ಕನ್ನಡಪ್ರಭ ವಾರ್ತೆ ಉಳ್ಳಾಲಪತ್ರಕರ್ತನ ಮೂಲಗುಣ ಮತ್ತು ಅರ್ಹತೆ ಅವರ ಸಂವೇದನೆಯಲ್ಲಿ ಅಡಗಿದೆ. ತಂತ್ರಜ್ಞಾನಗಳು ಬದಲಾದಂತೆ ಪತ್ರಿಕೋದ್ಯಮ ಹೊಸ ಸವಾಲುಗಳನ್ನು ಎದುರಿಸುತ್ತಿದೆ. ಪತ್ರಕರ್ತರ ಪ್ರತಿ ಪದವೂ ಖಡ್ಗವಿದ್ದಂತೆ. ಅದನ್ನು ಯಾವ ರೀತಿ ಉಪಯೋಗಿಸಬೇಕು ಎನ್ನುವ ಸಂವೇದನೆ ಬೆಳೆಸಿಕೊಳ್ಳಬೇಕು ಎಂದು ಮಂಗಳೂರು ವಿ.ವಿ. ಕುಲಸಚಿವ ಕೆ.ರಾಜು ಮೊಗವೀರ ಹೇಳಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ (ಎಂಸಿಜೆ) ವಿಭಾಗ ಹಾಗೂ ಇತಿಹಾಸ ವಿಭಾಗಗಳ ಸಹಯೋಗದಲ್ಲಿ ಮಂಗಳವಾರ ಮಂಗಳಗಂಗೋತ್ರಿಯಲ್ಲಿ ನಡೆದ ಪತ್ರಿಕಾ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕ ಡಾ. ಶೈಲೇಶ್ ರಾಜ್ ಅರಸ್ ಮಾತನಾಡಿ, ಇಂದಿನ ಬಹುದೊಡ್ಡ ಸವಾಲೆಂದರೆ ಸುಳ್ಳು ಸುದ್ದಿಗಳನ್ನು ಮತ್ತು ತಪ್ಪು ಮಾಹಿತಿಗಳ ನಡುವೆ ಸರಿಯಾದ ಸುದ್ದಿಯನ್ನು ಕಂಡುಕೊಳ್ಳುವುದು. ಈ ದೃಷ್ಟಿಯಲ್ಲಿ ಪತ್ರಕರ್ತರು ಸತ್ಯವನ್ನು ಹರಡುವ ವೃತ್ತಿನಿರತರಾಗಬೇಕು ಎಂದು ಕರೆ ನೀಡಿದರು. ಸುಳ್ಳು ಸುದ್ದಿಗಳನ್ನು ನಿಗ್ರಹಿಸಿ, ಸತ್ಯ ಪ್ರಕಟಿಸುವ ಜವಾಬ್ದಾರಿ ಪತ್ರಕರ್ತರ ಮೇಲಿದೆ ಎಂದು ಅವರು ಅಭಿಪ್ರಾಯಪಟ್ಟರು.ಎಂ.ಸಿ.ಜೆ. ವಿಭಾಗದ ಅಧ್ಯಕ್ಷ ಎಂ.ಪಿ. ಉಮೇಶ ಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ, ಹರ್ಮನ್ ಮೊಗ್ಲಿಂಗ್ ಸೇರಿದಂತೆ, ಬಾಸೆಲ್ ಮಿಷನ್ ಮತ್ತು ಕ್ರಿಶ್ಚಿಯನ್ ಮಿಷನರಿಗಳು ಕನ್ನಡಕ್ಕೆ ನೀಡಿದ ಕೊಡುಗೆಗಳ ಬಗ್ಗೆ ವಿವರಿಸಿದರು. ಎಂ.ಸಿ.ಜೆ. ವಿಭಾಗದ ಉಪನ್ಯಾಸಕ ಮಂಜಪ್ಪ ದ್ಯಾಮಪ್ಪ ಗೋಣಿ ಅವರು ‘ಮಂಗಳೂರ ಸಮಾಚಾರ’ ಪತ್ರಿಕೆಯ ಇತಿಹಾಸ ಮತ್ತು ಮಾಹಿತಿಗಳ ಕುರಿತು ಕಿರು ಪರಿಚಯ ನೀಡಿದರು. ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜ ಕಾರ್ಯ ವಿಭಾಗದ ಸಹ ಪ್ರಾಧ್ಯಾಪಕ ಡಾ. ಮೋಹನ್ ಎಸ್. ಸಿಂಘೆ, ದಿನಪತ್ರಿಕೆಯ ಓದುಗನ ದೃಷ್ಟಿಕೋನದಿಂದ ಪತ್ರಿಕೆಗಳ ಕುರಿತ ತಮ್ಮ ಒಳನೋಟಗಳನ್ನು ಹಂಚಿಕೊಂಡರು.ಪ್ರೊ. ಜಗದೇಶ್ ಪ್ರಸಾದ್, ಡಾ. ರಾಜ್ ಪ್ರವೀಣ್, ಡಾ. ಗೋವಿಂದರಾಜ್, ಡಾ. ಸಬಿತಾ ಹಾಗೂ ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಉಪನ್ಯಾಸಕರು, ಸಂಶೋಧನಾರ್ಥಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಎಂ.ಪಿ. ಉಮೇಶ ಚಂದ್ರ ಸ್ವಾಗತಿಸಿದರು. ಉಪನ್ಯಾಸಕ ವಿಷ್ಣು ಧರನ್ ವಂದಿಸಿದರು. ನಿರೀಕ್ಷಾ ಬಿ.ಎನ್. ನಿರೂಪಿಸಿದರು.