ಶಿರಸಿ:
ಶಿರಸಿ ತಾಲೂಕಿನ ಸೋಮನಳ್ಳಿಯ ಅಣ್ಣಪ್ಪ ಪರಶುರಾಮ ಬಡಗಿ (42), ಸಿದ್ದಾಪುರ ತಾಲೂಕಿನ ಗಿರಗಡ್ಡೆ ಸಮೀಪದ ಕಾನಗದ್ದೆಯ ನಿವಾಸಿಗಳಾದ ವಿನಾಯಕ ರಾಮಾ ದೇವಾಡಿಗ(32), ರಾಮಾ ಗೋವಿಂದ ದೇವಾಡಿಗ (60) ಹಾಗೂ ನಾಗೇಂದ್ರ ಮಹಾದೇವ ದೇವಾಡಿಗ(43) ಬಂಧಿತರು.
ಶಿರಸಿ ತಾಲೂಕಿನ ಸೋಮನಳ್ಳಿ ಗ್ರಾಮದ ಅರಣ್ಯ ಸರ್ವೆ ನಂಬರ್ 8ರಲ್ಲಿ ಅನಧಿಕೃತವಾಗಿ 2 ಸಾಗವಾನಿ ಮರವನ್ನು ಕಡಿದು ನಾಟ ತಯಾರಿಸಿ, ದಾಸ್ತಾನು ಇಟ್ಟಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ, ನಾಲ್ವರನ್ನು ಬಂಧಿಸಿ 5 ನಗಗಳಿಂದ 0.399 ಕ್ಯೂಬಿಕ್ ನಾಟ ಹಾಗೂ ಕೃತ್ಯಕ್ಕೆ ಬಳಸಿದ ಪಿಕ್‌ಅಪ್ ಬುಲೆರೋ ವಾಹನ ವಶಪಡಿಸಿಕೊಂಡಿದ್ದಾರೆ.ಸಿದ್ದಾಪುರ ತಾಲೂಕಿನ ಗಡಿಪ್ರದೇಶದಲ್ಲಿರುವ ಗಿರಗಡ್ಡೆ ಗ್ರಾಮದ ಕಾನಗದ್ದೆ-ಅರೇಹಳ್ಳ ಭಾಗದ ಅರಣ್ಯ ಪ್ರದೇಶದಲ್ಲಿ ಈ ಹಿಂದೆ ಸಾವಿರಾರು ಜಾತಿಯ ಬೆಲೆಬಾಳುವ ಮರಗಳಿದ್ದವು. ಅರಣ್ಯಚೋರರಿಂದ ಮರಗಳೆಲ್ಲವೂ ಸರ್ವ ನಾಶವಾಗಿದ್ದು, ಈಗ ಕಾಡು ಜಾತಿಯ ಮರಗಳೇ ಇಲ್ಲವಾಗಿದೆ. ಅವ್ಯಾಹತವಾಗಿ ಮರಗಳ ಕಳ್ಳತನ ನಡೆಯುತ್ತಿದ್ದರೂ ಇಷ್ಟು ವರ್ಷ ಅರಣ್ಯ ಇಲಾಖೆಯ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದರು. ಯಾಕೆಂದರೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಿಂಗಳಿಗೆ ಇಂತಿಷ್ಟು ಹಣ ಸಂದಾಯವಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ ಸೂರ್ಯವಂಶಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಸ್.ನಿಂಗಾಣಿ ಮಾರ್ಗದರ್ಶನದಲ್ಲಿ ವಲಯಾರಣ್ಯಾಧಿಕಾರಿ ಗಿರೀಶ ನಾಯ್ಕ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪ ವಲಯಾರಣ್ಯಾಧಿಕಾರಿ ಐಶ್ವರ್ಯ ನಾಯಕ, ಸಂತೋಷ ಕುರುಬರ, ವಿ.ಟಿ.ನಾಯ್ಕ, ಗಸ್ತು ವನ ಪಾಲಕರಾದ ಮಂಜುನಾಥ ದೇವಾಡಿಗ, ಮಂಜುನಾಥ ಶಿಗ್ಲಿ, ಗುಡ್ಡಪ್ಪ ಸೊಪ್ಪಿನ್, ಹನುಮಂತ ಕೆ.ಎಂ. ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.