ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ತಾಂತ್ರಿಕತೊಡಕಗಳು ಅಡ್ಡಿಯಾಗದಿರಲಿ : ರೆಡ್ಡಿ ಶ್ರೀನಿವಾಸ

KannadaprabhaNewsNetwork |  
Published : May 30, 2026, 02:15 AM IST
29ಕೆಪಿಎಲ್26 ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆ | Kannada Prabha

ಸಾರಾಂಶ

ನ್ಯಾಯಬೆಲೆ ಅಂಗಡಿಗಳಿಗೆ ಸರಿಯಾದ ಸಮಯಕ್ಕೆ ಅಕ್ಕಿ ತಲುಪುವಂತೆ ನೋಡಿಕೊಳ್ಳಬೇಕು

ಕೊಪ್ಪಳ: ರಾಜ್ಯ ಸರ್ಕಾರ ಜಾರಿ ಮಾಡಿದ ಶಕ್ತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಗೃಹಜ್ಯೋತಿ ಹಾಗೂ ಯುವನಿಧಿ ಯೋಜನೆಗಳ ಅನುಷ್ಠಾನದಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ಕೊಪ್ಪಳ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ ಹೇಳಿದರು.

ಕೊಪ್ಪಳ ಜಿಪಂ ಸಮಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೇಷನ್ ಅಥವಾ ಆಧಾರ್ ಕಾರ್ಡ್‌ನಲ್ಲಿ ಹೆಸರುಗಳಲ್ಲಿನ ವ್ಯತ್ಯಾಸದಂತಹ ತಾಂತ್ರಿಕ ಕಾರಣಗಳಿಂದ ಕೆಲ ಫಲಾನುಭವಿಗಳಿಗೆ ಸಕಾಲಕ್ಕೆ ಅವರ ಖಾತೆಗೆ ಹಣ ಜಮೆ ಆಗುವುದಿಲ್ಲ. ವಿದ್ಯುತ್ ಬಿಲ್ ಕಟ್ಟಿದ್ದರು ಸಹ ಬಿಲ್ ಬಾಕಿ ತೋರಿಸುವಂತಹ ವಿದ್ಯುತ್ ಮೀಟರ್ ಬಗೆಗಿನ ತಾಂತ್ರಿಕ ತೊಂದರೆ ಇತ್ಯರ್ಥವಾಗಬೇಕು. ನ್ಯಾಯಬೆಲೆ ಅಂಗಡಿಗಳಿಗೆ ಸರಿಯಾದ ಸಮಯಕ್ಕೆ ಅಕ್ಕಿ ತಲುಪುವಂತೆ ನೋಡಿಕೊಳ್ಳಬೇಕು. ಎಲ್ಲ ಕಾರ್ಡುದಾರರ ಮೊಬೈಲ್ ಸಂಖ್ಯೆ ಮತ್ತು ಆಧಾರ್ ಕಾರ್ಡ್ ಲಿಂಕ್ ಆಗುವುದಕ್ಕೆ ಮೊದಲಾದ್ಯತೆ ನೀಡಬೇಕು ಎಂದು ಆಯಾ ಯೋಜನೆಗಳ ಅನುಷ್ಠಾನಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕೊಪ್ಪಳ,ಕುಷ್ಟಗಿ,ಗಂಗಾವತಿ, ಕಾರಟಗಿ, ಕನಕಗಿರಿ, ಯಲಬುರ್ಗಾ,ಕುಕನೂರ ಸೇರಿದಂತೆ ಜಿಲ್ಲೆಯ ಎಲ್ಲ ಕಡೆಗಳಲ್ಲಿ ಪಂಚ ಗ್ಯಾರಂಟಿ ಯೋಜನೆಗಳು ಉತ್ತಮವಾಗಿ ಅನುಷ್ಠಾನವಾಗುತ್ತಿವೆ.