-ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸ್ವಾಗತ ಕಾರ್ಯಕ್ರಮ
-----ಕನ್ನಡಪ್ರಭ ವಾರ್ತೆ ಶಹಾಪುರ
ಶಿಕ್ಷಕರಿಂದ ಅಸಂಖ್ಯಾತ ಮಕ್ಕಳ ಉಜ್ವಲ ಭವಿಷ್ಯ ನಿರ್ಮಾಣಗೊಳ್ಳುತ್ತದೆ. ಆದರೆ, ಶಿಕ್ಷಕರು ಬೇಜವಾಬ್ದಾರಿತನ ಪ್ರದರ್ಶಿಸಿದರೆ, ಮಕ್ಕಳ ಭವಿಷ್ಯ ಡೋಲಾಯಮಾನವಾಗುತ್ತದೆ. ಶಿಕ್ಷಕರು ಜವಾಬ್ದಾರಿಯುತ ರೀತಿಯಲ್ಲಿ ನಡೆದುಕೊಳ್ಳಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ಶಾಂತಗೌಡ ಪಾಟೀಲ್ ಹೇಳಿದರು.ನಗರದ ಫಕೀರೇಶ್ವರ ಮಠದಲ್ಲಿ 2022-23ನೇ ಸಾಲಿನಲ್ಲಿ ನೇಮಕಗೊಂಡ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಆಯೋಜಿಸಿದ್ದ ಸ್ವಾಗತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷ ಣ ನೀಡಿ ಪರಿಪೂರ್ಣತೆ ಮತ್ತು ಸುಸಂಸ್ಕೃತಿಯತ್ತ ಒಯ್ಯುವುದೇ ಶಿಕ್ಷಕರ ಕರ್ತವ್ಯ. ಸಮರ್ಥ ಶಿಕ್ಷಕ ರಾಷ್ಟ್ರ ರಕ್ಷಕರಾಗುತ್ತಾರೆ. ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಣದ ಪಾತ್ರ ಅತ್ಯಂತ ಮಹತ್ವದಾಗಿದೆ ಎಂದರು.ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ವಿಶ್ವನಾಥರೆಡ್ಡಿ ದರ್ಶನಾಪುರ ಮಾತನಾಡಿ, ವಿದ್ಯಾರ್ಥಿಗಳು ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು ಶಿಕ್ಷಕರು ಪ್ರೇರೇಪಿಸಬೇಕು. ಗುಣಾತ್ಮಕ ಶಿಕ್ಷಣ ಇಂದಿನ ಅಗತ್ಯವಾಗಿದ್ದು, ಮಕ್ಕಳ ಹಾಜರಾತಿಯಲ್ಲಿ ಹೆಚ್ಚಳ ಇರುವಂತೆ ನೋಡಿಕೊಳ್ಳಬೇಕು. ಶಾಲೆಯಿಂದ ಹೊರಗಡೆ ಉಳಿದ ಮಕ್ಕಳನ್ನು ಶಾಲೆಗೆ ಸೇರಿಸುವುದು. ಶಿಸ್ತು ಬದ್ಧ ಹಾಗೂ ಮೌಲ್ಯಯುತ ಶಿಕ್ಷಣವನ್ನು ನೀಡಲು ಶಿಕ್ಷಕರು ಶ್ರಮಿಸಬೇಕೆಂದು ಹೇಳಿದರು.
ಸಾನಿಧ್ಯ ವಹಿಸಿದ್ದ ಫಕೀರೇಶ್ವರ ಮಠದ ಗುರುಪಾದ ಮಹಾಸ್ವಾಮೀಜಿ ಮಾತನಾಡಿ, ಒಬ್ಬ ಆದರ್ಶ ಶಿಕ್ಷಕ ಕೇವಲ ಶಿಕ್ಷಣ ತಜ್ಞನಲ್ಲ. ಅವರು ಮಾರ್ಗ ದರ್ಶಕರೂ ಆಗಿದ್ದಾರೆ. ಅವರು ಪ್ರಾಮಾಣಿಕತೆ, ಸಮಗ್ರತೆ ಮತ್ತು ಪರಿಶ್ರಮದಂತಹ ಮೌಲ್ಯಗಳನ್ನು ಹುಟ್ಟುಹಾಕುತ್ತಾರೆ. ತಮ್ಮ ವಿದ್ಯಾರ್ಥಿಗಳಿಗೆ ಸಕಾರಾತ್ಮ ಚಿಂತನೆ ನೀಡುತ್ತಾರೆ. ತಾವೆಲ್ಲರೂ ಅಕ್ಷರ ಬ್ರಹ್ಮರು. ಒಳ್ಳೆಯ ಕೆಲಸ ಮಾಡಿ ಮಕ್ಕಳಲ್ಲಿ ನೈತಿಕತೆ, ಮೌಲ್ಯಗಳನ್ನು ಬಿತ್ತಬೇಕು ಎಂದು ಆಶೀರ್ವಚನ ನೀಡಿದರು.ಇಲಾಖೆಯ ಕ್ಷೇತ್ರ ಸಮನ್ವಯ ಅಧಿಕಾರಿ ರೇಣುಕಾ ಪಾಟೀಲ್, ತಾಲೂಕಿನ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿದ್ದನಗೌಡ ಗೂಗಲ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಯಪ್ಪಗೌಡ ಹುಡೇದ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದಪ್ಪ ಎಚ್. ಎಸ್., ಜಿಲ್ಲಾಧ್ಯಕ್ಷ ಮಲ್ಲಯ್ಯ ಸಂಜೀವಿನಿ, ನಿರ್ದೇಶಕ ಬಸವರಾಜ್ ಬೆಳ್ಳಿಕಟ್ಟಿ, ರೇವಣಸಿದ್ದೇಶ್ವರ ಅಂಗಡಿ ಆಲ್ದಾಳ, ಪ್ರಾಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಭೀಮನಗೌಡ ತಳೆವಾಡ್, ದೈಹಿಕ ಶಿಕ್ಷಣಧಿಕಾರಿ ಶರಣಗೌಡ ಪಾಟೀಲ್, ಅಕ್ಷರ ದಾಸೋಹ ಅಧಿಕಾರಿ ಮಲ್ಲನಗೌಡ ಪಾಟೀಲ್, ಬಿ.ಆರ್.ಪಿ. ರಾಜಶೇಖರ್ ಪತ್ತಾರ್, ಮೊಷಿನ್ ಖಾನ್ ಇದ್ದರು. ಶಿಕ್ಷಕರಾದ ಚಂದಪ್ಪ ಹುರುಸಗುಂಡಿಗಿ ನಿರೂಪಿಸಿದರು. ಪದ್ಮಾ ಸಗರ ಸ್ವಾಗತಿಸಿದರು. ಕೋಶಾಧ್ಯಕ್ಷ ಶಿವಪ್ರಸಾದ್ ಕರದಳ್ಳಿ ವಂದಿಸಿದರು.
------ಫೋಟೊ: ಶಹಾಪುರ ನಗರದ ಫಕೀರೇಶ್ವರ ಮಠದಲ್ಲಿ 2022-23ನೇ ಸಾಲಿನಲ್ಲಿ ನೂತನವಾಗಿ ನೇಮಕಗೊಂಡ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸ್ವಾಗತ ಕಾರ್ಯಕ್ರಮ ಹಮ್ಮಿಕೊಳಲಾಗಿತ್ತು.
12ವೈಡಿಆರ್10: