ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಚಿನಕುರಳಿಯ ಎಸ್‌ಟಿಜಿ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ದತ್ತಿಟ್ರಸ್ಟ್ ವತಿಯಿಂದ ನಡೆದ ಎಸ್‌ಟಿಜಿ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಮಾತನಾಡಿ, ಶಾಲಾ- ಕಾಲೇಜುಗಳಲ್ಲಿ ಗುರುಗಳಿಂದ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಡಾಕ್ಟರ್, ಇಂಜಿನಿಯರ್, ಉದ್ಯಮಿ ಸೇರಿದಂತೆ ದೊಡ್ಡದೊಡ್ಡ ಅಧಿಕಾರಿಗಳಾಗಿ ರೂಪುಗೊಳ್ಳುತ್ತಾರೆ. ಆದರೆ, ವಿದ್ಯೆ ಕೊಟ್ಟ ಗುರುಗಳು ಮಾತ್ರ ಕೊನೆಯವರೆಗೂ ಗುರುಗಳಾಗಿಯೇ ಉಳಿದುಕೊಳ್ಳುತ್ತಾರೆ ಎಂದರು.
ಗುರು ಸ್ಥಾನ ಎನ್ನುವುದು ಬಹಳ ದೊಡ್ಡದು. ವಿದ್ಯೆ ಕಲಿತ ಪ್ರತಿಯೊಬ್ಬ ವಿದ್ಯಾರ್ಥಿಗಳು ಸಹ ಗುರುಭಕ್ತಿ ರೂಡಿಸಿಕೊಳ್ಳಬೇಕು. ಪೋಷಕರು ಮಕ್ಕಳನ್ನು ದೇಶಕ್ಕೆ ಅನ್ನಕೊಡುವ ರೈತ, ದೇಶಕಾಯುವ ಸೈನಿಕರನ್ನಾಗಿ ಮಾಡಬೇಕು ಎಂದು ಸಲಹೆ ನೀಡಿದರು.ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಎಸ್‌ಟಿಜಿ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಗೆ ಬೇಕಿರುವ ಉತ್ತಮವಾದ ವಾತಾವರಣ ನಿರ್ಮಾಣ ಮಾಡಿದೆ. ನಾನು ಹಲವು ಶಿಕ್ಷಣ ಸಂಸ್ಥೆಗಳಿಗೆ ಹೋಗಿದ್ದೇನೆ. ಅದರಲ್ಲಿ ಕೆಲವು ಶಿಕ್ಷಣ ಸಂಸ್ಥೆಗಳು ತುಂಬಾ ಚನ್ನಾಗಿವೆ. ಆದರೆ, ನಾನು ಎಸ್‌ಟಿಜಿ ಶಿಕ್ಷಣ ಸಂಸ್ಥೆಗೆ ಬಂದಾಗ ನನಗೆ ಅಚ್ಚ ಕನ್ನಡದ ವಾತಾವರಣ ಕಂಡುಬಂತು ಎಂದರು.
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾಭ್ಯಾಸದ ದಿನಗಳಲ್ಲಿ ಕಟ್ಟಪಟ್ಟು ಓದಿ ಭವಿಷ್ಯ ರೂಪಿಸಿಕೊಂಡರೆ ನಾವು ಮುಂದೆ ಅಂದುಕೊಂಡಿದ್ದನ್ನು ಸಾಧಿಸಬಹುದು ಎಂದರು.
ಸಮಾರಂಭವನ್ನು ಡಿಡಿಪಿಐ ಸಿ.ಚಲುವಯ್ಯ ಉದ್ಘಾಟಿಸಿ ಮಾತನಾಡಿ, ಎಸ್‌ಟಿಜಿ ಶಿಕ್ಷಣ ಸಂಸ್ಥೆಯೂ ಹಲವು ಉತ್ತಮ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಇಷ್ಟೊಂದು ಉತ್ತಮವಾದ ಸಂಸ್ಥೆಯನ್ನು ನಿರ್ಮಿಸಲು ಸಂಸ್ಥೆ ಅಧ್ಯಕ್ಷ ಸಿ.ಎಸ್.ಪುಟ್ಟರಾಜು ಸಾಕಷ್ಟು ಶ್ರಮಿಸಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಗಳು ಜೀವನದಲ್ಲಿ ಗುರಿಇಟ್ಟುಕೊಂಡು ಓದಿ ಸಾಧನೆ ಮಾಡಬೇಕು ಎಂದು ತಿಳಿಸಿದರು.
ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್‍ಯಕ್ರಮ ನಡೆಯಿತು. ಮಕ್ಕಳಿಂದ ಮೂಡಿಬಂದ ನೃತ್ಯ ಪ್ರದರ್ಶನವನ್ನು ಕಂಡು ಪೋಷಕರು ಸಂಭ್ರಮಿಸಿದರು.ಸಮಾರಂಭದಲ್ಲಿ ಅಮೆರಿಕಾದ ವಕೀಲ ಅಮರನಾಥ್‌ಗೌಡ, ಉದ್ಯಮಿ ವಿಶ್ವಾಮಿತ್ರ, ಈ ಸಂಜೆ ಪತ್ರಿಕೆ ಸಂಪಾದಕ ಎಂ.ನಾಗರಾಜು, ಶಾಂತಿನಿಕೇತನ ಕುಮಾರಸ್ವಾಮಿ, ಜಿಪಂ ಮಾಜಿ ಸದಸ್ಯೆ ನಾಗಮ್ಮಪುಟ್ಟರಾಜು, ಸಿಇಒ ಸಿ.ಪಿ.ಶಿವರಾಜು, ಕಾರ್‍ಯದರ್ಶಿ ಸಿ.ಹರೀಶ್, ಪ್ರಾಂಶುಪಾಲ ಮಾರುತಿ, ಆಡಳಿತಾಧಿಕಾರಿ ನಿವೇದಿತ ನಾಗೇಶ್, ಮುಖ್ಯಶಿಕ್ಷಕಿ ಮಾಚಮ್ಮ ಸೇರಿದಂತೆ ಹಲವರು ಇದ್ದರು.