ಶಿಕ್ಷಕರೇ, ಮಕ್ಕಳಿಗೆ ಶಿಸ್ತು ಕಲಿಸಬೇಕು: ಶಾಸಕ ಕೆ.ಎಂ.ಉದಯ್

KannadaprabhaNewsNetwork | Published : Feb 18, 2024 1:37 AM

ಸಾರಾಂಶ

ಶಿಕ್ಷಕ ವೃತ್ತಿ ಪವಿತ್ರವಾದದ್ದು ಎಲ್ಲರಿಗೂ ಶಿಕ್ಷಕ ವೃತ್ತಿ ಸಿಗುವುದಿಲ್ಲ. ಶಿಕ್ಷಕ ವೃತ್ತಿ ಸಿಕ್ಕಿದ ನಂತರ ಮನ ಪೂರ್ವಕವಾಗಿ ವಿದ್ಯೆ ಕಲಿಸುವ ಕೆಲಸ ಮಾಡಬೇಕು. ಸರ್ಕಾರಿ ಶಾಲೆಗಳನ್ನು ಉನ್ನತಿಕರಿಸಲು ನನ್ನ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ. ಉದಯ್ ಚಾರಿಟೇಬಲ್ ಟ್ರಸ್ಟ್ ಹಾಗೂ ನಾನು ಶಾಸಕನಾಗಿ ಏನೆಲ್ಲ ಅಭಿವೃದ್ಧಿ ಕಾರ್ಯ ಮಾಡಬಹುದು ಅದನ್ನು ಮಾಡುತ್ತೇನೆ.

ಕನ್ನಡಪ್ರಭ ವಾರ್ತೆ ಮದ್ದೂರು

ಶಿಕ್ಷಕರು ಮಕ್ಕಳಿಗೆ ಮೊದಲು ಶಿಸ್ತು ಕಲಿಸುವ ಸಂಕಲ್ಪ ಮಾಡಬೇಕು ಎಂದು ಶಾಸಕ ಕೆ.ಎಂ.ಉದಯ್ ಹೇಳಿದರು.

ಪಟ್ಟಣದ ಗುರುಭವನದಲ್ಲಿ ಶನಿವಾರ ತಾಲೂಕಿಗೆ ನೂತನವಾಗಿ ಆಯ್ಕೆಯಾಗಿರುವ ಜಿಪಿಟಿ ಹಾಗೂ ವರ್ಗಾವಣೆಯಾಗಿ ಬಂದಿರುವ ಶಿಕ್ಷಕರಿಗೆ ಆಯೋಜಿಸಿದ್ದ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಕರು ಮೊದಲು ಶಿಸ್ತಿನ ಸಿಪಾಯಿಗಳಾಗಬೇಕು. ಆ ಮೂಲಕ ಮಕ್ಕಳಿಗೆ ಶಿಸ್ತನ್ನು ಕಲಿಸಿದರೆ ಅದೇ ದೊಡ್ಡ ಸಾಧನೆ. ಬಾಲ್ಯದಲ್ಲೇ ಶಿಸ್ತಿನ ಜೀವನ ಮೈಗೂಡಿಸಿಕೊಳ್ಳುವಂತೆ ಮಕ್ಕಳನ್ನು ಪ್ರೇರೇಪಿಸಬೇಕು. ಆಗ ಮಕ್ಕಳು ಉತ್ತಮ ಸಾಧನೆ ಮಾಡಲು ಸಾಧ್ಯ ಎಂದರು.

ಶಿಕ್ಷಕರು ಸಂಬಳ ಪಡೆಯುವುದಕ್ಕಾಗಿ ಮಾತ್ರ ಕೆಲಸ ಮಾಡದೆ ಮಕ್ಕಳ ಭವಿಷ್ಯವನ್ನು ರೂಪಿಸುವುದಕ್ಕಾಗಿ ಕೆಲಸ ಮಾಡಬೇಕು. ಆ ಕೆಲಸದಲ್ಲಿ ಬದ್ಧತೆ ಇರಬೇಕು. ಮಕ್ಕಳ ಶಿಕ್ಷಣದಲ್ಲಿ ಬದಲಾವಣೆ ತರಬೇಕು ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರ ತರುವ ಕೆಲಸವನ್ನು ಶಿಕ್ಷಕರು ಮಾಡಬೇಕು ಎಂದರು.

ಶಿಕ್ಷಕ ವೃತ್ತಿ ಪವಿತ್ರವಾದದ್ದು ಎಲ್ಲರಿಗೂ ಶಿಕ್ಷಕ ವೃತ್ತಿ ಸಿಗುವುದಿಲ್ಲ. ಶಿಕ್ಷಕ ವೃತ್ತಿ ಸಿಕ್ಕಿದ ನಂತರ ಮನ ಪೂರ್ವಕವಾಗಿ ವಿದ್ಯೆ ಕಲಿಸುವ ಕೆಲಸ ಮಾಡಬೇಕು. ಸರ್ಕಾರಿ ಶಾಲೆಗಳನ್ನು ಉನ್ನತಿಕರಿಸಲು ನನ್ನ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ. ಉದಯ್ ಚಾರಿಟೇಬಲ್ ಟ್ರಸ್ಟ್ ಹಾಗೂ ನಾನು ಶಾಸಕನಾಗಿ ಏನೆಲ್ಲ ಅಭಿವೃದ್ಧಿ ಕಾರ್ಯ ಮಾಡಬಹುದು ಅದನ್ನು ಮಾಡುತ್ತೇನೆ ಎಂದರು.

ಈ ವೇಳೆ ಬಿಇಒ ಸಿ.ಎಚ್.ಕಾಳಿರಯ್ಯ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಸ್.ದೇವರಾಜು, ಕ್ಷೇತ್ರ ಸಮನ್ವಯ ಅಧಿಕಾರಿ ಹನುಮಶೆಟ್ಟಿ, ಶಿಕ್ಷಣಾಧಿಕಾರಿ ಲೋಕೇಶ್, ನಿವೃತ ಶಿಕ್ಷಕ ಲೋಕೇಶ್, ಶಿಕ್ಷಕರ ಸಂಘದ ವಿವಿಧ ಸಂಘಗಳ ಮುಖ್ಯಸ್ಥರಾದ ರವಿಕುಮಾರ್, ಉದಯ್, ಶಿವಲಿಂಗೇಗೌಡ, ಮಲ್ಲಿಕ್, ಜೋಗಿಗೌಡ, ಯೋಗಾನಂದ, ಪ್ರೇಮ, ಕವಿತಾ, ಕಿರಣ್, ತಿಮ್ಮೇಶ, ಶಿವಣ್ಣ ಹಾಗೂ ತಿಮ್ಮೇಗೌಡ ಇದ್ದರು.ಬಜೆಟ್ ಸರ್ವ ಜನಾಂಗಕ್ಕೂ ಆಸರೆ: ಕೆ.ಎಂ.ಉದಯ್

ಮದ್ದೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಸರ್ವ ಜನಾಂಗಕ್ಕೂ ಆಸರೆಯಾಗಿದೆ ಎಂದು ಶಾಸಕ ಕೆ.ಎಂ.ಉದಯ್ ಪ್ರಶಂಸೆ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಬಜೆಟ್‌ನಲ್ಲಿ ತಾಲೂಕಿನ ಕೆಮ್ಮಣ್ಣುನಾಲೆಯ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದೆ. ಜಿಲ್ಲೆಗೆ ಹೊಸ ಕಾರ್ಖಾನೆ ಸ್ಥಾಪಿಸಲು ಉಲ್ಲೇಖಿಸಲಾಗಿದೆ. ಕೃಷಿ ವಿಶ್ವವಿದ್ಯಾನಿಲಯ ದೊರೆತಿದೆ ಇಂತಹ ಶಾಶ್ವತ ಕಾರ್ಯಕ್ರಮಗಳ ಜತೆಗೆ ಜನಪರವಾದ ಬಜೆಟ್ ಅನ್ನು ನಮ್ಮ ಸರ್ಕಾರ ಅವಧಿಯಲ್ಲಿ ನೀಡಿದೆ ಎಂದು ಶ್ಲಾಘಿಸಿದರು.

ನಾವು ಮಣ್ಣಿನ ಮಕ್ಕಳು. ಬಂದು ಹೋಗುವವರು ಯಾರು ಕೂಡ ಮಂಡ್ಯ ಜಿಲ್ಲೆಗೆ ಶಾಶ್ವತ ಕಾರ್ಯಕ್ರಮಗಳನ್ನು ಇದುವರೆಗೆ ಯಾರು ಮಾಡಿರಲಿಲ್ಲ. ನಾವು ಅಧಿಕಾರಕ್ಕೆ ಬಂದ ಆರು ತಿಂಗಳಲ್ಲಿ ಮಂಡ್ಯ ಜಿಲ್ಲೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಸಂಕಲ್ಪ ಮಾಡಿದ್ದೇವೆ. ಜನಪರ ಬಜೆಟ್ ಅನ್ನು ಸಹಿಸದವರು ಇಲ್ಲಸಲ್ಲದ ಟೀಕೆ ಮಾಡುತ್ತಿದ್ದಾರೆ. ಟೀಕೆ ಮಾಡುವವರಿಗೆಲ್ಲ ನಾವು ಉತ್ತರ ಕೊಡುವುದಿಲ್ಲ ಎಂದರು.

Share this article