ಕನ್ನಡಪ್ರಭ ವಾರ್ತೆ ಅರಸೀಕೆರೆ
ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಬಡ್ತಿಗೆ ಸಂಬಂಧಿಸಿದಂತೆ 2017ರಲ್ಲಿ ರೂಪಿತಗೊಂಡಿರುವ ಹೊಸ ವೃಂದ ಮತ್ತು ನೇಮಕಾತಿ ನಿಯಮಗಳನ್ನು 2016ಕ್ಕಿಂತ ಮುನ್ನ ನೇಮಕಾತಿಯಾದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪೂರ್ವಾನ್ವಯಗೊಳಿಸಬಾರದು, 2016 ಕ್ಕಿಂತ ಮೊದಲು ನೇಮಕಾತಿ ಆದ ಎಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರುಗಳಿಗೆ ಈ ಹಿಂದಿನಂತೆ ಪ್ರೌಢಶಾಲೆಗಳಿಗೆ ವಿದ್ಯಾರ್ಹತೆಯ ಆಧಾರದ ಮೇಲೆ ಬಡ್ತಿ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕು ಘಟಕದ ವತಿಯಿಂದ ತಹಸೀಲ್ದಾರ್ ಸಂತೋಷ್ ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.ತಾಲೂಕು ಕಚೇರಿ ಮುಂಭಾಗ ಮನವಿ ಸಲ್ಲಿಸಿದ ಬಳಿಕ ತಾಲೂಕು ಘಟಕದ ಅಧ್ಯಕ್ಷ ಸದಾನಂದ ಮೂರ್ತಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2017ರ ಹೊಸ ವೃಂದ ಮತ್ತು ನೇಮಕಾತಿ ನಿಯಮಗಳನ್ನು 2016ಕ್ಕಿಂತ ಮೊದಲು ನೇಮಕಾತಿ ಆದವರಿಗೆ ಪೂರ್ವಾನ್ವಯಗೊಳಿಸಿದರೆ ಸೇವಾ ನಿರತ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರುಗಳಿಗೆ ಅನ್ಯಾಯವಾಗುತ್ತದೆ, ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಣದಲ್ಲಿ ಸುಮಾರು 1.88.532 ಶಿಕ್ಷಕರುಗಳಲ್ಲಿ ಹಿರಿಯ ಮುಖ್ಯ ಶಿಕ್ಷಕರು, ಮುಖ್ಯ ಶಿಕ್ಷಕರು ಸಹ ಶಿಕ್ಷಕರು, ವಿಶೇಷ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದು, 1ನೇ ತರಗತಿಯಿಂದ 7ನೇ ತರಗತಿ ಹಾಗೂ 1ನೇ ತರಗತಿಯಿಂದ 8 ನೇ ತರಗತಿಗಳನ್ನು ಸಮರ್ಥವಾಗಿ ನಿರ್ವಹಿಸಿಕೊಂಡು ಬರುತ್ತಿದ್ದಾರೆ.
ಎನ್. ಸಿ. ಟಿ. ಇ. ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿಯ ಶಿಫಾರಸುಗಳಿಗೆ ಅನುಕೂಲವಾಗುವಂತೆ ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಯ ಪದನಾಮವನ್ನು ಬದಲಾಯಿಸಿ ಹೊಸ ವೃಂದ ಹಾಗೂ ವೃಂದ ಬಲವನ್ನು ನಿರ್ಧರಿಸುವ ಕುರಿತು ವಿಶೇಷ ರಾಜ್ಯ ಪತ್ರವನ್ನು 2017 ಮೇ 20ರಂದು ಪತ್ರ ಸಂಖ್ಯೆ 434ರಲ್ಲಿ ಹೊರಡಿಸಿದ ಪ್ರಾಥಮಿಕ ಶಾಲಾ ಸಹ ಶಿಕ್ಷಕ ವೃಂದವನ್ನು ಮುಖ್ಯವಾಗಿ ಪ್ರಾಥಮಿಕ ಶಾಲಾ ಶಿಕ್ಷಕರು 1 ರಿಂದ 5 ಕ್ಕೆ 1.12.467 ಹಾಗೂ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು 6 ರಿಂದ 8 ಕ್ಕೆ 51.781 ಎಂದು ವೃಂದವಾರು ಹುದ್ದೆಗಳನ್ನು ಮಂಜೂರು ಮಾಡಿ ಆದೇಶ ಹೊರಡಿಸಿದೆ, ಈ ಹಿನ್ನೆಲೆಯಲ್ಲಿ 2016ಕ್ಕಿಂತ ಮೊದಲು 1ನೇ ತರಗತಿಯಿಂದ 7 ಹಾಗೂ 1ನೇ ತರಗತಿಯಿಂದ 8ನೇ ತರಗತಿ ವೃಂದಕ್ಕೆ ನೇಮಕಾತಿಯಾದ ಎಲ್ಲಾ ಸಹ ಶಿಕ್ಷಕರನ್ನು ಈಗ ದಿಢೀರ್ ಎಂದು 1ರಿಂದ 5ನೇ ತರಗತಿಯ ಶಿಕ್ಷಕರು ಎಂದು ಪರಿಗಣಿಸಿರುವುದು ಅನ್ಯಾಯವಾಗಿದೆ ಎಂದರು.ಹಕ್ಕೊತ್ತಾಯಗಳು : 2017ನೇ ಸಾಲಿನವರೆಗೆ ನೇಮಕಾತಿಯಾದ ಶಿಕ್ಷಕರನ್ನು 1ರಿಂದ 7 ನೇ ತರಗತಿಗೆ ನೇಮಕವಾದ ಶಿಕ್ಷಕರೆಂದು ಪರಿಗಣಿಸಿ ಹೊಸ ವೃಂದ ಮತ್ತು ನೇಮಕಾತಿ ನಿಯಮಗಳು 2017ರ ನಂತರ ನೇಮಕವಾದ ಶಿಕ್ಷಕರಿಗೆ ಅನ್ವಯಿಸಬೇಕು, ಯಾವುದೇ ಕಾರಣಕ್ಕೂ 2016ಕ್ಕಿಂತ ಮುನ್ನ ನೇಮಕವಾದ ಶಿಕ್ಷಕರಿಗೆ ಪೂರ್ವಾನ್ವಯವಾಗಬಾರದು. 2017ರ ಹೊಸ ವೃಂದ ಮತ್ತು ನೇಮಕಾತಿ ನಿಯಮಗಳು 2016 ಕ್ಕಿಂತ ಮೊದಲು ನೇಮಕವಾದವರಿಗೆ ಅನ್ವಯವಾಗುವುದಿಲ್ಲ ಎಂದು ಪ್ರಾಥಮಿಕ ಶಾಲಾ ಮತ್ತು ಸಾಕ್ಷರತಾ ಇಲಾಖೆಯು ಕಾರ್ಯಾದೇಶ ಹೊರಡಿಸಿ ಮೂಲತಃ 1ರಿಂದ 7 ಹಾಗೂ 1 ರಿಂದ 8ನೇ ತರಗತಿಗೆ ನೇಮಕವಾದವರನ್ನು ಪಿ ಎಸ್ ಟಿ ಎಂದು ಪದನಾಮ ಮಾಡಿ 1 ರಿಂದ 5 ನೇ ತರಗತಿಗೆ ಸೀಮಿತಗೊಳಿಸಿರುವುದನ್ನು ಹಿಂಪಡೆಯಬೇಕು. ಅರ್ಹ ವಿದ್ಯಾರ್ಹತೆ ಪೂರೈಸಿದ 2016 ಕ್ಕಿಂತ ಮೊದಲು ನೇಮಕಾತಿಯಾದ 1 ರಿಂದ 8 ನೇ ತರಗತಿಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಖ್ಯೆ ಮುಗಿಯುವವರೆಗೂ ಈ ಮೊದಲಿನಂತೆಯೇ ಅರ್ಹತೆ ಆಧಾರದ ಮೇಲೆ ಪ್ರೌಢಶಾಲೆಗೆ ಬಡ್ತಿ ನೀಡಬೇಕು ಜತೆಗೆ ಸೇವಾ ಜೇಷ್ಠತೆ ಆಧರಿಸಿ ಬಡ್ತಿ ನೀಡಬೇಕು ಎಂದು ಮನವಿ ನೀಡಲಾಗಿದೆ.
ಈ ವೇಳೆ ಪ್ರಧಾನ ಕಾರ್ಯದರ್ಶಿ ಜಯರಾಂ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಬಸವರಾಜು, ಜಿಲ್ಲಾ ಉಪಾಧ್ಯಕ್ಷೆ ಚಂದ್ರಮತಿ, ತಾಲ್ಲೂಕು ಉಪಾಧ್ಯಕ್ಷ ಹಾಲಪ್ಪ , ನವೀನ್, ಯತೀಶ್, ಶಿವಣ್ಣ, ಸೋಮಶೇಖರ್, ಸುಧಾಮಣಿ, ಶ್ರೀಧರ್, ಸುಲೋಚನಾ, ಶಾಂತಮ್ಮ, ಶೇಖರ್, ಅಶೋಕ್, ರಘು, ಪದವೀಧರ ಶಿಕ್ಷಕರ ಸಂಘದ ಅಧ್ಯಕ್ಷ ದೇವೇಗೌಡ ಕಾರ್ಯದರ್ಶಿ ಮಹೇಶ್ ರಾಜಶೇಖರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.