ಡುಮ್ಮಿ ಎಂದು ಹೀಳಾಯಿಸಿದ ಪತಿ: ನೇಣು ಬಿಗಿದುಕೊಂಡು ಶಿಕ್ಷಕಿ ಸಾವು

KannadaprabhaNewsNetwork |  
Published : May 18, 2024, 01:41 AM ISTUpdated : May 18, 2024, 08:09 AM IST
ಆತ್ಮಹತ್ಯೆ | Kannada Prabha

ಸಾರಾಂಶ

ತನ್ನನ್ನು ಡುಮ್ಮಿ ಎಂದು ಪತಿ ಹೀಯಾಳಿಸಿ ಗಲಾಟೆ ಮಾಡುತ್ತಿದ್ದರಿಂದ ಬೇಸತ್ತು ಖಾಸಗಿ ಪ್ರೌಢ ಶಾಲೆ ಶಿಕ್ಷಕಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಸವೇಶ್ವರನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

 ಬೆಂಗಳೂರು :  ತನ್ನನ್ನು ಡುಮ್ಮಿ ಎಂದು ಪತಿ ಹೀಯಾಳಿಸಿ ಗಲಾಟೆ ಮಾಡುತ್ತಿದ್ದರಿಂದ ಬೇಸತ್ತು ಖಾಸಗಿ ಪ್ರೌಢ ಶಾಲೆ ಶಿಕ್ಷಕಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಸವೇಶ್ವರನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಂಜುನಾಥ ನಗರದ ನಿವಾಸಿ ಸಂಧ್ಯಾ (31) ಮೃತ ದುರ್ದೈವಿ. ಮನೆಯಲ್ಲಿ ಗುರುವಾರ ಸಂಜೆ ನೇಣು ಬಿಗಿದುಕೊಂಡು ಸಂಧ್ಯಾ ಆತ್ಮಹತ್ಯೆ ಯತ್ನಿಸಿದ್ದಾರೆ. ತಕ್ಷಣವೇ ಆಕೆಯನ್ನು ರಕ್ಷಿಸಿ ಸಮೀಪದ ಆಸ್ಪತ್ರೆಗೆ ಕುಟುಂಬದವರು ಕರೆದೊಯ್ದಿದು ದಾಖಲಿಸಿದ್ದಾರೆ. ಆದರೆ ಆ ವೇಳೆಗೆ ಸಂಧ್ಯಾ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಐದು ವರ್ಷಗಳ ಹಿಂದೆ ಸಂಧ್ಯಾ ಹಾಗೂ ಜಯಪ್ರಕಾಶ್ ವಿವಾಹವಾಗಿದ್ದು, ಈ ದಂಪತಿಗೆ ನಾಲ್ಕು ವರ್ಷದ ಗಂಡು ಮಗುವಿದೆ. ಬಸವೇಶ್ವರನಗರ ಸಮೀಪ ಶಾಲೆಯಲ್ಲಿ ಅವರು ಶಿಕ್ಷಕಿಯಾಗಿದ್ದರು. ಆ ಮಗುವಿಗೆ ತೀವ್ರ ಅನಾರೋಗ್ಯ ಸಮಸ್ಯೆ ಉಂಟಾಗಿತ್ತು. ಇನ್ನು ಮಗನ ವೈದ್ಯಕೀಯ ಚಿಕಿತ್ಸೆಗೆ ದಂಪತಿ ಸಾಕಷ್ಟು ಹಣ ವ್ಯಯಿಸಿದ್ದರು. ಇದೇ ವಿಚಾರವಾಗಿ ಸಂಧ್ಯಾ ಮತ್ತು ಜಯಪ್ರಕಾಶ್ ಮಧ್ಯೆ ಮನಸ್ತಾಪವಾಗಿತ್ತು ಎನ್ನಲಾಗಿದೆ.

ಇದಾದ ಬಳಿಕ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾಗ ಸಂಧ್ಯಾ ಅವರಿಗೆ ಗರ್ಭಪಾತವಾಯಿತು. ಇದರಿಂದ ದೈಹಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಿ ಅ‍ವರು ದಪ್ಪವಾಗಿದ್ದರು. ತರುವಾಯ ಸಣ್ಣಪುಟ್ಟ ವಿಚಾರಗಳಿಗೆ ಜಗಳ ತೆಗೆದು ಪತ್ನಿ ಮೇಲೆ ಜಯಪ್ರಕಾಶ್ ಗಲಾಟೆ ಮಾಡುತ್ತಿದ್ದರು. ಅಲ್ಲದೆ ಪತ್ನಿಯನ್ನು ಡುಮ್ಮಿ ಎಂದು ಆತ ಹೀಯಾಳಿಸುತ್ತಿದ್ದ. ಈ ಬೆಳವಣೆಗೆಯಿಂದ ಮನನೊಂದ ಸಂಧ್ಯಾ ಅವರು, ಗುರುವಾರ ಸಂಜೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಘಟನೆ ಸಂಬಂಧ ಮೃತರ ತಂದೆ ನೀಡಿದ ದೂರಿನ ಮೇರೆಗೆ ಮೃತ ಪತಿ ಜಯಪ್ರಕಾಶ್‌, ಅತ್ತೆ ರಾಜೇಶ್ವರಿ, ಅಜ್ಜಿ ಚಂದ್ರಮ್ಮ ವಿರುದ್ಧ ಬಸವೇಶ್ವನಗರ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಆರೋಪದಡಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

PREV