ಕನ್ನಡಪ್ರಭ ವಾರ್ತೆ ಹಿರಿಯೂರು
ತಾಲೂಕಿನ ಎಸ್ಎಸ್ಎಲ್‌ಸಿ ಮಕ್ಕಳ ಪರೀಕ್ಷಾ ಫಲಿತಾಂಶ ಉತ್ತಮ ಗುಣಮಟ್ಟದಲ್ಲಿರಲು ಎಲ್ಲಾ ಶಿಕ್ಷಕರು ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಕರೆ ನೀಡಿದರು.ತಾಲೂಕಿನ ಶಾಲಾ ಶಿಕ್ಷಣ ಇಲಾಖೆ ಏರ್ಪಡಿಸಿದ್ದ ಪ್ರೌಢಶಾಲಾ ಮುಖ್ಯ ಶಿಕ್ಷಕರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಖಾಸಗಿ ಪ್ರೌಢಶಾಲೆಗಳ ಶಿಕ್ಷಕರ ನೇಮಕಾತಿಗೆ ತೊಂದರೆ ಆಗಿರುವುದರಿಂದ ವೈಯಕ್ತಿಕವಾಗಿ ಸಮಸ್ಯೆಗೆ ಸ್ಪಂದಿಸುತ್ತೇನೆ. ಹೊಸದಾಗಿ ನೇಮಕ ಹೊಂದಿ ಕರ್ತವ್ಯಕ್ಕೆ ಹಾಜರಾದ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಇದೇ ಸಂದರ್ಭದಲ್ಲಿ ಶುಭ ಕೋರುತ್ತೇನೆ. ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ ಸಾವಿರಾರು ಮಕ್ಕಳ ಭವಿಷ್ಯ ಕಟ್ಟಿಕೊಡಿ. ಶಾಲೆಗಳಲ್ಲಿ ಮೂಲಸೌಕರ್ಯಗಳ ಕೊರತೆ ಬಗ್ಗೆ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮುಖ್ಯ ಶಿಕ್ಷಕರು ಮನವಿ ಮಾಡಿದ್ದು, ಈಗಾಗಲೇ ಇದಕ್ಕಾಗಿ ಯೋಜನೆ ಸಿದ್ಧಪಡಿಸಿದ್ದು ಶೀಘ್ರ ಮೂಲಸೌಕರ್ಯ ಒದಗಿಸಲಾಗುವುದು.
ವಸತಿ ಪ್ರದೇಶದಿಂದ ಹೊರಗಿರುವ ಶಾಲೆಗಳಲ್ಲಿನ ಸಾಮಗ್ರಿಗಳ ಭದ್ರತೆಗಾಗಿ ಸಿಸಿ ಕ್ಯಾಮೆರಾ ಅಳವಡಿಸಲು ಶಾಲೆಗಳ ಪಟ್ಟಿ ನೀಡಿ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಸಿಎಂ ತಿಪ್ಪೇಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, ಶೈಕ್ಷಣಿಕ ಪ್ರಗತಿಗಾಗಿ ಹಮ್ಮಿಕೊಂಡಿರುವ ದತ್ತು ಯೋಜನೆ, ಪ್ರತಿ ಮಾಹೆ ನಡೆಸಿದ ಮುಖ್ಯ ಶಿಕ್ಷಕರ ಮತ್ತು ವಿಷಯ ಶಿಕ್ಷಕರ ಸಭೆ, ಪೋಷಕರ ಸಭೆ, ಅಂತರ ಶಾಲಾ ಶೈಕ್ಷಣಿಕ ಸ್ಪರ್ಧೆ, ಆಪ್ತ ಸಮಾಲೋಚನೆ, ವಿದ್ಯಾರ್ಥಿಗಳ ಮನೆ ಭೇಟಿ ಕಾರ್ಯಕ್ರಮ, ಫೋನ್ ಇನ್ ಕಾರ್ಯಕ್ರಮ, ಶಾಲಾ ಹಂತದ ಪೂರ್ವ ಸಿದ್ಧತಾ ಪರೀಕ್ಷಾ ಫಲಿತಾಂಶ ವಿಶ್ಲೇಷಣೆ ಮತ್ತು ಪುನರ್ಮನನ ತರಗತಿಗಳನ್ನು ಚಾಚೂ ತಪ್ಪದೇ ನಡೆಸಲಾಗುತ್ತಿದೆ. ತಾಲೂಕಿನ ಮಕ್ಕಳ ಫಲಿತಾಂಶದಲ್ಲಿ ಪ್ರಗತಿ ಕಾಣಲು ಎಲ್ಲರೂ ಶ್ರಮವಹಿಸಬೇಕು ಎಂದರು. ಇದೇ ವೇಳೆ ಶೈಕ್ಷಣಿಕ ಪ್ರಗತಿಗೆ ಹಮ್ಮಿಕೊಂಡ ಕಾರ್ಯಕ್ರಮಗಳ ವಿಡಿಯೋ ಪ್ರದರ್ಶನ ಮಾಡಲಾಯಿತು.ಕಳೆದ ವರ್ಷ ಎಸ್ಎಸ್ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಶಾಲೆಗಳು ಪಡೆದ ಪಲಿತಾಂಶ ಮತ್ತು ಪ್ರಸ್ತುತ ಶೈಕ್ಷಣಿಕ ವರ್ಷದ ನಿರೀಕ್ಷಿತ ಫಲಿತಾಂಶದ ಬಗ್ಗೆ ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಆರ್.ಟಿ.ಎಸ್ ಶ್ರೀನಿವಾಸ್, ರಂಗಾನಾಯ್ಕ, ಶಂಕರ್ ಲಿಂಗಯ್ಯ, ಶ್ರೀನಿವಾಸ್ ರೆಡ್ಡಿ, ಭಾಗ್ಯಮ್ಮ, ಲೋಹಿತ್, ಅನಿತಾ ಮುಂತಾದವರು ಮಾತನಾಡಿದರು.
ಈ ವೇಳೆ ತಾಲೂಕಿನ ಪ್ರೌಢಶಾಲಾ ಮುಖ್ಯ ಶಿಕ್ಷಕರು, ಶಿಕ್ಷಣ ಸಂಯೋಜಕರು, ಸಿಆರ್‌ಪಿ ಮತ್ತು ಬಿಆರ್‌ಪಿಗಳು ಹೊಸದಾಗಿ ನೇಮಕಾತಿ ಹೊಂದಿ ಕರ್ತವ್ಯಕ್ಕೆ ಹಾಜರಾದ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು ಹಾಜರಿದ್ದರು.