ಶಿಕ್ಷಕರು ಮಕ್ಕಳ ಪ್ರತಿಭೆ ಗುರುತಿಸಿ: ಕಂಬಳೇಶ್ವರ ಶ್ರೀಗಳು

KannadaprabhaNewsNetwork | Published : Jan 8, 2024 1:45 AM

ಸಾರಾಂಶ

ಮಕ್ಕಳ ಸರ್ವೋತೋಮುಖ ಬೆಳವಣಿಗೆಗೆ ಓದುವಿನ ಜೊತೆಗೆ ಇಂತಹ ವಿವಿಧ ಚಟುವಟಿಕೆ ಅವಶ್ಯಕತೆ ಇದೆ. ವಿದ್ಯಾರ್ಥಿಗಳ ಆಲೋಚನೆ ಶಕ್ತಿ ಹಾಗೂ ವಿಚಾರ ಶಕ್ತಿ ಹೆಚ್ಚುತ್ತದೆ.

ಕನ್ನಡಪ್ರಭ ವಾರ್ತೆ ಚಿತ್ತಾಪುರ

ಪ್ರತಿಯೊಂದು ಮಗು ತನ್ನದೇ ಆದ ವಿಶಿಷ್ಟ ಪ್ರತಿಭೆ ಹೊಂದಿರುತ್ತದೆ. ಮಗುವಿನಲ್ಲಿ ಅಡಗಿದ ಪ್ರತಿಭೆ ಗುರುತಿಸುವ ಕೆಲಸ ಶಿಕ್ಷಕರು ಮಾಡಬೇಕು ಎಂದು ಕಂಬಳೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಸೋಮಶೇಖರ ಶಿವಾಚಾರ್ಯರು ಎಂದು ಹೇಳಿದರು.

ಪಟ್ಟಣದ ಪ್ರಾರ್ಥನಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಸ್ತು ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಕ್ಕಳ ಸರ್ವೋತೋಮುಖ ಬೆಳವಣಿಗೆಗೆ ಓದುವಿನ ಜೊತೆಗೆ ಇಂತಹ ವಿವಿಧ ಚಟುವಟಿಕೆ ಅವಶ್ಯಕತೆ ಇದೆ. ವಿದ್ಯಾರ್ಥಿಗಳ ಆಲೋಚನೆ ಶಕ್ತಿ ಹಾಗೂ ವಿಚಾರ ಶಕ್ತಿ ಹೆಚ್ಚುತ್ತದೆ. ಅಚ್ಚುಕಟ್ಟಾಗಿ ವಿಷಯ ವಿವಿಧ ಬಗೆಯ ಮಾದರಿ ಚಿತ್ರ ಮಾಡಿದ ವಿದ್ಯಾರ್ಥಿಗಳ ಪರಿಶ್ರಮ ಬಹಳವಿದ್ದು, ಶಿಕ್ಷಕರು ಹಾಗೂ ಪಾಲಕರು ಮಕ್ಕಳಿಗೆ ಪ್ರೋತ್ಸಾಹ ತುಂಬುವಂತಹ ಕೆಲಸ ಮಾಡಬೇಕು. ಮಗು ಯಾವ ವಿಷಯದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾನೆ ಎಂದು ಪಾಲಕರು ಅರಿತುಕೊಳ್ಳಬೇಕು. ಕೇವಲ ಅಂಕಗಳು ಹೆಚ್ಚು ಕಡಿಮೆ ಎಂದು ಮಕ್ಕಳಿಗೆ ಒತ್ತಡ ಹೇರುವ ಬದಲು ಅವರ ಕ್ರಿಯಾತ್ಮಕ ಆಲೋಚನೆಗಳಿಗೆ ಉತ್ಸಾಹ ತುಂಬುವ ಕೆಲಸ ಮಾಡಬೇಕು ಎಂದು ಹೇಳಿದರು.

ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಕಾಶಿನಾಥ ಗುತ್ತೆದಾರ ಮಾತನಾಡಿ, ಒಂದು ಶಾಲೆ ಯಶಸ್ವಿಯಾಗಿ ನಡೆಯಲೂ ಪಾಲಕರ ಹಾಗೂ ಶಿಕ್ಷಕರ ಸಹಕಾರ ಅಗತ್ಯವಿದೆ. ಹಾಗೆಯೇ ಪ್ರಾರ್ಥನಾ ಶಾಲೆ ಪಟ್ಟಣದಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಪಾಲಕರೇ ವಿಶ್ವಾಸ ಗಳಿಸಿದೆ. ದೊಡ್ಡ ದೊಡ್ಡ ಶಾಲಾ ಕಟ್ಟಡಗಳು ನೋಡಿ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಪ್ರವೇಶ ಕೊಡುವುದಲ್ಲ. ಎಂತಹ ಶಾಲೆಗಳಿಗೆ ಪ್ರವೇಶ ಮಾಡಿದರೆ ಮಕ್ಕಳು ಶಿಕ್ಷಣದ ಜೊತೆಗೆ ಇತರ ಚಟುವಟಿಕೆಗಳಲ್ಲಿ ಭಾಗವಹಿಸಿ, ಮಕ್ಕಳಲ್ಲಿ ಅಡಗಿದ ಜ್ಞಾನವನ್ನು ಗುರುತಿಸಿ ಒಳ್ಳೆಯ ಶಿಕ್ಷಣ ನೀಡುತ್ತಾರೆ ಅಂತಹ ಶಿಕ್ಷಣ ಸಂಸ್ಥೆ ಆಯ್ಕೆ ಮಾಡಬೇಕು ಎಂದು ಹೇಳಿದರು.

ಅತಿಥಿಗಳಾಗಿ ಭೇಥನಿ ಪ್ರೌಢ ಶಾಲೆಯ ಮುಖ್ಯಗುರುಗಳಾದ ಸಿಸ್ಟರ್ ಕವಿತಾ, ಶಾಲೆಯ ಅಧ್ಯಕ್ಷ ಜಗದೇವ ದಿಗ್ಗಾಂವಕರ್, ಶಿಕ್ಷಕಿಯರಾದ ಶಮೀಮ್, ರೋಸ್ ಮೇರಿ, ಹೇಮಾ ಕುಲಕರ್ಣಿ, ಶ್ರೀದೇವಿ, ಪ್ರತಿಮಾ ಕುಲಕರ್ಣಿ, ಮರಿಯಮ್, ನಾಗವೇಣಿ ಜಳಕಿ, ಲಲಿತ ರಾಥೋಡ್, ಶಿಕ್ಷಕ ವಿಶ್ವನಾಥ ಕುಂಬಾರ, ಕರಬಸವಯ್ಯ ಶಾಸ್ತ್ರಿ ಇದ್ದರು.

ಗಮನ ಸೆಳೆದ ವಿದ್ಯಾರ್ಥಿಗಳ ವಿವಿಧ ಮಾದರಿಗಳು ಚಿತ್ರಗಳು:

ವಸ್ತು ಪ್ರದರ್ಶನದಲ್ಲಿ ಇತ್ತೀಚೆಗೆ ಉಡಾವಣೆಯಾದ ಚಂದ್ರಯಾನ-೩, ಹೊಸದಾಗಿ ನಿರ್ಮಾಣವಾದ ಸಂಸತ್ತು, ಸ್ವಾತಂತ್ರ‍್ಯ ಹೋರಾಟಗಾರ ಜೀವನ ಚರಿತ್ರೆ, ಗಣಿತದ ವಿವಿಧ ಲೆಕ್ಕಗಳು, ವಿಜ್ಞಾನ ಹಾಗೂ ಸಮಾಜ ವಿಜ್ಞಾನ, ಕನ್ನಡದ ಬಳ್ಳಿಗಳು, ಕವಿಗಳು, ಹಿಂದಿ ಹಾಗೂ ಇಂಗ್ಲಿಷ್ ವಿಷಯಕ್ಕೆ ಸಂಬಂಧಿಸಿದಂತೆ ವಿವಿಧ ಮಾದರಿಗಳು ಗಮನ ಸೆಳೆಯಿತು.

Share this article