ದೇಶದ ಬೆಳೆವಣಿಗೆಗೆ ಶಿಕ್ಷಕರು ಪ್ರಮುಖ: ಬಿ.ಜಿ.ಅನಂತಶಯನ

KannadaprabhaNewsNetwork | Published : Jul 2, 2025 11:48 PM
ಜಾನಪದ ಪರಿಷತ್ತು ಕೊಡಗು ಜಿಲ್ಲಾ ಅಧ್ಯಕ್ಷ ಬಿ.ಜಿ.ಅನಂತಶಯನ ಅಭಿಪ್ರಾಯ | Kannada Prabha

ದೇಶದ ರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಸೈನಿಕರ ಮಾದರಿಯಲ್ಲಿ ದೇಶದ ಬೆಳವಣಿಗೆಗೆ ಶಿಕ್ಷಕರು ಕೂಡ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಗಣ್ಯರು ತಿಳಿಸಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ದೇಶದ ರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಸೈನಿಕರ ಮಾದರಿಯಲ್ಲಿ ದೇಶದ ಬೆಳೆವಣಿಗೆಗೆ ಶಿಕ್ಷಕರು ಕೂಡ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಕರ್ನಾಟಕ ಜಾನಪದ ಪರಿಷತ್ತು ಕೊಡಗು ಜಿಲ್ಲಾ ಅಧ್ಯಕ್ಷ ಬಿ.ಜಿ.ಅನಂತಶಯನ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಕುಶಾಲನಗರ ಸಮೀಪದ ಗುಮ್ಮನಕೊಲ್ಲಿ ಮೂಕಾಂಬಿಕಾ ಅನುದಾನಿತ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸುದೀರ್ಘವಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಮುಖ್ಯೋಪಾಧ್ಯಾಯ ಸೂದನ ಎಸ್.ಗೋಪಾಲ ಅವರಿಗೆ ಸೋಮವಾರ ಆಯೋಜಿಸಿದ್ದ ಗೌರವ ಅಭಿನಂದನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಶಿಕ್ಷಕ ವೃತ್ತಿ ಪವಿತ್ರವಾದ ವೃತ್ತಿಯಾಗಿದ್ದು, ಪ್ರತಿಯೊಬ್ಬರೂ ಗೌರವ ಸಲ್ಲಿಸಬೇಕು. ಗೋಪಾಲ್ ಅವರು ಉತ್ತಮವಾಗಿ ಸೇವೆ ಸಲ್ಲಿಸುವ‌ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿ ಅವರ ಭವಿಷ್ಯವನ್ನು ರೂಪಿಸಿದ್ದಾರೆ. ಮಕ್ಕಳ ಭವಿಷ್ಯಕ್ಕೆ ಅಡಿಪಾಯವೇ ಶಿಕ್ಷಕರಾಗಿದ್ದಾರೆ ಎಂದರು.

ವಯೋನಿವೃತ್ತಿ ವೃತ್ತಿಯಲ್ಲಿ ಕೊನೆ ಆಗಬಹುದೇ ಹೊರತು ಪ್ರವೃತ್ತಿಯಲ್ಲಿ ಅಲ್ಲ ಎಂದರು.

ಪ್ರತಿಯೊಬ್ಬರು ಪ್ರೀತಿ, ಗೌರವದಿಂದ ಕಾಣುವ ಹೃದಯ ಶ್ರೀಮಂತಿಕೆಯನ್ನು ಗಳಿಸುವುದು ಕಷ್ಟಕರವಾಗಿದ್ದು, ಅಂತಹ ಗುಣವನ್ನು ಎಲ್ಲರೂ ಹೃದಯದಲ್ಲಿ ತುಂಬಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಗೋಪಾಲ್‌ ಅವರು ಸುದೀರ್ಘವಾದ ಸೇವೆ ಸಲ್ಲಿಸುವ ಮೂಲಕ ಶಾಲೆಯ ವಾತಾವರಣದೊಂದಿಗೆ ಭಾವನಾತ್ಮಕ ಸಂಬಂಧ ಬೆಳೆಸಿಕೊಂಡಿದ್ದಾರೆ. ಅವರ

ಬುದುಕಿನ‌ ಅರ್ಧದಷ್ಡು ವಯಸ್ಸನ್ನು ಶಾಲೆಯಲ್ಲಿ ಕಳೆದಿದ್ದಾರೆ.

ವೃತ್ತಿ ಬಗ್ಗೆ ಗೌರವ ಪ್ರೀತಿ ಇಟ್ಟುಕೊಂಡು. ಧನ್ಯತೆ ಭಾವನೆ ಮೂಡಿಸಿದೆ. ಆರೋಗ್ಯಪೂರ್ಣ ಸಮಾಜ ಕಟ್ಟಲು ಇಂತಹ ವ್ಯಕ್ತಿಗಳು ಬಹಳ ಅವಶ್ಯಕವಾಗಿದ್ದು, ಸಮಾಜ ಅಂತಹ ವ್ಯಕ್ತಿಗಳನ್ನು ಗೌರವಿಸಬೇಕು ಎಂದರು. ಮಕ್ಕಳು ತಂದೆ ತಾಯಿಗಳನ್ನು ಹಗುರವಾಗಿ ಕಾಣಬಾರದು, ಗೌರವ ಪ್ರೀತಿಯಿಂದ ಕಾಣಬೇಕು ಎಂದು ಗೋಪಾಲ್ ಅವರ ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದರು.

ವಿನಾಯಕ ವಿದ್ಯಾಸಂಸ್ಥೆ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭ ಕೂಡಿಗೆ ಡಯಟ್ ಉಪನ್ಯಾಸಕಿ ಬಿ.ಎನ್.ಪುಷ್ಪಾ, ಮೂಕಾಂಬಿಕಾ ಪಿಯು ಕಾಲೇಜು ಪ್ರಾಂಶುಪಾಲ ಪ್ರಸನ್ನ, ನಿವೃತ್ತ ಸಿಬ್ಬಂದಿ ಪಾರ್ವತಿ, ಪ್ರಭಾರ ಮುಖ್ಯ ಶಿಕ್ಷಕ ಸುರೇಶ್, ಶಿಕ್ಷಕರಾದ ಪ್ರತಾಪ್ ಮತ್ತಿತರರು ಉಪಸ್ಥಿತರಿದ್ದರು.

ಎಸ್ ಎಸ್ ಗೋಪಾಲ್ ಅವರಿಗೆ ಅಭಿನಂದನೆ :

ಮೂಕಾಂಬಿಕಾ ಪ್ರೌಢಶಾಲೆ ಮುಖ್ಯ ಶಿಕ್ಷಕ ಸೂದನ ಸುಬ್ಬಯ್ಯ ಗೋಪಾಲ್ ಮತ್ತು ಪತ್ನಿ ದೇವಕಿ ಗೋಪಾಲ್ ಅವರಿಗೆ ಶಾಲಾ ಆಡಳಿತ ಮಂಡಳಿ ಪರವಾಗಿ

ಕೆ.ಪಿ.ಚಂದ್ರಕಲಾ ಅವರು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಿದರು. ನಂತರ ಜಿಲ್ಲಾ ಜಾನಪದ ಪರಿಷತ್ತು, ಜಿಲ್ಲಾ ಅನುದಾನಿತ ಪ್ರೌಢಶಾಲಾ ಶಿಕ್ಷಕರ ಸಂಘ, ಹಳೆಯ ವಿದ್ಯಾರ್ಥಿ ಸಂಘ ಸೇರಿದಂತೆ ಕುಶಾಲನಗರದ ವಿವಿಧ ಸಂಘಸಂಸ್ಥೆಗಳು ಗೋಪಾಲ್ ಅವರನ್ನು ಸನ್ಮಾನಿಸಿ ಗೌರವಿಸಿದರು.