ಹೊಸದುರ್ಗ: ಕೇಂದ್ರ ಸರ್ಕಾರದ ಮಹತ್ವದ ತೀರ್ಮಾನಗಳಿಂದ ತಂತ್ರಜ್ಞಾನ ಅಭಿವೃದ್ಧಿಯಾಗಿದ್ದು, ಅದರ ಮೂಲಕ ಸರ್ಕಾರದ ಸವಲತ್ತುಗಳು ಜನರಿಗೆ ಹತ್ತಿರವಾಗುತ್ತಿವೆ ಎಂದು ಲೀಡ್ ಬ್ಯಾಂಕಿನ ಪ್ರತಿನಿಧಿ ಮಧುಸೂಧನ್ ಹೇಳಿದರು.
ತಾಲೂಕಿನ ಶ್ರೀರಾಂಪುರದ ನಾಡ ಕಚೇರಿ ಆವರಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ವಿಕಸಿತ ಭಾರತ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದರು.ಕೇಂದ್ರ ಸರ್ಕಾರ ಬಡವರಿಗಾಗಿ, ದೀನ ದಲಿತರ ಏಳಿಗೆಗಾಗಿ ಹಾಗೂ ಅವರ ಆರ್ಥಿಕ ಸ್ವಾವಲಂಬನೆಗಾಗಿ ಬ್ಯಾಂಕ್‌ಗಳ ಮೂಲಕ ಆರ್ಥಿಕ ಸಹಾಯ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಅದರಲ್ಲಿ ವಿಶ್ವಕರ್ಮ ಯೋಜನೆಯೂ ಒಂದಾಗಿದ್ದು, ಅದರ ಮೂಲಕ ಕುಶಲ ಕರ್ಮಿಗಳು ಆರ್ಥಿಕ ಸಹಾಯ ಪಡೆದು ಉದ್ಯಮ ಅಭಿವೃದ್ಧಿಗೊಳಿಸಿ ಕೊಂಡು ಸ್ವಾವಲಂಬಿಗಳಾಗಬೇಕು ಎಂದರು.
ರೈತರು ಪರಿಸರಕ್ಕೆ ಹೊಂದಿಕೊಳ್ಳುವ ಬೆಳೆಗಳನ್ನು ಬೆಳೆಯಬೇಕು ಆಗ ಕೃಷಿಕ ಉತ್ತಮ ಲಾಭಗಳಿಸಲು ಸಾಧ್ಯ. ಅದನ್ನು ಯಾರೋ ಎಲ್ಲೋ ಯಾವುದೋ ಬೆಳೆ ಬೆಳೆದು ಹಣ ಮಾಡಿದನೆಂದು ಅದನ್ನೂ ನಾನು ಬೆಳೆಯುತ್ತೇನೆ ಎಂದು ಮುಂದಾದರೆ ನಷ್ಟ ಅನುಭವಿಸುತ್ತಾನೆ ಎಂದರು.ಕರ್ನಾಟಕ ಪ್ರಗತಿ ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕ ಚರಣ್ ಮಾತನಾಡಿ, ಬ್ಯಾಂಕ್‌ಗಳಲ್ಲಿ ಗುಡಿ ಕೈಗಾರಿಕೆ ಸೇರಿದಂತೆ ಹಲವಾರು ಉದ್ಯಮಗಳನ್ನು ನಡೆಸಲು ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯದ ಜೊತೆಯಲ್ಲಿ ಸರ್ಕಾರದ ಹಲವಾರು ಯೋಜನೆಗಳ ಅನುಷ್ಠಾನಕ್ಕೂ ಸಹಾಯ ನೀಡಲಾಗುತ್ತಿದೆ. ಗ್ರಾಹಕರು ಹೆಚ್ಚಿನ ರೀತಿಯಲ್ಲಿ ಬ್ಯಾಂಕ್‌ಗಳಲ್ಲಿ ವ್ಯವಹಾರ ನಡೆಸುವ ಮೂಲಕ ಸವಲತ್ತುಗಳನ್ನು ಬಳಸಿಕೊಳ್ಳಬೇಕು ಎಂದರು.
ಗ್ರಾಪಂ ಅಧ್ಯಕ್ಷೆ ಶ್ವೇತಾ ರಂಗಸ್ವಾಮಿ ಉದ್ಘಾಟಿಸಿದರು. ಎಸ್‌ಬಿಐನ ವ್ಯವಸ್ಥಾಪಕ ಮಂಜುನಾಥ್, ಗ್ರಾಪಂ ಸದಸ್ಯ ಅಂಜನ್ ಕುಮಾರ್, ವಿಶ್ವನಾಥ್, ಪಿಡಿಓ ಪಾಲಾಕ್ಷಪ್ಪ, ಉದ್ಯಮಿ ನಾಗಭೂಷಣ್, ಗ್ರಾಸ್ ವಿತರಕ ಹರೀಶ್, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಆಸ್ಪತ್ರೆಯ ಸಿಬ್ಬಂದಿ, ಮಹಿಳಾ ಸಂಘಗಳ ಸದಸ್ಯರುಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.ಪ್ರಾರಂಭದಲ್ಲಿ ವಿಕಸಿತ ಸಂಕಲ್ಪ ಯಾತ್ರೆಯ ವಿಡಿಯೋ ಪ್ರದರ್ಶನ ನಡೆಸಲಾಯಿತು. ನಂತರ ದ್ರೋಣ್ ಮೂಲಕ ಔಷಧಿ ಸಿಂಪಡಣೆ ಪ್ರಾತ್ಯಕ್ಷಿಕೆ ತೋರಿಸಲಾಯಿತು. ಅಲ್ಲದೆ ನಮಗಮ ಸಂಕಲ್ಪ ವಿಕಸಿತ ಭಾರತ ಎಂಬ ಪ್ರತಿಜ್ಞಾ ವಿಧಿ ಭೋಧಿಸಲಾಯಿತು.