ಕಳೆದ 34 ವರ್ಷಗಳ ಸುದೀರ್ಘ ಸೇವಾವಧಿಯಲ್ಲಿ ನೂರಾರು ವಿದ್ಯಾರ್ಥಿಗಳ ಉತ್ತಮ ಭವಿಷ್ಯವನ್ನು ರೂಪಿಸಲು ಸಾಧ್ಯವಾಗಿರುವುದು ನನ್ನ ಶಿಕ್ಷಕ ವೃತ್ತಿಜೀವನಕ್ಕೆ ಅಪಾರ ತೃಪ್ತಿ ತಂದಿದೆ ಎಂದು ನಿವೃತ್ತ ಮುಖ್ಯಶಿಕ್ಷಕ ದಿದ್ದಿಗಿ ಮಂಜಪ್ಪ ಅಭಿಪ್ರಾಯಪಟ್ಟಿದ್ದಾರೆ.
- ಗುರುಸಿದ್ದಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಸನ್ಮಾನ-ಬೀಳ್ಕೊಡುಗೆ
- - -
ಕನ್ನಡಪ್ರಭ ವಾರ್ತೆ ಜಗಳೂರು
ಕಳೆದ 34 ವರ್ಷಗಳ ಸುದೀರ್ಘ ಸೇವಾವಧಿಯಲ್ಲಿ ನೂರಾರು ವಿದ್ಯಾರ್ಥಿಗಳ ಉತ್ತಮ ಭವಿಷ್ಯವನ್ನು ರೂಪಿಸಲು ಸಾಧ್ಯವಾಗಿರುವುದು ನನ್ನ ಶಿಕ್ಷಕ ವೃತ್ತಿಜೀವನಕ್ಕೆ ಅಪಾರ ತೃಪ್ತಿ ತಂದಿದೆ ಎಂದು ನಿವೃತ್ತ ಮುಖ್ಯಶಿಕ್ಷಕ ದಿದ್ದಿಗಿ ಮಂಜಪ್ಪ ಅಭಿಪ್ರಾಯಪಟ್ಟರು.
ತಾಲೂಕಿನ ಗುರುಸಿದ್ದಾಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ನಿವೃತ್ತಿ ಹಿನ್ನೆಲೆ ಹಮ್ಮಿಕೊಳ್ಳಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಗುರುಸಿದ್ದಾಪುರಕ್ಕೆ ಕೂಗಳತೆ ದೂರದಲ್ಲಿರುವ ಹನುಮನಹಳ್ಳಿಯ ಮಣ್ಣಿನಲ್ಲಿ ನಾನು ಜನಿಸಿದವನು. ಮಾಜಿ ಶಾಸಕ ಬಸಪ್ಪ ಆಡಳಿತಾವಧಿಯಲ್ಲಿ ಗುರುಸಿದ್ದಾಪುರದಲ್ಲಿ ಪ್ರೌಢಶಾಲೆ ಸ್ಥಾಪನೆ ಆದಾಗ ಯಾವುದೇ ತಂತ್ರಜ್ಞಾನ, ಸಾರಿಗೆ ಸಂಪರ್ಕವಿಲ್ಲದೇ ಸಾಕಷ್ಟು ಸವಾಲುಗಳಿದ್ದವು. ಅಂತಹ ಕಠಿಣ ಪರಿಸ್ಥಿತಿಯಲ್ಲೂ ಶಾಲೆಯನ್ನು ಉಳಿಸಿ ಬೆಳೆಸಿದೆವು ಎಂದರು.
