ಹಗರಿಬೊಮ್ಮನಹಳ್ಳಿ: ಮಕ್ಕಳು ವ್ಯಾಕರಣ, ಇತಿಹಾಸ, ವಿಜ್ಞಾನ ವಿಷಯ ವಸ್ತು ದೀರ್ಘ ಕಾಲದವರೆಗೆ ಸ್ಮರಣೆಯಲ್ಲಿಡುವಂತೆ ಶಿಕ್ಷಕರು ರೂಪಿಸಲಾದ ಸಾಧನಗಳು ಸೂಕ್ತವಾಗಿವೆ ಎಂದು ಬಿಇಒ ಮೈಲೇಶ್ ಬೇವೂರ್ ತಿಳಿಸಿದರು.
ಶಿಕ್ಷಕರು ಹೊಸತನ್ನು ಅನ್ವೇಷಿಸುವ ಮೂಲಕ ಮಕ್ಕಳ ಕಲಿಕೆಗೆ ಪ್ರೇರಕ ಶಕ್ತಿಯಾಗಬೇಕಿದೆ. ಈ ನಿಟ್ಟಿನಲ್ಲಿ ಜಿಪಿಟಿ ಶಿಕ್ಷಕರು ಶಾಲಾ ಹಂತದಲ್ಲಿ ಮಕ್ಕಳ ಕಲಿಕಾಗುಣಮಟ್ಟ ಹೆಚ್ಚಿಸುವ ಸಾಧನೆ, ಸಾಧನಗಳು ಮತ್ತು ಪರಸ್ಪರ ಹಾಗೂ ಸಮುದಾಯದ ಸಹಭಾಗಿತ್ವದಲ್ಲಿ ನೀಡಲಾದ ಕೊಡುಗೆಗಳ ಮೌಲ್ಯಮಾಪನಕ್ಕೆ ಪ್ರದರ್ಶನ ಮತ್ತು ವಿಚಾರಸಂಕಿರಣ ಪೂರಕವಾಗಿದೆ ಎಂದರು.ತಾಲೂಕಿನ ೫೪ಕ್ಕೂ ಹೆಚ್ಚು ಶಿಕ್ಷಕರು ತಮ್ಮ ಶಾಲೆಗೆ ನೀಡಿದ ವಾರ್ಷಿಕ ಕೊಡುಗೆ, ಕೈಗೊಂಡ ಪ್ರಯೋಗಗಳು, ರಚಿಸಲಾದ ಕ್ರಿಯಾತ್ಮಕ ಕಲಿಕಾ ಸಾಮಾಗ್ರಿಗಳ ಪ್ರದರ್ಶನ ಗಮನಸೆಳೆಯಿತು. ವಿಜ್ಞಾನ ಮತ್ತು ಗಣಿತದ ಸೂತ್ರಗಳು, ಇಂಗ್ಲೀಷ್ ಕಲಿಕೆಗೆ ಸಾಧನಗಳು, ಸಮಾನಾರ್ಥಕ ಪದಗಳು, ಇತಿಹಾಸ, ಶಿಲ್ಪಕಲೆ ಚಿತ್ರಗಳು ಸೇರಿ ವಿದ್ಯಾರ್ಥಿಗಳ ಕಲಿಕೆಗೆ ಕೈಗೊಂಡ ಹಲವು ಪ್ರಯೋಗಗಳು ಗಮನಸೆಳೆದವು. ಸರಕಾರಿ ನೌಕರರ ಸಂಘದ ಅಧ್ಯಕ್ಷ ಎಂಪಿಎ ಮಂಜುನಾಥ, ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಪ್ಪ, ಪತ್ತಿನ ಸಂಘದ ಹುಸೇನ್‌ಸಾಬ್, ಅಜೀಮ್ ಪ್ರೇಮ್‌ಜಿ ಪ್ರತಿಷ್ಠಾನದ ಜಗದೀಶ, ಬಿಆರ್‌ಪಿ ಮಲ್ಲಿಕಾರ್ಜುನ, ರಾಜ್ಯ ಸಂಪನ್ಮೂಲ ವ್ಯಕ್ತಿ ಎಸ್.ಕೊಟ್ರೇಶ್ ಇದ್ದರು. ಕಾರ್ಯಕ್ರಮದ ನೋಡೆಲ್ ಅಧಿಕಾರಿ ಡಾ.ಪರಮೇಶ್ವರ ಸೊಪ್ಪಿಮಠ ನಿರ್ವಹಿಸಿದರು.
ಹಗರಿಬೊಮ್ಮನಹಳ್ಳಿ ಪಟ್ಟಣದ ಗುರುಭವನದಲ್ಲಿ ನಡೆದ ಜಿಪಿಟಿ ಶಿಕ್ಷಕರ ವಾರ್ಷಿಕ ಕೊಡುಗೆಗಳ ಪ್ರದರ್ಶನದಲ್ಲಿ ಬಿಇಒ ಮೈಲೇಶ್ ಬೇವೂರ್ ಶಿಕ್ಷಕರ ಸಾಧನಗಳನ್ನು ಪರಿಶೀಲಿಸಿ ಪ್ರಶ್ನಿಸಿ, ಶಿಕ್ಷಕರಿಂದ ಉತ್ತರ ಪಡೆದರು.