ಶಕ್ತಿ ಯೋಜನೆ ಅನುಷ್ಠಾನವು ಜಾಗತಿಕ ದಾಖಲೆ ಬರೆದಿದೆ. ರಾಜ್ಯದಲ್ಲಿ ಶಕ್ತಿ ಯೋಜನೆಯಡಿ ಮೇ 19ರವರೆಗೆ ದಾಖಲೆಯ 726 ಕೋಟಿ ಪ್ರಮಾಣದಲ್ಲಿ ಮಹಿಳೆಯರು ಪ್ರಯಾಣಿಸಿ ಸಾರಿಗೆ ನಿಗಮವು ₹18,943 ಕೋಟಿ ಆದಾಯ ಗಟ್ಟಿಸಿದೆ. ಕೊಪ್ಪಳ ಜಿಲ್ಲೆಯಲ್ಲಿ ಇದುವರೆಗೆ 11.59 ಕೋಟಿ ಪ್ರಮಾಣದಲ್ಲಿ ಮಹಿಳೆಯರು ಪ್ರಯಾಣಿಸಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕೊಪ್ಪಳ ವಿಭಾಗದ ಆದಾಯ ₹431 ಕೋಟಿಗೆ ಹೆಚ್ಚಿದೆ. ರಾಜ್ಯ ಸರ್ಕಾರದ ಯೋಜನೆಗಳ ಜನಪ್ರಿಯತೆಗೆ ಇದು ಸಾಕ್ಷಿಯಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ನೋಂದಾಯಿಸಿಕೊಂಡ 3,07,972 ಗೃಹಲಕ್ಷ್ಮೀ ಫಲಾನುಭವಿಗಳಿಗೆ ಇದುವರೆಗೆ 1791 ಕೋಟಿ ವ್ಯಯಿಸಲಾಗಿದೆ. ಆಗಸ್ಟ್ 2023ರಿಂದ ಏಪ್ರೀಲ್ 2025ರವರೆಗೆ ಜಿಲ್ಲೆಯಲ್ಲಿನ ಅರ್ಹ 2,89,369 ಗೃಹ ಜ್ಯೋತಿ ಫಲಾನುಭವಿಗಳಿಗೆ ₹402 ಕೋಟಿ ಸಬ್ಸಿಡಿ ನೀಡಲಾಗಿದೆ. ಅದೇ ರೀತಿ ಜಿಲ್ಲೆಯಲ್ಲಿನ ಯುವನಿಧಿ ಯೋಜನೆಯ ₹14,404 ಫಲಾನುಭವಿಗಳಿಗೆ ಜನವರಿ 26ರವರೆಗೆ 30.32 ಕೋಟಿ ವೆಚ್ಚ ಮಾಡಲಾಗಿದೆ. 2026 ಮೇ ಮತ್ತು ಜೂನ್ ನಲ್ಲಿ ಜಿಲ್ಲೆಯಲ್ಲಿನ ಅನ್ನಭಾಗ್ಯ ಯೋಜನೆಯ 3,63,504 ಫಲಾನುಭವಿಗಳಿಗೆ ₹13.89 ಕೋಟಿ ಪಾವತಿಸಲಾಗಿದೆ. ಇಂತಹ ಸಾಧನೆಗಳ ಬಗ್ಗೆ ಜನತೆಗೆ ತಿಳಿಸಬೇಕು. ಅರ್ಹ ಎಲ್ಲ ಫಲಾನುಭವಿಗಳು ಯೋಜನೆಯ ವ್ಯಾಪ್ತಿಯೊಳಗಡೆ ಬರಲು ಜಾಗೃತಿ ಕಾರ್ಯಕ್ರಮ ರೂಪಿಸಬೇಕು ಎಂದು ಅಧಿಕಾರಿಗಳಿಗೆ ಸಲಹೆ ಮಾಡಿದರು.

ಸಭೆಯಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಬಿ.ಖಾದ್ರಿ, ಅಮರೇಶಪ್ಪ, ನಾಗರಾಜ ಅರಳಿ, ಸದಸ್ಯ ಶಾರದಾ ಕಟ್ಟಿಮನಿ, ಹಜರತ್ ಹುಸೇನ್, ಆನಂದ ಹಾಸಲಕರ, ದೇವಪ್ಪ ಭಾವಿಕಟ್ಟಿ ಸೇರಿದಂತೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರು ಹಾಗೂ ಜಿಪಂ ಉಪ ಕಾರ್ಯದರ್ಶಿ ಟಿ.ಕೃಷ್ಣಮೂರ್ತಿ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಟೆ ಆಂಜನೇಯ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರ್ಪಡೆ ಬೇಡ
ಭೂ ಸಂತ್ರಸ್ತ ರೈತರಿಗೆ ನ್ಯಾಯ ಸಿಗುವವರೆಗೂ ಹೋರಾಟ ಬಿಡಲ್ಲ: ಮಾಳಮ್ಮ