ಶೈಕ್ಷಣಿಕ ಪ್ರಗತಿಗೆ ಶಿಕ್ಷಕರು ಆದ್ಯತೆ ನೀಡಲಿ

KannadaprabhaNewsNetwork |  
Published : Jun 01, 2025, 03:44 AM IST
ಕಾರಟಗಿ ತಾಲೂಕಿನ ಬೇವಿನಾಳ ಸರಕಾರಿ ಪ್ರಾಥಮಿಕ ಶಾಲೆ ಮಕ್ಕಳಿಗೆ ಮೊದಲ ದಿನ ಪುಸ್ತಕಗಳನ್ನು ವಿತರಿಸಲಾಯಿತು. ಮುಖ್ಯಗುರು ಕಳಕೇಶ ಗುಡ್ಲಾನೂರು ಇದ್ದರು. | Kannada Prabha

ಸಾರಾಂಶ

ಮಕ್ಕಳು ಮಾನಸಿಕವಾಗಿ ಸದೃಢವಾಗಲು ಹಾಗೂ ಬೌದ್ಧಿಕ ಪ್ರಜ್ಞೆ ವಿಕಸಿತಗೊಳ್ಳಲು ಒಳ್ಳೆಯ ಸಂಸ್ಕಾರ ನೀಡಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಆದ್ಯತೆ ನೀಡಬೇಕು.

ಕಾರಟಗಿ:

ಪಟ್ಟಣದ ಉನ್ನತೀಕರಿಸಿದ ಬಾಲಕರ-ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ ಸೇರಿದಂತೆ ತಾಲೂಕಿನ ಗ್ರಾಮೀಣ ಪ್ರದೇಶದ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಶಾಲಾ ಪ್ರಾರಂಭೋತ್ಸವ ಶುಕ್ರವಾರ ವಿಜೃಂಭಣೆಯಿಂದ ವಿದ್ಯುಕ್ತವಾಗಿ ನಡೆಯಿತು.

ಶಾಲೆಗೆ ಆಗಮಿಸಿದ ಮಕ್ಕಳಿಗೆ ತಲೆ ಮೇಲೆ ಹೂವಿನ ಮಳೆ ಸುರಿಸಿ ಶಿಕ್ಷಕರು, ಎಸ್‌ಡಿಎಂಸಿ ಮಂಡಳಿ ಸ್ವಾಗತಿಸಿತು. ಬಳಿಕ ಸರಸ್ವತಿ-ಗಣಪತಿ ಪೂಜೆ ಮಾಡಿ ಮಕ್ಕಳಿಗೆ ಸಿಹಿ ವಿತರಿಸಲಾಯಿತು. ಮೊದಲ ದಿನವೇ 90ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಗಮಿಸಿದ್ದರಿಂದ ಕೊಠಡಿ, ಮೈದಾನದಲ್ಲಿ ಮಕ್ಕಳ ಕಲರವ ಕಂಡು ಬಂದಿತು.

ಶಾಲಾ ಆರಂಭೋತ್ಸವಕ್ಕೆ ಚಾಲನೆ ನೀಡಿದ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷ ನಾಗರಾಜ ಅರಳಿ ಮಾತನಾಡಿ, ಮಕ್ಕಳು ಮಾನಸಿಕವಾಗಿ ಸದೃಢವಾಗಲು ಹಾಗೂ ಬೌದ್ಧಿಕ ಪ್ರಜ್ಞೆ ವಿಕಸಿತಗೊಳ್ಳಲು ಒಳ್ಳೆಯ ಸಂಸ್ಕಾರ ನೀಡಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ಶಿಕ್ಷಕ ಅಮರೇಶ ಮೈಲಾಪೂರ ಮಾತನಾಡಿ, ಶಾಲಾ ದಾಖಲಾತಿ ಹಮ್ಮಿಕೊಂಡಿದ್ದು 5 ವರ್ಷ 5 ತಿಂಗಳು ತುಂಬಿದ ಮಗುವನ್ನು ಸರ್ಕಾರಿ ಶಾಲೆಗೆ ಸೇರಿಸಿಬೇಕೆಂದು ಪಾಲಕರಿಗೆ ಕರೆ ನೀಡಿದರು.

ಮುಖ್ಯಶಿಕ್ಷಕ ಶಾಮಸುಂದರ ಇಂಜನಿ, ಬಸಯ್ಯ ಮಠ, ಸಿಆರ್‌ಪಿ ತಿಮ್ಮಣ್ಣ ನಾಯಕ, ಎಸ್‌ಡಿಎಂಸಿ ಅಧ್ಯಕ್ಷ ಆಂಜನೇಯ ಬೇವಿನಾಳ, ವೆಂಕಟೇಶ ಈಡಿಗೇರ, ಎಸ್‌ಡಿಎಂಸಿ ಉಪಾಧ್ಯಕ್ಷೆ ಪವಿತ್ರಾ ವೆಂಕಟೇಶ, ಮಮತಾ ಎಸ್. ರಜಪೂತ, ಸದಸ್ಯರಾದ ಸಲೀಮಾ, ಕಾಸಂಬಿ, ಮಂಜುಳಾ, ಅಪ್ಪಣ್ಣ, ಶ್ರೀದೇವಿ, ಶಿಕ್ಷಕಿಯರಾದ ಸುವರ್ಣ ಪ್ರಮೀಳಾ ದೇವಿ, ಶಾರದಾ ಇದ್ದರು.

