ಶಿಕ್ಷಕರಿಗಿದೆ ಬೋಧನೆಯಾಚೆಗೂ ಸಮಾಜ ರೂಪಿಸುವ ಶಕ್ತಿ

KannadaprabhaNewsNetwork |  
Published : Nov 08, 2026, 02:00 AM IST
ಬಳ್ಳಾರಿಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಕೆ.ಪಿ.ಮಂಜುನಾಥ ರೆಡ್ಡಿ ಅವರ ‘ನಾ ಕಂಡ ಮಾಲ್ಡೀವ್ಸ್’ ಪ್ರವಾಸ ಕಥನ ಕೃತಿ ಲೋಕಾರ್ಪಣೆಗೊಳಿಸಲಾಯಿತು.  | Kannada Prabha

ಸಾರಾಂಶ

ಶಿಕ್ಷಕರು ತರಗತಿಯಲ್ಲಿ ವಿದ್ಯಾರ್ಥಿಗಳ ವ್ಯಕ್ತಿತ್ವ ತಿದ್ದಿದರೆ, ಸಾಹಿತಿಗಳು ತಮ್ಮ ಬರಹಗಳ ಮೂಲಕ ಸಮಾಜದ ಚಿಂತನೆ ಬದಲಿಸುವ ಶಕ್ತಿ ಹೊಂದಿದ್ದಾರೆ.

ಬಳ್ಳಾರಿ: ನಿವೃತ್ತಿ ಎನ್ನುವುದು ಸೇವೆಯಿಂದ ಮಾತ್ರವೇ ಹೊರತು ಜ್ಞಾನ ಹಂಚುವ ಕಾರ್ಯದಿಂದಲ್ಲ. ಶಿಕ್ಷಕರು ತಮ್ಮ ವೃತ್ತಿ ಬದುಕಿನಲ್ಲಿ ಸಂಪಾದಿಸಿದ ಅನುಭವ, ಜೀವನಾನುಭವ ಮತ್ತು ಸಾಮಾಜಿಕ ಕಾಳಜಿ ಸಾಹಿತ್ಯದ ಮೂಲಕ ಅಭಿವ್ಯಕ್ತಿಗೊಳಿಸಿದಾಗ ಅದು ಸಮಾಜಕ್ಕೆ ಅಮೂಲ್ಯ ಕೊಡುಗೆಯಾಗುತ್ತದೆ. ಬೋಧನೆಯಾಚೆಗೂ ಸಮಾಜವನ್ನು ರೂಪಿಸುವ ಶಕ್ತಿ ಶಿಕ್ಷಕರಿಗಿದೆ ಎಂದು ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್. ಮಂಜುನಾಥ ಅಭಿಪ್ರಾಯಪಟ್ಟರು.

ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಕೆ.ಪಿ. ಮಂಜುನಾಥ ರೆಡ್ಡಿ ನಿವೃತ್ತಿಯ ಹಿನ್ನೆಲೆ ಆಯೋಜಿಸಿದ್ದ ಧನ್ಯವಾದ ಸಮರ್ಪಣೆ ಹಾಗೂ ಅವರು ರಚಿಸಿರುವ ನಾ ಕಂಡ ಮಾಲ್ಡೀವ್ಸ್ ಪ್ರವಾಸ ಕಥನ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ನಿವೃತ್ತ ಪ್ರಾಧ್ಯಾಪಕ ಬಿ.ಓ. ಸತ್ಯನಾರಾಯಣ ರೆಡ್ಡಿ, ಅನುಭವ ಅಕ್ಷರ ರೂಪ ಪಡೆದು ಪುಸ್ತಕವಾದಾಗ ಅದು ಮುಂದಿನ ತಲೆಮಾರಿಗೆ ದಾರಿದೀಪವಾಗುತ್ತದೆ. ತರಗತಿಯ ಕೋಣೆಯಲ್ಲಿ ಕಂಡ ಅನುಭವಗಳು ಹಾಗೂ ಶಿಕ್ಷಕರಾಗಿ ಸಮಾಜ ಸೂಕ್ಷ್ಮವಾಗಿ ಗಮನಿಸಿದ ಅನುಭಾವ ಎರಡೂ ಮೇಳೈಸಿದಾಗ ಉತ್ತಮ ಸಾಹಿತ್ಯ ಕೃತಿ ರೂಪುಗೊಳ್ಳುತ್ತದೆ. ನಾ ಕಂಡ ಮಾಲ್ಡೀವ್ಸ್ ಕೃತಿಯಲ್ಲಿ ಇಂತಹ ಅನುಭವಗಳ ಅಭಿವ್ಯಕ್ತಿ ಕಾಣಬಹುದು ಎಂದರು.

ಕೃತಿಯ ಪರಿಚಯ ಮಾಡಿಕೊಟ್ಟ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಿಷ್ಟಿ ರುದ್ರಪ್ಪ ಮಾತನಾಡಿ, ಶಿಕ್ಷಕರು ತರಗತಿಯಲ್ಲಿ ವಿದ್ಯಾರ್ಥಿಗಳ ವ್ಯಕ್ತಿತ್ವ ತಿದ್ದಿದರೆ, ಸಾಹಿತಿಗಳು ತಮ್ಮ ಬರಹಗಳ ಮೂಲಕ ಸಮಾಜದ ಚಿಂತನೆ ಬದಲಿಸುವ ಶಕ್ತಿ ಹೊಂದಿದ್ದಾರೆ. ತರಗತಿಯಲ್ಲಿ ಬೋಧಿಸಿದ ಮೌಲ್ಯ ಸಾಹಿತ್ಯದ ಮೂಲಕ ಸಮಾಜಕ್ಕೆ ತಲುಪಿಸುವ ಕಾರ್ಯ ಮಂಜುನಾಥ ರೆಡ್ಡಿ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಸುಲೇಖಾ.ಬಿ. ಮಾತನಾಡಿದರು. ಉಪನ್ಯಾಸಕ ಡಾ.ಯು. ಶ್ರೀನಿವಾಸಮೂರ್ತಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಚಾಂದ್ ಪಾಷಾ ನಿರೂಪಿಸಿದರು. ನಿವೃತ್ತ ಪಶುವೈದ್ಯಾಧಿಕಾರಿ ಡಾ. ಬಸವರಾಜ ರೆಡ್ಡಿ, ಪ್ರೌಢಶಾಲಾ ಪ್ರಭಾರಿ ಉಪಪ್ರಾಂಶುಪಾಲ ಲೋಕೇಶ್, ಸನ್ಮಾರ್ಗ ಗೆಳೆಯರ ಬಳಗದ ಕಾರ್ಯದರ್ಶಿ ಚಂದ್ರಶೇಖರ ಆಚಾರ್ ಕಪ್ಪಗಲ್ಲು, ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಬಿ.ಪಿ. ಕಲ್ಲಪ್ಪ ಉಪಸ್ಥಿತರಿದ್ದರು. ಉಪನ್ಯಾಸಕ ಪಿ.ಜಿ. ಶಶಿಧರ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕವಿ ಹೃದಯದ ಡಾ.ಚೆನ್ನಬಸವ ಶ್ರೀಗಳು: ತೋಂಟದಾರ್ಯ ಶ್ರೀ
ಶಿರಗುಪ್ಪಿ ಕಾರ್ಖಾನೆಯಿಂದ ₹4,000 ದರ ಘೋಷಣೆ