ಕನ್ನಡಪ್ರಭ ವಾರ್ತೆ ಅರಸೀಕೆರೆ
ಇಂದು ಸುಶಿಕ್ಷಿತ ಮಹಿಳೆಯರು ಅನಕ್ಷರಂತೆ ವರ್ತಿಸುತ್ತಿದ್ದಾರೆ, ಗಂಡು ಮಕ್ಕಳ ವ್ಯಾಮೋಹದಲ್ಲಿ ಅತ್ತೆಯಂದಿರು ಹೆಣ್ಣು ಭ್ರೂಣವನ್ನ ತೆಗೆಸುವ ಚಿಂತನೆ ಮಾಡುತ್ತಾರೆ, ಇದಕ್ಕೆ ಮಾವನ ಬೆಂಬಲವೂ ಇರಬಹುದು. ಕಾಲ ಬದಲಾಗಿದೆ ಕಾನೂನು ನಿಯಮಗಳನ್ನು, ತರಲಾಗಿದೆ ಎಂದು ತಹಸೀಲ್ದಾರ್ ಸಂತೋಷ್ ಕುಮಾರ್ ಹೇಳಿದರು.ಅವರು ತಾಲೂಕು ಕಚೇರಿ ಆವರಣದಲ್ಲಿನ ಕಂದಾಯ ಭವನದಲ್ಲಿ ಶಿಕ್ಷಣ ಇಲಾಖೆ ಹಾಗೂ ಸಾವಿತ್ರಿ ಬಾ ಫುಲೆ ಸಂಘವು ಹಮ್ಮಿಕೊಂಡಿದ್ದ ವಿಶ್ವ ಮಹಿಳೆಯರ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಕಿಯರ ಮೇಲೆ ಬಹಳ ಜವಾಬ್ದಾರಿ ಇದೆ. ನೀವು ಮಕ್ಕಳನ್ನು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಸಜ್ಜುಗೊಳಿಸಿದರೆ ಆ ಹೆಣ್ಣುಮಕ್ಕಳು ಎಂತಹ ಸಂದರ್ಭವನ್ನು ಸಹ ಎದುರಿಸುವಂತಹ ಸಬಲರಾಗುತ್ತಾರೆ. ನೀವುಗಳು ಒಂದೊಂದು ಶಾಲೆಯನ್ನೇ ನಡೆಸುತ್ತಿದ್ದೀರಿ, ನೂರಾರು ಮಕ್ಕಳು ಇರುತ್ತವೆ, ಅವರಲ್ಲಿ ಆತ್ಮಸ್ಥೈರ್ಯವನ್ನು ತುಂಬುವಂತ ಕಾರ್ಯವು ಶಿಕ್ಷಣದೊಂದಿಗೆ ನಿಮ್ಮಿಂದ ಆಗಬೇಕು ಎಂದರು.
ಕುಟುಂಬದಲ್ಲಿ ಅತ್ತೆ, ಸೊಸೆ, ಅತ್ತಿಗೆ, ನಾದಿನಿ ಇವರುಗಳ ನಡುವೆ ಸಾಮರಸ್ಯವಿರಬೇಕು ಎಂದು ಕಿವಿಮಾತು ಹೇಳಿದ ಅವರು, ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಶಿಕ್ಷಕರು ಇದ್ದೀರಿ. ನಿಮ್ಮ ಕರ್ತವ್ಯವನ್ನು ಶ್ರದ್ಧೆ ಮತ್ತು ಆಸಕ್ತಿಯಿಂದ ಮಾಡಿದ್ದೇ ಆದರೆ ನೀವುಗಳು ಆಧುನಿಕ ಸಾವಿತ್ರಿ ಬಾ ಫುಲೆ ಆಗುತ್ತೀರಿ ಎಂದರು.ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ಕುಮಾರ್, ಸಾವಿತ್ರಿ ಬಾ ಫುಲೆ ಗಂಡು ಮಕ್ಕಳಿಗಷ್ಟೇ ಸರಕಾರಿ ಶಾಲೆಗಳು ಇದ್ದ ಕಾಲದಲ್ಲಿ ಹೆಣ್ಣುಮಕ್ಕಳಿಗೆ ಇವರು ಶಾಲೆ ಪ್ರಾರಂಭಿಸಿದಾಗ ಕೇವಲ ಎಂಟು ಮಕ್ಕಳು ಮಾತ್ರ ದಾಖಲಾದರು. ನಂತರ ಅನೇಕ ಶಾಲೆಗಳೇ ಪ್ರಾರಂಭಗೊಂಡಿತು. ಆ ಕಾಲದಲ್ಲಿ ಬಾಲ್ಯವಿವಾಹ ಮಾಡುತ್ತಿದ್ದರು. ಸಾವಿತ್ರಿ ಬಾ ಫುಲೆ ಬಹಳ ಕಷ್ಟವನ್ನು ಅನುಭವಿಸಿದರು ಆದರೂ ಎದೆಗುಂದದೆ ಗುರಿ ಮುಟ್ಟಿದರು ಎಂದ ಅವರು ವಿಶ್ವ ಮಹಿಳಾ ದಿನವನ್ನು ದೊಡ್ಡಮಟ್ಟದಲ್ಲಿ ಮಾಡುವ ಚಿಂತನೆ ಇದ್ದು ಅದನ್ನು ವಿವಿಧ ಇಲಾಖೆಗಳೊಂದಿಗೆ ಆಯೋಜಿಸುವುದಾಗಿ ಹೇಳಿದರು.
