ಮನಸ್ಸಿನ ಒತ್ತಡ ನಿವಾರಣೆಗೆ ಶಿಬಿರಗಳು ಸಹಕಾರಿ

KannadaprabhaNewsNetwork | Published : Apr 11, 2025 12:33 AM

ಸಾರಾಂಶ

ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಂದ ಹೊರಬರಲು ಮಾನಸಿಕ ದೃಢತೆ ಮುಖ್ಯ.

ಕನ್ನಡಪ್ರಭ ವಾರ್ತೆ ಮೈಸೂರುಮನಸ್ಸಿನ ಒತ್ತಡ ನಿವಾರಣೆಗೆ ಶಿಬಿರಗಳು ಸಹಕಾರಿಯಾಗಲಿವೆ ಎಂದು ಮೈಸೂರಿನ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತ ಎ. ದೇವರಾಜು ಹೇಳಿದರು.ಸುತ್ತೂರು ಶ್ರೀಕ್ಷೇತ್ರದಲ್ಲಿ ಶಿಕ್ಷಕರ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಸ್ತುತ ದಿನಮಾನದಲ್ಲಿ ಜನರ ಬದುಕು ಅತ್ಯಂತ ಒತ್ತಡದಿಂದ ಕೂಡಿದೆ. ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಂದ ಹೊರಬರಲು ಮಾನಸಿಕ ದೃಢತೆ ಮುಖ್ಯ. ಈ ರೀತಿಯ ಶಿಬಿರಗಳಲ್ಲಿ ಭಾಗವಹಿಸುವುದರಿಂದ ಒತ್ತಡ ನಿವಾರಣೆಯಾಗಿ, ನೆಮ್ಮದಿ ಮತ್ತು ಶಾಂತಿ ಲಭಿಸುತ್ತದೆ. ಶಿಕ್ಷಕರಾದವರು ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ, ಬೆಂಬಲಿಸಿ ಬೆಳೆಸಬೇಕು ಎಂದು ತಿಳಿಸಿದರು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಇಂದಿನ ಯುಗವು ಅವಕಾಶಗಳ ಯುಗವಾಗಿದೆ. ಈ ಅವಕಾಶಗಳನ್ನು ಬಳಸಿಕೊಳ್ಳುವ ಪಾಠವನ್ನು ಶಿಕ್ಷಕರು ವಿದ್ಯಾರ್ಥಿಗಳಿಗೆ ಕಲಿಸಬೇಕು. ಉತ್ತಮ ಸಮಾಜ ನಿಜವಾದ ನಿರ್ಮಾತೃಗಳಾದ ಶಿಕ್ಷಕರ ಜೀವನ ವಿದ್ಯಾರ್ಥಿಗಳಿಗೆ ಆದರ್ಶಮಯ ಮತ್ತು ಮಾದರಿಯಾಗಬೇಕು. ಈ ನಿಟ್ಟಿನಲ್ಲಿಯೇ ಶಿಕ್ಷಕರಿಗೆ ಪುನಶ್ಚೇತನ ಶಿಬಿರಗಳು ಪ್ರೇರಣೆಯಾಗಿವೆ ಎಂದರು.ಕರ್ನಾಟಕ ಪಠ್ಯಪುಸ್ತಕ ಸಂಘದ ಶಾಲಾ ಶಿಕ್ಷಣ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕಿ ಎಚ್.ಎಂ. ಪ್ರೇಮಾ ಅವರು ಹಿಂದಿನ ಕಾಲದಲ್ಲಿ ನೈತಿಕ ಶಿಕ್ಷಣವನ್ನು ಕಥೆ ಕವನಗಳ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸುತ್ತಿದ್ದರು. ಇಂದಿನ ತಂತ್ರಜ್ಞಾನ ಯುಗದಲ್ಲಿ ಅತಿಯಾದ ಪಾಶ್ಚ್ಯಾತ್ಯ ಸಂಸ್ಕೃತಿಯ ಅನುಕರಣಿಯಿಂದ ಭಾರತೀಯ ಮೌಲ್ಯಗಳು ಕಳೆದುಹೋಗುತ್ತಿವೆ. ಎಷ್ಟೇ ಜ್ಞಾನ ಸಂಪಾದಿಸಿದರೂ ಚಾರಿತ್ರ್ಯವಿಲ್ಲದಿದ್ದರೆ ಅದರಿಂದ ಏನೂ ಪ್ರಯೋಜನವಾಗುವುದಿಲ್ಲ. ಶಿಕ್ಷಕರು ಉತ್ತಮ ಆಲೋಚನೆಗಳನ್ನು ಮಗುವಿನಲ್ಲಿ ಬೆಳೆಯುವಂತೆ ಪ್ರೇರೇಪಿಸಬೇಕು. ಈ ರೀತಿಯ ಶಿಬಿರಗಳನ್ನು ಏರ್ಪಡಿಸಿ ಜೆಎಸ್ಎಸ್ ಸಂಸ್ಥೆಯು ಮಾದರಿಯಾಗಿದೆ ಎಂದು ತಿಳಿಸಿದರು.ಮೈಸೂರು ವಿಶ್ವವಿದ್ಯಾನಿಲಯದ ಗಣಕಯಂತ್ರ ವಿಭಾಗದ ಮುಖ್ಯಸ್ಥ ಡಾ. ಡಿ.ಎಸ್. ಗುರು ಅವರು ಮಂಗನಿಂದ ಮಾನವನಾಗಲು ನಮಗೆ ಸಹಸ್ರಾರು ಶತಮಾನಗಳೇ ಬೇಕಾಯಿತು. ಯಾವುದೇ ಬದಲಾವಣೆಯಾಗಬೇಕಾದರೆ ಅದಕ್ಕೆ ಹೆಚ್ಚಿನ ಸಮಯದ ಅವಶ್ಯಕತೆ ಇರುತ್ತದೆ. ನಾವು ನಮ್ಮ ಪೂರ್ವಜರ ಜ್ಞಾನ ಮಟ್ಟವನ್ನು ಪ್ರಶಂಶಿಸಬೇಕು. ಬದುಕು ಕಟ್ಟಿಕೊಳ್ಳಲು ಧನಾತ್ಮಕವಾಗಿ ಆಲೋಚಿಸಬೇಕು. ಶಿಕ್ಷಣದಲ್ಲಿ ಕೃತಕ ಬುದ್ಧಿಮತ್ತೆಯು ಅನೇಕ ಬದಲಾವಣೆಗಳನ್ನು ತಂದಿದೆ. ಅದಕ್ಕೆ ಶಿಕ್ಷಕರು ಹೊಂದಿಕೊಂಡು ಅದಕ್ಕೆ ತಕ್ಕಂತೆ ಬೋಧನೆ ಮಾಡಬೇಕು ಎಂದು ತಿಳಿಸಿದರು.ನಿವೃತ್ತ ಶಿಕ್ಷಕರು ಹಾಗೂ ರಾಜ್ಯ ಸಂಪನ್ಮೂಲ ವ್ಯಕ್ತಿ ಎಚ್. ಶಿವಣ್ಣ ಇಂದುವಾಡಿಯವರು ಬೋಧನೆಯಲ್ಲಿ ಚಲನಶೀಲತೆ ಇರಬೇಕು. ಪ್ರಸ್ತುತ ದಿನಗಳಲ್ಲಿ ಮಕ್ಕಳು ಮೊಬೈಲ್, ಕ್ರಿಕೆಟ್ ಮುಂತಾದ ಕಡೆ ಆಕರ್ಷಿಸಲ್ಪಡುತ್ತಿದ್ದಾರೆ. ವ್ಯಾಸಂಗದ ಕಡೆ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಹಾಗಾಗಿ ಶಿಕ್ಷಕರು ತರಗತಿಯಲ್ಲಿರುವ ಪ್ರತಿಯೊಬ್ಬ ವಿದ್ಯಾರ್ಥಿಯ ಭಿನ್ನ ಸಾಮರ್ಥ್ಯಗಳನ್ನು ಅರಿತು ಪ್ರೋತ್ಸಾಹಿಸಬೇಕು ಎಂದರು.

ಶೈಲಜಾ, ಎಚ್.ಎಂ. ಚೇತನ್ ಕುಮಾರ್, ರಾಜಶೇಖರ್, ಗೌರಾಂಭಿಕ, ಧನಂಜಯ, ಟಿ. ಯಲ್ಲಪ್ಪ ಅವರು ಶಿಬಿರದ ಕುರಿತು ಅವರ ಅನಿಸಿಕೆಯನ್ನು ಹಂಚಿಕೊಂಡರು. ಎನ್. ರಮೇಶ್ ಅವರು ಶಿಬಿರದ ವರದಿ ಮಂಡಿಸಿದರು.ಎನ್. ಪ್ರದೀಪ್ ಕುಮಾರ್ ಪ್ರಾರ್ಥಿಸಿದರು. ಎಚ್.ಎನ್. ಅಶೋಕ್ ಸ್ವಾಗತಿಸಿದರು. ಸೌಮ್ಯ ವಂದಿಸಿದರು. ಸಿ.ಎಂ. ಯೋಗೀಶ್ ನಿರೂಪಿಸಿದರು.

Share this article