)
ಕನ್ನಡಪ್ರಭ ವಾರ್ತೆ ಜಮಖಂಡಿ
ಇತ್ತೀಚೆಗೆ ಆಲಬಾಳ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳು ಶಾಲೆ ಪಕ್ಕದ ಚರಂಡಿ ನೀರಿನಲ್ಲಿ ಊಟದ ತಟ್ಟೆ ತೊಳೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಮಾಧ್ಯಮಗಳಲ್ಲೂ ಸುದ್ದಿ ಪ್ರಕಟವಾಗಿ ರಾಜ್ಯಾದ್ಯಂತ ಸದ್ದು ಮಾಡಿತ್ತು. ಶುಕ್ರವಾರ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸುಂಬೆ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಶಿಕ್ಷಕಿ ವಿರುದ್ಧ ಕ್ರಮಕ್ಕೆ ಸೂಚನೆ ನೀಡಿದ್ದರು. ಸಾಮಾಜಿಕ ಜಾಲತಾಣ, ಮಾಧ್ಯಮಗಳ ವರದಿ ಆಧರಿಸಿ ಕರ್ನಾಟಕ ನಾಗರಿಕ ಸೇವಾ ಅಧಿನಿಯಮ 1957 ನಿಯಮ 10(01) ರ ಅಡಿಯಲ್ಲಿ ಕರ್ತವ್ಯ ನಿರ್ಲಕ್ಷ್ಯಕ್ಕೆ ಕಾರಣ ಕೇಳಿ ನೀಡಿದ್ದ ನೋಟಿಸ್ ಗೆ ಸಮರ್ಪಕ ಉತ್ತರ ನೀಡದ ಹಿನ್ನೆಲೆ ಅಮಾನತು ಕ್ರಮ ಕೈಗೊಳ್ಳಲಾಗಿದೆ.
ನ್ಯಾಯಾಧೀಶರ ಭೇಟಿ:ವಿದ್ಯಾರ್ಥಿಗಳು ಚರಂಡಿ ನೀರಲ್ಲಿ ತಟ್ಟೆ ತೊಳೆದಿದ್ದಾರೆಂಬ ಆರೋಪದ ಹಿನ್ನೆಲೆ ಆಲಬಾಳ ಗ್ರಾಮದ ಸರ್ಕಾರಿ ಶಾಲೆಗೆ ಜಮಖಂಡಿಯ ಪ್ರಧಾನ ಹಿರಿಯ ನ್ಯಾಯಾಧೀಶ ರಾಜಶೇಖರ್ ಹರಸೂರು ಭೇಟಿ ನೀಡಿ ಪರಿಶೀಲಿಸಿ ಶಿಕ್ಷಕರಿಂದ ಮಾಹಿತಿ ಪಡೆದರು. ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಬಸಣ್ಣವರ್ ಉಪಸ್ಥಿತರಿದ್ದರು.
ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಆಲಬಾಳ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳು ಊಟ ಮಾಡಿದ ತಟ್ಟೆಯನ್ನು ಕೊಳಚೆ ನೀರಿನಲ್ಲಿ ತೊಳೆದ ಪ್ರಕರಣ ಯಾರ ನಿರ್ಲಕ್ಷ್ಯದಿಂದ ಆಗಿದೆ ಅವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಇಲಾಖೆಯ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಇಂತಹ ಪ್ರಕರಣಗಳ ಬಗ್ಗೆ ಮುಖ್ಯ ಶಿಕ್ಷಕರು, ಎಸ್‌ಡಿಎಂಸಿಯವರು ಎಚ್ಚರ ವಹಿಸಬೇಕು. ಇನ್ನು ಮುಂದೆ ರಾಜ್ಯದ ಯಾವುದೇ ಶಾಲೆಗಳ ಅಕ್ಕ ಪಕ್ಕ ತೆರೆದ ಕೊಳಚೆ ನೀರಿನ ಸಂಪರ್ಕ, ಹರಿವು ಇರದಂತೆ ನೋಡಿಕೊಳ್ಳಲು ಸೂಚಿಸಲಾಗುವುದು. ಈ ಸಂಬಂಧ ಗ್ರಾಪಂ ಸೇರಿ ಇತರೆ ಸ್ಥಳೀಯ ಸಂಸ್ಥೆಗಳು ಕ್ರಮ ವಹಿಸಬೇಕು, ಇಲ್ಲದಿದ್ದರೆ ಶಾಲೆಯಿಂದಲೇ ಕ್ರಮ ವಹಿಸಲಾಗುವುದು ಎಂದು ಇದೇ ವೇಳೆ ಸಚಿವರು ಉತ್ತರಿಸಿದರು.