ದೊಡ್ಡಯರಗನಾಳು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಕೃತಿ ಕ್ಯಾನ್ಸರ್ ಮತ್ತು ಮಹಿಳೆಯರ ಸಮಸ್ಯೆಗಳು ಕುರಿತಂತೆ ಉಪನ್ಯಾಸ ಹಾಗೂ ಮಾರ್ಗದರ್ಶನ ನೀಡಿದರು. ಸಾವಿತ್ರಿಬಾಯಿ ಫುಲೆ ಜಿಲ್ಲಾ ಸಂಘದ ಅಧ್ಯಕ್ಷೆ ಆಶಾ ಸಂಘಟನೆಯಿಂದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಇನ್ನು ಹೆಚ್ಚಿನ ರೀತಿಯಲ್ಲಿ ಸಂಘಟನೆ ಆಗಬೇಕು, ಇನ್ನು ಒಂದು ವರ್ಷಕ್ಕೆ ತಾಲೂಕು ಪ್ರಾಥಮಿಕ ಶಾಲ ಶಿಕ್ಷಕರ ಸಂಘದ ಚುನಾವಣೆ ಸಮೀಪಿಸುತ್ತದೆ ಒಗ್ಗಟ್ಟಾಗಿ ನಿಮ್ಮದೇ ಒಂದು ಟೀಮ್ ಮಾಡಿಕೊಳ್ಳಿ ಎಂದು ಸಲಹೆ ಇತ್ತರು.ಸರ್ಕಾರಿ ನೌಕರರ ಸಂಘದ ನಿರ್ದೇಶಕಿ ಕಮಲ ಸಂಘಟನೆ ಇಲ್ಲದೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಇಂದಿನ ದಿನಗಳಲ್ಲಿ ಬಹಳ ಕಷ್ಟ ಮತ್ತು ನಾವು ನಾಲ್ಕು ಜನರಿಗೆ ಏನಾದರೂ ಸೇವೆ ಮಾಡಬೇಕು ಎಂಬ ಮಹತ್ವಾಕಾಂಕ್ಷೆಗೂ ಸಂಘಟನೆ ಸಹಕಾರಿಯಾಗುತ್ತದೆ, ಸಾವಿತ್ರಿ ಬಾ ಪುಲೆ ರವರ ತ್ಯಾಗ ಮತ್ತು ಪರಿಶ್ರಮವನ್ನ ನಾವು ಮಾದರಿಯಾಗಿ ಇಟ್ಟುಕೊಳ್ಳೋಣ, ನಮ್ಮ ಕಾರ್ಯಕ್ರಮಗಳಿಗೆ ತಹಸೀಲ್ದಾರ್ ಮತ್ತು ಬಿಇಒ ಅವರು ಸಹಕಾರ ನೀಡುತ್ತಿರುವುದರಿಂದಾಗಿ ನಮ್ಮ ಕಾರ್ಯಕ್ರಮಗಳು ಯಶಸ್ವಿಯಾಗುತ್ತಿದೆ ಎಂದು ಅವರು ಕೃತಜ್ಞತೆ ಹೇಳಿದರು.
ಸಾಧಕರಿಗೆ ಸನ್ಮಾನ ಹಾಗೂ ಕ್ವಿಜ್ ವಿಜೇತರರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಕ್ಷೇತ್ರ ಸಮನ್ವಯ ಅಧಿಕಾರಿ ಶಂಕರ್, ಶಿಕ್ಷಣ ಸಂಯೋಜಕ ಮಲ್ಲೇಶ್, ನಗರ ಯೋಜನಾ ಪ್ರಾಧಿಕಾರದ ಸದಸ್ಯ ಮೋಹನ್ ಮಹಿಳೆಯರಿಗೆ ಶುಭ ಕೋರಿದರು. ತಾಲೂಕು ಸಾವಿತ್ರಿ ಬಾಪುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಕುಸುಮ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಹೇಳಿದರು.