ಕಲಿಕೆಯ ಹಸಿವು ಹೆಚ್ಚಿಸಿದ ಕಲ್ಲೋಳಿ ಮೇಷ್ಟ್ರಗೆ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ

KannadaprabhaNewsNetwork |  
Published : Sep 05, 2025, 01:01 AM IST
ಬಿ.ಜಿ.ಕಲ್ಲೋಳಿ | Kannada Prabha

ಸಾರಾಂಶ

ಪ್ರೊಜೆಕ್ಟರ್‌ ಹಾಗೂ ಇನ್‌ಟ್ರಾಕ್ಟಿವ್‌ ಡಿಜಿಟಲ್ ಬೋರ್ಡ್‌ ಮೂಲಕ ಸ್ಮಾರ್ಟ್‌ಕ್ಲಾಸ್‌ ಕಲಿಕೆಗೆ ಒತ್ತು ನೀಡುವ ಮೂಲಕ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿಗೆ ಪಾತ್ರರಾಗಿರುವರು ಗೋಕಾಕ ತಾಲೂಕಿನ ಗುಂದಕಲ್ಲ ಮುರಿತೋಟ (ಬೆಣಚಿನಮರಡಿ) ಸಹ ಶಿಕ್ಷಕರಾದ ಬಿ.ಜಿ.ಕಲ್ಲೋಳಿ.

ಭೀಮಶಿ ಭರಮಣ್ಣವರ

ಕನ್ನಡಪ್ರಭ ವಾರ್ತೆ ಗೋಕಾಕ

ಪ್ರೊಜೆಕ್ಟರ್‌ ಹಾಗೂ ಇನ್‌ಟ್ರಾಕ್ಟಿವ್‌ ಡಿಜಿಟಲ್ ಬೋರ್ಡ್‌ ಮೂಲಕ ಸ್ಮಾರ್ಟ್‌ಕ್ಲಾಸ್‌ ಕಲಿಕೆಗೆ ಒತ್ತು ನೀಡುವ ಮೂಲಕ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿಗೆ ಪಾತ್ರರಾಗಿರುವರು ಗೋಕಾಕ ತಾಲೂಕಿನ ಗುಂದಕಲ್ಲ ಮುರಿತೋಟ (ಬೆಣಚಿನಮರಡಿ) ಸಹ ಶಿಕ್ಷಕರಾದ ಬಿ.ಜಿ.ಕಲ್ಲೋಳಿ.

