ಕನ್ನಡಪ್ರಭವಾರ್ತೆ ತುರುವೇಕೆರೆ
ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರ ಸಾಹಿತ್ಯ ಸಾಧನೆ ಪರಿಗಣಿಸಿ ರಾಜ್ಯ ಸರ್ಕಾರ ಮೈಸೂರು ದಸರಾ ಉದ್ಱಾಟನೆಗೆ ಆಹ್ವಾನಿಸಿದೆ. ಆದರೆ ಅವರು ಮುಸ್ಲಿಂ ಎಂಬ ಒಂದೇ ಕಾರಣಕ್ಕೆ ಜಾತಿ, ಧರ್ಮದ ಲೇಪನ ಮಾಡಿ ವಿರೋಧಿಸುವುದು ಸರಿಯಲ್ಲ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಆಕ್ಷೇಪಿಸಿದರು. ಎನ್.ಡಿ.ಎ ಮೈತ್ರಿ ಇರುವ ಕಾರಣ ಈ ಬಗ್ಗೆ ನಾನು ಮಾತನಾಡಬಾರದೆಂದಿದ್ದೆ. ಆದರೂ ಕೂಡ ಮನಸ್ಸು ತಡೆಯುತ್ತಿಲ್ಲ. ಬಾನು ಮುಷ್ತಾಕ್ ಅವರು ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ಮಾಡಿದ್ದಾರೆ. ಬೂಕರ್ ಪ್ರಶಸ್ತಿ ಪಡೆಯುವುದೆಂದರೆ ಅದು ಸಾಮಾನ್ಯವೇನಲ್ಲ. ಈ ಪ್ರಶಸ್ತಿ ಗಳಿಸುವುದೆಂದರೆ ದೇಶವನ್ನು ಪ್ರತಿನಿಧಿಸಿದಂತೆ. ಇವರ ಲೇಖನಗಳನ್ನು ಸಹ ಓದಿದ್ದೇನೆ. ಮತ್ತೆ ಮತ್ತೆ ಓದಬೇಕಿನಿಸುವ ಬರವಣಿಗೆ ಅವರದು. ಈ ಹಿಂದೆ ಕನ್ನಡದ ಖ್ಯಾತ ಸಾಹಿತಿ ಕೆ.ಎಸ್.ನಿಸ್ಸಾರ್ ಅಹಮದ್ ಅವರು ಕೂಡ ದಸರಾ ಉದ್ಘಾಟನೆ ಮಾಡಿದ್ದರು. ಹಿಂದೆ ಇಲ್ಲದ ವಿರೋಧ ಈಗ ಏಕೆ ಈ ವಿವಾದ ಮುನ್ನೆಲೆಗೆ ಬಂದಿದೆ ಎಂಬುದೇ ತಿಳಿಯುತ್ತಿಲ್ಲ ಎಂದು ವಿಷಾದಿಸಿದರು. ಇದೇ ವೇಳೆ ನಿವೃತ್ತ ಶಿಕ್ಷಕರಿಗೆ ಮತ್ತು ಉತ್ತಮ ಶಿಕ್ಷಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನಾ ಬಿಇಒ ಕಚೇರಿಯಿಂದ ರಾಧಾಕೃಷ್ಣನ್ ರವರ ಭಾವಚಿತ್ರವನ್ನು ತೆರೆದ ವಾಹನದಲ್ಲಿ ಮಂಗಳವಾದ್ಯ ಹಾಗೂ ಸೋಮನ ಕುಣಿತದೊಂದಿಗೆ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು. ಬಿಇಒ ಎನ್.ಸೋಮಶೇಖರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಮಾರಂಭದಲ್ಲಿ ಇ.ಒ.ಶಿವರಾಜಯ್ಯ, ಗ್ರೇಟ್-2 ತಹಸೀಲ್ದಾರ್ ಬಿ.ಸಿ.ಸುಮತಿ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶೀಲಾ ಶಿವಪ್ಪ ನಾಯಕ, ಸದಸ್ಯರಾದ ಚಿದಾನಂದ್, ಸುರೇಶ್, ಮುಖ್ಯಾಧಿಕಾರಿ ಶ್ರೀನಾಥ್ ಬಾಬು, ಶಿಕ್ಷಕರ ಸಂಘದ ಅಧ್ಯಕ್ಷ ಷಣ್ಮುಖಪ್ಪ, ಅಕ್ಷರದಾಸೋಹದ ನಿರ್ದೇಶಕಿ ಎಚ್.ಕೆ.ಸವಿತಾ, ಬಿಇಒ ಕಚೇರಿಯ ವ್ಯವಸ್ಥಾಪಕ ಕೃಷ್ಣಪ್ರಸಾದ್, ಕಸಾಪ ಅಧ್ಯಕ್ಷ ಡಿ.ಪಿರಾಜು, ಸಾವಿತ್ರಿಭಾಫುಲೆ ಸಂಘದ ಭವ್ಯಾ ಸಂಪತ್, ಇಸಿಒ ಸಿದ್ದಪ್ಪ, ವಕೀಲ ಧನಪಾಲ್ ಮತ್ತಿತರರು ಇದ್ದರು.