ಇಂದು ಈ ಶಾಲೆ 200ಕ್ಕೂ ಹೆಚ್ಚು ದಾಖಲಾತಿ ಹೊಂದಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿರುವುದು ಹೆಮ್ಮೆಯ ಸಂಗತಿ. ಇಂತಹ ಸಂಸ್ಥೆಯಲ್ಲೇ ನಿವೃತ್ತಿ ಹೊಂದುತ್ತಿರುವುದು ನನ್ನ ಸೌಭಾಗ್ಯ. ಸಹೋದ್ಯೋಗಿಗಳ ಸಹಕಾರದಿಂದ ಎಲ್ಲ ಸವಾಲುಗಳನ್ನು ಎದುರಿಸಲು ಸಾಧ್ಯವಾಯಿತು. ಮುಂದಿನ ಮುಖ್ಯಶಿಕ್ಷಕರು ಶೈಕ್ಷಣಿಕ ಚಟುವಟಿಕೆಗಳಿಗೆ ಧಕ್ಕೆ ಆಗದಂತೆ ಮುನ್ನಡೆಸಬೇಕು. ಶಾಲೆಯ 2 ಖಾಲಿ ಹುದ್ದೆಗಳಿಗೆ ಶೀಘ್ರದಲ್ಲೇ ಶಿಕ್ಷಕರು ನಿಯೋಜನೆಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಸಮಾಜಕ್ಕೆ ಮಾದರಿ ದಂಪತಿ:
ಮುಖ್ಯ ಅತಿಥಿ ಬಿಇಒ ಹಾಲಮೂರ್ತಿ ಮಾತನಾಡಿ, ದಿದ್ದಿಗಿ ಮಂಜಪ್ಪ ಅವರು ಬಿಇಒ ಕಚೇರಿಯಲ್ಲಿ ಇಸಿಒ ಆಗಿ ಎಲ್ಲರ ವಿಶ್ವಾಸ ಗಳಿಸಿದ್ದರು. ಪ್ರೌಢಶಾಲಾ ಶಿಕ್ಷಕರ ಸಂಘದಲ್ಲೂ ಸಕ್ರಿಯರಾಗಿ ಗುರುತಿಸಿಕೊಂಡಿದ್ದರು. ದೇಶಕ್ಕೆ ಪೂರಕವಾದ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಿದ್ದಾರೆ. ಈ ಶಿಕ್ಷಕ ದಂಪತಿ ತಮ್ಮ ಇಬ್ಬರು ಮಕ್ಕಳಿಗೂ ವೈದ್ಯಕೀಯ (ಮೆಡಿಕಲ್) ಶಿಕ್ಷಣ ಕೊಡಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಿ, ಅವರ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು.
ನೌಕರರ ಸಂಘದ ಮಾಜಿ ಅಧ್ಯಕ್ಷ ಹಾಗೂ ಮುಖ್ಯಶಿಕ್ಷಕ ಚಂದ್ರಪ್ಪ ಮಾತನಾಡಿ, ಮಂಜಪ್ಪ ಅವರ ಶಿಸ್ತು, ಉತ್ಸಾಹ, ಜ್ಞಾನಸಂಪತ್ತು ಹಾಗೂ ಸಂಘಟನಾ ಚತುರತೆ ತಾಲೂಕಿನ ಶಿಕ್ಷಣ ಇಲಾಖೆಯ ಪ್ರಗತಿಗೆ ಸಾಕ್ಷಿಯಾಗಿದೆ. ಗಡಿಭಾಗದ ಶಿಕ್ಷಕರ ವಿಶ್ವಾಸ ಗಳಿಸಿ ಶೈಕ್ಷಣಿಕ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದ ಅವರ ಕೌಶಲ್ಯ ನಮಗೆ ಸದಾ ಸ್ಫೂರ್ತಿ ಎಂದರು.
ಈ ಸಂದರ್ಭದಲ್ಲಿ ಬಿಆರ್‌ಸಿ ಡಿಡಿ ಹಾಲಪ್ಪ, ಶಿಕ್ಷಕಿ ನೀಲಾಂಬಿಕೆ ಮಂಜಪ್ಪ, ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಮಹಾಂತೇಶ್, ಪದಾಧಿಕಾರಿಗಳಾದ ಮಧು, ಕಲ್ಲಿನಾಥ್, ಬಾಲರಾಜ್, ಸಿದ್ಲಿಂಗಪ್ಪ, ಶಿಕ್ಷಕರಾದ ವಿಶ್ವನಾಥ್, ಆಶಾ, ತಿಪ್ಪೇಸ್ವಾಮಿ, ನಿವೃತ್ತ ಶಿಕ್ಷಕರಾದ ಜಯಶೀಲ ರೆಡ್ಡಿ, ಮಾದಿಹಳ್ಳಿ ರವಿ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.
- - -
-30 ಜೆ.ಜಿ.ಎಲ್.2:
ಜಗಳೂರು ತಾ. ಗುರುಸಿದ್ದಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಸೇವೆಯಿಂದ ನಿವೃತ್ತಿ ಹೊಂದಿದ ಮುಖ್ಯಶಿಕ್ಷಕ ದಿದ್ದಿಗಿ ಮಂಜಪ್ಪ ಹಾಗೂ ದಂಪತಿಯನ್ನು ಸನ್ಮಾನಿಸಿ, ಆತ್ಮೀಯ ಬೀಳ್ಕೊಡುಗೆ ನೀಡಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.