ಪಠ್ಯಪುಸ್ತಕ ವಿತರಣೆ:ತಾಲೂಕಿನ ಬೇವಿನಾಳ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮೊದಲೇ ದಿನವೇ ಮಕ್ಕಳಿಗೆ ಪಿಡಿಒ ಪ್ರಕಾಶ ಹಿರೇಮಠ, ಭೀಮಣ್ಣ ಭೋವಿ, ರೈತ ಸಂಘದ ಮುಖಂಡ ಸಿದ್ದಪ್ಪ ಶಿಕ್ಷಣ ಇಲಾಖೆಯಿಂದ ಬಂದಿದ್ದ ಪಠ್ಯಪುಸ್ತಕ ವಿತರಿಸಿದರು. ಶಾಲೆಗಳಿಗೆ ತಳಿರು-ತೋರಣ ಕಟ್ಟಿ ಸಿಂಗರಿಸಿದ್ದರಿಂದ ಮಕ್ಕಳು ಖುಷಿಯಿಂದಲೇ ಬಂದರು. ಶಿಕ್ಷಕರು ಅವರಿಗೆ ವಿವಿಧ ಕ್ರೀಡೆ ಆಡಿಸಿದರು. ಜತೆಗೆ ಮಧ್ಯಾಹ್ನ ಸಿಹಿಯೂಟ ಬಡಿಸಿದರು.

ಬಳಿಕ ಗ್ರಾಮದಲ್ಲಿ ಮಕ್ಕಳೊಂದಿಗೆ ಶಿಕ್ಷಕರು ದಾಖಲಾತಿ ಆಂದೋಲನ ನಡೆಸಿದರು. ನಿಮ್ಮ ಮಕ್ಕಳನ್ನು ಶಾಲೆಗೆ ಕಳಿಸಿ, ಚಿನ್ನಕ್ಕಿಂತ ಅನ್ನಲೇಸು, ಅನ್ನಕ್ಕಿಂತ ಅಕ್ಷರಲೇಸು. ದುಡ್ಡೆ ದೊಡ್ಡಪ್ಪ ವಿದ್ಯೆ ಅದರಪ್ಪ ಎಂಬ ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಘೋಷಣೆ ಕೂಗಿದರು.

ಸಾಲಿ ಕಲಿಯದೆ ನಮ್ಮ ಬಾಳು ಪೂರಾ ಅತಂತ್ರ ಆಗೈತಿ. ನಮ್ಮ ಮಕ್ಕಳನ ಖಂಡಿತ ಶಾಲೆಗೆ ಕಳಿಸುವೆವು. ಅವ್ರ ಬದುಕರ ಚಂದಾಗ್ಲಿ ಎಂದು ಬಡ ಮಹಿಳಾ ಕೂಲಿಕಾರ್ಮಿಕರು ಮಕ್ಕಳನ್ನು ಶಾಲೆಗೆ ಸೇರಿಸುವ ಭರವಸೆ ನೀಡಿದರು. ಈ ವೇಳೆ ಮುಖ್ಯಶಿಕ್ಷಕ ಕಳಕೇಶ ಡಿ. ಗುಡ್ಲಾನೂರ, ಎಸ್‌ಡಿಎಂಸಿ ಪದಾಧಿಕಾರಿಗಳು, ಹಳೆವಿದ್ಯಾರ್ಥಿ ಸಂಘದ ಸದಸ್ಯರು ಗ್ರಾಪಂನ ರೇಣುಕಾ, ಸುನೀತಾ ಇದ್ದರು.

ಅದೇ ರೀತಿ ರಾಜೀವ ಗಾಂಧಿನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲೂ ಸಹ ಶಾಲಾ ಪ್ರಾರಂಭೋತ್ಸವ ಹಾಗೂ ದಾಖಲಾತಿ ಆಂದೋಲನ ನಡೆಯಿತು. ಈ ವೇಳೆ ಮುಖ್ಯಶಿಕ್ಷಕ ಶಿಕ್ಷಕ ಕೇರು, ಸಹ ಶಿಕ್ಷಕರಾದ ವೆಂಕಟರೆಡ್ಡಿ, ಅಶೋಕ ಹೊಸಮನಿ, ಸುರೇಖಾ ಪೊಲೀಸ್‌ಪಾಟೀಲ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!