ಪರಸರ ಸಂರಕ್ಷಣೆಯಲ್ಲಿ ಶಿಕ್ಷಕರ ಪಾತ್ರ ಪ್ರಮುಖ: ನ್ಯಾಯಮೂರ್ತಿ ಟಿ.ಎನ್.ಇನವಳ್ಳಿ

KannadaprabhaNewsNetwork | Published : Jun 6, 2024 12:33 AM

ಸಾರಾಂಶ

ಪರಿಸರವನ್ನು ಸಂರಕ್ಷಣೆ ಮಾಡುವಲ್ಲಿ ಶಿಕ್ಷಕರ ಪಾತ್ರ ಅತಿ ಮುಖ್ಯವಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ.ಎನ್.ಇನವಳ್ಳಿ ತಿಳಿಸಿದರು. ಹಾಸನದಲ್ಲಿ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ । ಗಿಡ ನೆಟ್ಟು ಪರಿಸರ ಜಾಗೃತಿ ಮೂಡಿಸಿ

ಕನ್ನಡಪ್ರಭ ವಾರ್ತೆ ಹಾಸನ

ಪರಿಸರದ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮತ್ತು ಅದರ ಮಹತ್ವವನ್ನು ತಿಳಿಸುವ ಮೂಲಕ ಪರಿಸರವನ್ನು ಸಂರಕ್ಷಣೆ ಮಾಡುವಲ್ಲಿ ಶಿಕ್ಷಕರ ಪಾತ್ರ ಅತಿ ಮುಖ್ಯವಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ.ಎನ್.ಇನವಳ್ಳಿ ತಿಳಿಸಿದರು.

ನಗರದ ಸಾಲಗಾಮೆ ರಸ್ತೆ ಬಳಿ ಇರುವ ಹಾಸನಾಂಬ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಅರಣ್ಯ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ನಗರ ಸಭೆ, ಹಾಸನ ವ್ಯೆದ್ಯಕೀಯ ವಿಜ್ಞಾನಗಳ ಸಂಸ್ಥೆ, ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ಮತ್ತು ಕೈಗಾರಿಕೆಗಳು ಹಾಸನ ಜಂಟಿಯಾಗಿ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

‘ಪರಿಸರ ದಿನಾಚರಣೆ ಎಂಬುದು ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಪರಿಸರ, ತ್ಯಾಜ್ಯ ನಿರ್ವಹಣೆ ಮತ್ತು ಪ್ಲಾಸ್ಟಿಕ್ ನಿರ್ಮೂಲನೆ ಮಾಡುವುದು ಎಲ್ಲರ ಆದ್ಯ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ. ಜಾಗೃತಿ ಮತ್ತು ಅರಣ್ಯಗಳ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಕಾಡು ನಾಶ ಮಾಡಿದರೆ ಮತ್ತೆ ಬೆಳೆಸುವರು ಯಾರು ಎಂಬ ಪ್ರಶ್ನೆ ಈಗ ನಮ್ಮೆಲ್ಲರ ಮುಂದೆ ಇದೆ. ಮಕ್ಕಳು ಒಂದು ಗಿಡವನ್ನು ನೆಡುವ ಮೂಲಕ ಪರಿಸರದ ಜಾಗೃತಿ ಮತ್ತು ಅದರ ಮಹತ್ವವನ್ನು ಎಲ್ಲರೂ ತಿಳಿದು ಕೊಳ್ಳಬೇಕಾಗಿದೆ. ಕೆರೆ, ಬಾವಿ, ಮರಗಿಡಗಳನ್ನು ಬೆಳೆಸಿ ಅರಣ್ಯ ಸಂರಕ್ಷಣೆ ಮಾಡಿ’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್.ಪೂರ್ಣಿಮಾ ಮಾತನಾಡಿ, ‘ಪರಿಸರ ಸಂರಕ್ಷಣೆಗಾಗಿ ‘ನಮ್ಮ ಭೂಮಿ ನಮ್ಮ ಭವಿಷ್ಯ’ ಎಂಬ ಧ್ಯೇಯವಾಕ್ಯದೊಂದಿಗೆ ನಾಗರಿಕ ಪ್ರಜ್ಞೆ ಕರ್ತವ್ಯವನ್ನು ಮಾಡಬೇಕು. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮುಂದಿನ ದಿನಗಳಲ್ಲಿ ಪ್ಲಾಸ್ಟಿಕ್ ನಿರ್ಮೂಲನೆ ಮಾಡಲು ಎಲ್ಲರ ಸಹಕಾರ ಅತ್ಯಗತ್ಯವಾಗಿದೆ. ಈಗಾಗಲೇ ಪರಿಸರಕ್ಕೆ ಸಾಕಷ್ಟು ಹಾನಿ ಉಂಟು ಮಾಡಲಾಗಿದೆ. ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳುವುದು ಕೂಡ ಪರಿಸರ, ತ್ಯಾಜ್ಯ ನಿರ್ವಹಣೆ ಮತ್ತು ಪ್ಲಾಸ್ಟಿಕ್ ನಿರ್ಮೂಲನೆ ಮಾಡುವುದು ಎಲ್ಲರ ಜವಾಬ್ದಾರಿಯಾಗಿದೆ. ತಮ್ಮ ಮನೆ ತ್ಯಾಜ್ಯವನ್ನು ರಸ್ತೆಯ ಬದಿಯಲ್ಲಿ ಎಸೆದು ಹೋಗುವ ಮೂಲಕ ಅನೈರ್ಮಲ್ಯ ಉಂಟು ಮಾಡಬಾರದು’ ಎಂದು ಸಲಹೆ ನೀಡಿದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪರಿಸರ ಅಧಿಕಾರಿ ಕೆ. ಕೀರ್ತಿಕುಮಾರ್ ಮಾತನಾಡಿ, ‘ಮಾನವ ಪರಿಸರ ಸಂಬಂಧದ ಮೇಲೆ ಬೆಳಕು ಚೆಲುವ ಕಾರ್ಯಕ್ರಮವಾಗಿದೆ. ಪ್ರತಿ ವರ್ಷ ಒಂದು ಧ್ಯೇಯವಾಕ್ಯದೊಂದಿಗೆ ನಮ್ಮ ಭೂಮಿ ನಮ್ಮ ಭವಿಷ್ಯ ವಿಶ್ವದ ಪ್ರತಿ ನಾಗರಿಕರಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಇದರ ಮಹತ್ವವನ್ನು ತಿಳಿದುಕೊಳ್ಳಬೇಕು. ಪರಿಸರ ಸಂರಕ್ಷಣೆ ಸ್ವಯಂಪ್ರೇರಿತವಾಗಿ ಪಾಲ್ಗೊಳ್ಳುವಂತೆ ಮಾಡುತ್ತದೆ’ ಎಂದರು.

ಹಾಸನದಲ್ಲಿ ಇಷ್ಟು ವರ್ಷಗಳ ಕಾಲ ಜಿಲ್ಲಾ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸಿ ಬೇರೆಡೆಗೆ ವರ್ಗಾವಣೆಗೊಂಡ ಹಿನ್ನೆಲೆ ಇದೇ ವೇಳೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ.ಎನ್.ಇನವಳ್ಳಿ ಅವರನ್ನು ಸನ್ಮಾನಿಸಿ ಗೌರವಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶೆ ಮತ್ತು ಸದಸ್ಯ ಕಾರ್ಯದರ್ಶಿ ಜಿ.ಕೆ.ದಾಕ್ಷಾಯಿಣಿ, ಅರಣ್ಯ ಸಂರಕ್ಷಣಾಧಿಕಾರಿ ಆರ್. ರವಿಶಂಕರ್‌, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ಟಿ ಜವರೇಗೌಡ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪುಲ್ಕಿತ್ ಮೀನಾ, ಆಕಾಶವಾಣಿ ಕಾರ್ಯಕ್ರಮದ ಮುಖ್ಯಸ್ಥ ಡಾ.ವಿಜಯ ಅಂಗಡಿ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್‌ನ ಕಂಚನಾ ಮಾಲಾ ಭಾಗವಹಿಸಿದ್ದರು.

Share this article