2019 ರಿಂದ ಗೋಕಾಕ ತಾಲೂಕಿನ ಗುಂದಕಲ್ಲ ಮುರಿತೋಟ (ಬೆಣಚಿನಮರಡಿ)ಯಲ್ಲಿ ಸಹಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಇವರು, ಗೈರಾಗುವ ವಿದ್ಯಾರ್ಥಿಗಳ ಮನೆ ಮನೆಗೆ ಭೇಟಿ ನೀಡಿ ವಿದ್ಯಾರ್ಥಿ ಹಾಗೂ ಪಾಲಕ ಮನವೊಲಿಕೆ ಮಾಡಿದ್ದಲ್ಲದೇ ಗೈರಾದ ಮಕ್ಕಳಿಗಾಗಿಯೇ ವಿಶೇಷ ಕಲಿಕೋಪಕರಣಗಳನ್ನು ನೀಡಿ ಅವರಲ್ಲಿ ಕಲಿಯುವ ಹಸಿವು ಮೂಡಿಸಿದ್ದಾರೆ. 17 ವರ್ಷಗಳ ಕಾಲ ಸೇವೆಯಲ್ಲಿ 3.4 ವರ್ಷ ಸಿಆರ್‌ಪಿ (ಸಮೂಹ ಸಂಪನ್ಮೂಲ ವ್ಯಕ್ತಿ)ಯಾಗಿ ಕಾರ್ಯನಿರ್ವಹಣೆಯಲ್ಲಿ ತಮ್ಮ ಅಧಿಕಾರ ವ್ಯಾಪ್ತಿಗೆ ಬರುವ ಶಾಲೆಗಳಲ್ಲಿ ಸ್ಮಾರ್ಟ್‌ಕ್ಲಾಸ್‌ಗೆ ಹೆಚ್ಚು ಒತ್ತು ನೀಡುವ ಮೂಲಕ ತಂತ್ರಜ್ಞಾನ ಬಳಕೆಯ ಮೂಲಕ ಕಲಿಕೆಗೆ ಹೆಚ್ಚು ಒತ್ತು ನೀಡಿದ್ದರು.2010ರಲ್ಲಿ ಗೋಕಾಕ ತಾಲೂಕಿನ ಕನಸಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಯಾದರು. ಇಲ್ಲಿ ಮಕ್ಕಳ ಗೈರು ಹಾಜರಿಯೇ ಒಂದು ಸಮಸ್ಯೆಯಾಗಿತ್ತು. ಆಗ ಮಕ್ಕಳ ಮನೆ ಭೇಟಿ ನೀಡಿ ಪಾಲಕರ ಮನವೊಲಿಸಿ ಶಾಲೆಗೆ ಗೈರು ಆಗದಂತೆ ನೋಡಿಕೊಂಡಿದ್ದರು. ಗೈರಾದ ಮಕ್ಕಳಿಗೆ ವಿಶೇಷವಾಗಿ ಕಲಿಕೋಪಕರಣಗಳನ್ನು ನೀಡಿರುವುದೇ ಹಾಜರಾತಿ ಹೆಚ್ಚಳಕ್ಕೆ ಕಾರಣವಾಯಿತು. ಕ್ರೀಡಾ ಚಟುವಟಿಕೆಗೆ ಪ್ರೋತ್ಸಾಹ ನೀಡುತ್ತಿರುವ ಕಲ್ಲೋಳಿ ಮೇಷ್ಟ್ರುಕಬಡ್ಡಿ ಸೇರಿದಂತೆ ಜೂಡೋ ಆಟದಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದವರೆಗೆ ವಿದ್ಯಾರ್ಥಿಗಳು ಸ್ಫರ್ಧಿಸಿ ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ.

ಶಾಲೆ ಬಿಟ್ಟ ಮಕ್ಕಳಿಗೆ ಶಾಲಾ ಭಾಗ್ಯ!

