದ ಸಂಸ್ಕೃತಿ ಉಳಿಸಿ ಬೆಳೆಸಬೇಕಾಗಿದೆ. ನಮ್ಮ ಪೂರ್ವಜರು ಜಾನಪದ ಕಲೆಯನ್ನೇ ಜೀವಳವಾಗಿಟ್ಟುಕೊಂಡು ಬದುಕು ಸಾಧಿಸುತ್ತಿದ್ದರು. ನಾಟಿ ಮಾಡುವ ಹಾಡು, ಗೀಗಿ ಪದ, ಸೇರಿದಂತೆ ಅನೇಕ ಜಾನಪದ ಕಲೆಗಳು ಮರೆಯಾಗುತ್ತಿವೆ. ಜಾನಪದ ಕಲೆಗಳ ಉಳಿವಿಗಾಗಿ ನಾವುಗಳು ಇಂತಹ ಜಾನಪದ ಸಮ್ಮೇಳನವನ್ನು ಮಾಡುವುದರ ಮೂಲಕ ಜನಪದ ಕಲೆಯನ್ನು ಪ್ರೋತ್ಸಾಹಿಸಬೇಕಾದ ಅವಶ್ಯಕತೆ ಇದೆ ಎಂದರು.ಸರ್ವಾಧ್ಯಕ್ಷರಾದ ಬಿ.ಟಾಕಪ್ಪ ಕಣ್ಣೂರು ಮಾತನಾಡಿ, ಜಾನಪದ ಕಲೆಗಳು ಉಳಿಯಬೇಕಾದರೆ ಸರ್ಕಾರ ಜಾನಪದ ಕಲಾವಿದರಿಗೆ ಹೆಚ್ಚಿನ ಸಹಕಾರ ನೀಡಬೇಕು. ಇಂತಹ ಕಲೆ ಉಳಿಯಬೇಕಾದರೆ ಜಾನಪದ ಕಲಾವಿದರಿಗೆ ಮಾಶಾಸನದ ಜೊತೆಯಲ್ಲಿ ಇತರೆ ಸೌಲಭ್ಯಗಳನ್ನು ಒದಗಿಸಬೇಕಾಗಿದೆ. ಸರ್ಕಾರ ಜಾನಪದ ಕಲಾವಿದರನ್ನು ಹೆಚ್ಚಿನ ಸಂಖ್ಯೆಯಲ್ಲಿ ಗುರುತಿಸಿ ಪ್ರಶಸ್ತಿಗಳ ಮೂಲಕ ಗೌರವಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಜಾನಪದ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಮಂಜುನಾಥ್ ಪ್ರಾಸ್ತವಿಕವಾಗಿ ಮಾತನಾಡಿದರು.

ಚೆನ್ನಮ್ಮಾಜಿ ಜಾನಪದ ಕಲಾಸಂಘದ ಹುರುಳಿ ಜಯಪ್ಪ ಅಧ್ಯಕ್ಷತೆ ವಹಿಸಿದ್ದರು.

ಸಿಗಂದೂರು ಚೌಡೇಶ್ವರಿ ದೇವಾಲಯದ ಧರ್ಮದರ್ಶಿ ಡಾ.ರಾಮಪ್ಪ, ಶಿಕಾರಿಪುರದ ಲಾವಣಿ ಕಲಾವಿದ ಬೇಗೂರು ಶಿವಪ್ಪ, ಉಪಾಧ್ಯಕ್ಷ ಚೌಡಪ್ಪ ವರದ ಮೂಲ, ಸದಸ್ಯರಾದ ಶರತ್ ನಾಗಪ್ಪ, ಆನಂದ ಹರಟೆ, ಶಾರದಮ್ಮ, ಕರ್ನಾಟಕ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಸತ್ಯನಾರಾಯಣ ಸಿರವಂತೆ, ಜ್ಯೋತಿಕೋವಿ, ಕೆ.ಹಾಲಪ್ಪ, ಚೌಡಪ್ಪ, ನಾಗಪ್ಪ ಮತ್ತಿತರರಿದ್ದರು.

ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರನ್ನು ಹಾಗೂ ಉದ್ಘಾಟಕರನ್ನು ವಿವಿಧ ಜಾನಪದ ಕಲಾತಂಡದೊಂದಿಗೆ ಗ್ರಾಮದ ಮುಖ್ಯ ರಸ್ತೆಯಲ್ಲಿ ಮೆರವಣಿಗೆಯ ಮೂಲಕ ವೇದಿಕೆಗೆ ಕರೆ ತರಲಾಯಿತು.

Share this article