ರಾಂ ಅಜೆಕಾರು ಕಾರ್ಕಳ : ಶಿಕ್ಷಕ ವೃತ್ತಿಯ ಜತೆಗೆ ಕೃಷಿಯಲ್ಲೂ ವಿಶಿಷ್ಟ ಸಾಧನೆ ಮಾಡಿರುವ ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಮುರತಂಗಡಿಯ ಅಸ್ಮಾ ಬಾನು ಅವರಿಗೆ ಮತ್ತೊಂದು ರಾಷ್ಟ್ರೀಯ ಗೌರವ ಒಲಿದು ಬಂದಿದೆ. ಅಪರೂಪದ ದೇಶಿ ಭತ್ತದ ತಳಿಗಳ ಸಂರಕ್ಷಣೆ ಮತ್ತು ಕೃಷಿ ವೈವಿಧ್ಯತೆಯ ಉಳಿವಿಗಾಗಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ, ಕೇಂದ್ರ ಸರ್ಕಾರದ ‘ಪ್ಲಾಂಟ್ ಜಿನೋಮ್ ಸೇವಿಯರ್ ಫಾರ್ಮರ್ ರೆಕಗ್ನಿಷನ್’ ರಾಷ್ಟ್ರೀಯ ಪ್ರಶಸ್ತಿಗೆ ಅವರು ಆಯ್ಕೆಯಾಗಿದ್ದಾರೆ. ನ.12ರಂದು ನವದೆಹಲಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಕೆಲವು ತಳಿಗಳಿಂದ ಆರಂಭವಾದ ಇವರ ಕೃಷಿ ಪಯಣ ಇಂದು ಸಾವಿರಕ್ಕೂ ಅಧಿಕ ಭತ್ತದ ತಳಿಗಳ ಸಂಗ್ರಹ ಮತ್ತು ಸಂರಕ್ಷಣೆಯ ಹಂತಕ್ಕೆ ತಲುಪಿದೆ. ಸುಮಾರು 1,580ಕ್ಕೂ ಹೆಚ್ಚು ವೈವಿಧ್ಯಮಯ ಭತ್ತದ ತಳಿಗಳನ್ನು ಬೆಳೆಸಿ ಸಂರಕ್ಷಿಸುತ್ತಿರುವುದು ಇವರ ಸಾಧನೆಯ ವಿಶೇಷ. ಇದರಲ್ಲಿ 50ಕ್ಕೂ ಹೆಚ್ಚು ಕುಚಲಕ್ಕಿ ತಳಿಗಳೂ ಸೇರಿವೆ. ಕಪ್ಪು ಅಕ್ಕಿಯ ಭತ್ತ, ಸುಗಂಧಭತ್ತದ ಗಂಧಸಾಲೆ, ಕೆಂಪಕ್ಕಿಯ ರಕ್ತಶಾಲಿ ಸೇರಿದಂತೆ ಹಲವು ಅಪರೂಪದ ತಳಿಗಳನ್ನು ಸಾವಯವ ಪದ್ಧತಿಯಲ್ಲಿ ಬೆಳೆಸುತ್ತಿದ್ದಾರೆ.
ಪಾಳುಬಿದ್ದ ಹಾಗೂ ಗುತ್ತಿಗೆ ಪಡೆದ ಜಮೀನುಗಳನ್ನು ಕೃಷಿಗೆ ಬಳಸಿಕೊಂಡು, ರಾಸಾಯನಿಕ ಗೊಬ್ಬರಗಳಿಂದ ದೂರವಿದ್ದು ಸಾವಯವ ಕೃಷಿಗೆ ಆದ್ಯತೆ ನೀಡುತ್ತಿದ್ದಾರೆ. ಕೊಯ್ಲಿನ ಬಳಿಕ ಬೀಜಗಳನ್ನು ಸಂಗ್ರಹಿಸಿ ಮುಂದಿನ ಬೆಳೆಗೆ ಬಳಸುವುದರ ಜತೆಗೆ ಆಸಕ್ತ ರೈತರಿಗೂ ಹಂಚುತ್ತಿದ್ದಾರೆ. ಹೀಗೆ ನಶಿಸುತ್ತಿರುವ ಸಾಂಪ್ರದಾಯಿಕ ಭತ್ತದ ತಳಿಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯದಲ್ಲಿ ತೊಡಗಿದ್ದಾರೆ.ಇವರ ಕೃಷಿ ಸಾಧನೆಗೆ ಈಗಾಗಲೇ ಹಲವು ಗೌರವಗಳು ಸಂದಿವೆ. ಕನ್ನಡಪ್ರಭ ಹಾಗೂ ಏಷ್ಯಾನೆಟ್ ಕೊಡಮಾಡುವ ‘ರೈತ ರತ್ನ’ ಪ್ರಶಸ್ತಿ, ಕುಂದಾಪುರ ಅಪ್ಪಣ್ಣ ಹೆಗ್ಡೆ ಕೃಷಿ ಪ್ರಶಸ್ತಿ, ಜಿಲ್ಲಾ ಮಟ್ಟದ ಉತ್ತಮ ರೈತ ಪ್ರಶಸ್ತಿ, ''''''''''''''''ಸೂಪರ್ ಸ್ಟಾರ್ ರೈತ'''''''''''''''' ಗೌರವ, ಸೀಡ್ ಎಸ್‌ಸಿ 2025 ಪ್ರಶಸ್ತಿ ಹಾಗೂ ನೇಷನ್ ಬಿಲ್ಡರ್ ಅವಾರ್ಡ್ ಸೇರಿದಂತೆ ವಿವಿಧ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ, ಶೃಂಗೇರಿ ಮಠ ಹಾಗೂ ಉಡುಪಿ ಶ್ರೀಕೃಷ್ಣ ಮಠದಿಂದಲೂ ಗೌರವಕ್ಕೆ ಪಾತ್ರರಾಗಿದ್ದಾರೆ.