ಸಾಮಾಜಿಕ ಪಿಡುಗಾದ ಬಾಲ್ಯವಿವಾಹದಿಂದ ಅರ್ಧದಲ್ಲೇ ಶಾಲೆ ಬಿಡುವ ಮಕ್ಕಳ ಕುಟುಂಬಗಳಿಗೆ ಭೇಟಿ ನೀಡಿ ಮಕ್ಕಳ ವಿದ್ಯಾಭ್ಯಾಸದ ಸಂದರ್ಭದಲ್ಲಿ ಮಕ್ಕಳಿಗೆ ವಿವಾಹ ಮಾಡಿಸುವುದು ತಪ್ಪು ಎಂದು ಹೇಳಿ ಮತ್ತೆ ಮಕ್ಕಳು ಶಾಲೆಗೆ ಬರುವಂತೆ ಪ್ರೇರೇಪಿಸಿದರು.ಸುಮಾರು 3 ವರ್ಷ 4 ತಿಂಗಳ ಕಾಲ ಸಿಆರ್‌ಪಿ (ಸಮೂಹ ಸಂಪನ್ಮೂಲ್‌ ವ್ಯಕ್ತಿ)ಯಾಗಿ ಕಾರ್ಯನಿರ್ವಹಿಸಿರುವ ಕಲ್ಲೋಳಿ ಮೇಷ್ಟ್ರು ತಮ್ಮ ಅಧಿಕಾರ ಅವಧಿಯಲ್ಲಿ ಸ್ಮಾರ್ಟ್‌ಕ್ಲಾಸ್‌ಗೆ ಹೆಚ್ಚು ಒತ್ತು ಕೊಟ್ಟಿರುವುದಕ್ಕೆಕೊಳವಿ, ಖನಗಾಂವ, ಮೇಲ್ಮನಹಟ್ಟಿ ಸರ್ಕಾರಿ ಶಾಲೆಯ ಕಲಿಕಾಮಟ್ಟ ಇತರ ಶಾಲೆಗಿಂತ ಹೆಚ್ಚಾಗಿದ್ದು, ಶೈಕ್ಷಣಿಕ ಸಾಧನೆಗೆ ಪ್ರೇರಣೆಯಾಗಿದೆ. ಹೂಲಿಕಟ್ಟಿ, ಹಣಮಾಪೂರ ಶಾಲೆಯಲ್ಲಿ ಎಜುಶ್ಯಾಟ್ ಮತ್ತು ರೇಡಿಯೋ ಪಾಠಗಳ ಅಳವಡಿಕೆಯಲ್ಲಿ ಕಲ್ಲೋಳಿಯವರ ಪಾತ್ರ ಪ್ರಮುಖ.ಹಸಿರು ನಾಡಿಗಾಗಿ ಸುಮಾರು 800 ಸಸಿಗಳನ್ನು ಶಾಲಾ ಆವರಣದಲ್ಲಿ ನೆಟ್ಟಿದ್ದಾರೆ. ಮಕ್ಕಳಲ್ಲಿ ಶಿಸ್ತು, ಶಾಲಾ ದಾಖಲಾತಿ ಹೆಚ್ಚಿಸಲು ಏಕರೂಪದ ಟೀ-ಶರ್ಟ್ ಮತ್ತು ಪ್ಯಾಂಟ್‌ಗಳ ವಿತರಣೆ, ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್, ನೋಟ್‌ಬುಕ್, ಪೆನ್, ಕಂಪಾಸ್, ವರ್ಕ್‌ಬುಕ್, ಸ್ಕೆಲ್, ಫೌಚ್, ಕಲರ್ ಪೆನ್ಸ್ ಮುಂತಾದ ಶೈಕ್ಷಣಿಕ ಪರಿಕರಗಳು ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಖಾಸಗಿ ಸಂಘ-ಸಂಸ್ಥೆಗಳ ಸಹಾಯ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಶಾಲಾ ಮಕ್ಕಳಿಗಾಗಿ ಕಣ್ಣು ತಪಾಸಣಾ ಶಿಬಿರ ಹಾಗೂ ಕನ್ನಡಕ ವಿತರಣೆ ಸೇರಿದಂತೆ ವಿದ್ಯಾರ್ಥಿಗಳ ಆರೋಗ್ಯ ಕಾಳಜಿ ವಹಿಸಿದ್ದು ಕೂಡ ಎಲ್ಲರ ಮೆಚ್ಚುಗೆ ಪಾತ್ರವಾಗಿದೆ.

ಸಮಾಜ ನಿರ್ಮಾಣದಲ್ಲಿ ಶಿಕ್ಷಕನ ಪಾತ್ರ ಬಹಳ ಪ್ರಮುಖವಾದುದು. ಮಕ್ಕಳಿಗೆ ಸತತವಾಗಿ ಸಂಪರ್ಕ ಮತ್ತು ಅವರಲ್ಲಿ ಶೈಕ್ಷಣಿಕವಾಗಿ ಆಸಕ್ತಿ ಮೂಡಿಸಿ ಜ್ಞಾನದ ಹಸಿವು ಮೂಡಿಸುವುದು ಬಹಳ ಮುಖ್ಯವಾಗಿರುತ್ತದೆ. ಇದೊಂದು ಪವಿತ್ರ ವೃತ್ತಿ ಧರ್ಮ ಇಂಥಹ ವೃತ್ತಿಗೆ ಸೇರಿದ ನಾವು ಪ್ರತಿ ಹಂತದಲ್ಲಿವೂ ನಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕಾಗತ್ತದೆ. ಪ್ರೀತಿಯಿಂದ ಈ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಲು ನನ್ನ ತಂದೆ-ತಾಯಿಗಳ ಸದಾಶೀರ್ವಾದ ಮತ್ತು ನನ್ನ ನೆಚ್ಚಿನ ಗುರುಗಳೇ ಪ್ರಮುಖ ಕಾರಣೀಕರ್ಥರು. ಅವರಿಗೆ ನಾನು ಸದಾ ಋಣಿಯಾಗಿದ್ದೇನೆ.

-ಬಿ.ಜಿ.ಕಲ್ಲೋಳಿ,

ಸಹ ಶಿಕ್ಷಕರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಗುಂಡಕಲ್ಲ ಮುರಿತೋಟ (ಬೆ).

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು