ಬೆಳ್ಳೂರಿನ ರಮಾಮಣಿ ಸುಂದರ ರಾಜ ಅಯ್ಯಂಗಾರ್ ಕಾಲೇಜಿನಲ್ಲಿ ಪದವಿ ಪ್ರದಾನ ಸಮಾರಂಭ
ಇಂದಿನ ಯುವ ಪೀಳಿಗೆ ತಂತ್ರಜ್ಞಾನದ ಭರಾಟೆಗೆ ಸಿಕ್ಕಿ ಹಾಕಿಕೊಂಡಿದೆ. ಹಿಂದೆ ವಿಷಯ ಸಂಗ್ರಹಕ್ಕೆ ಕಷ್ಟವಿತ್ತು. ಆದರೆ ಇಂದು ಎಲ್ಲಾ ಮಾಹಿತಿ ಕಣ್ಣ ಮುಂದೇಯೇ ಸಿಗುತ್ತಿದೆ, ವಿದ್ಯಾರ್ಥಿಗಳಿಗೆ ಸುಲಭವಾಗಿ ಸಿಗುತ್ತಿರುವ ಈ ತಂತ್ರಜ್ಞಾನ ಶಿಕ್ಷಕರ ಬೋಧನೆಯ ಜತೆಗೆ ಊಟಕ್ಕೆ ಉಪ್ಪಿನಕಾಯಿ ಇದ್ದಂತೆ ಇರಬೇಕು. ಆದರೆ ಅದೇ ಭ್ರಮೆಯಲ್ಲಿ ಮುಳುಗಿದರೆ ಅಪಾಯ ಖಚಿತ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ ರವಿ ಎಚ್ಚರಿಸಿದರು.
ತಾಲ್ಲೂಕಿನ ಬೆಳ್ಳೂರಿನ ಶ್ರೀಮತಿ ರಮಾಮಣಿ ಸುಂದರ ರಾಜ ಅಯ್ಯಂಗಾರ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪ್ರದಾನ ಸಮಾರಂಭ-೨೦೨೬ಕ್ಕೆ ಚಾಲನೆ ನೀಡಿ, ಪ್ರಮಾಣಪತ್ರ ವಿತರಿಸಿ ಅವರು ಮಾತನಾಡಿದರು.ಇಂದು ತಂತ್ರಜ್ಞಾನದತ್ತ ಹೆಜ್ಜೆ ಹಾಕಿರುವ ಯುವಜನತೆ ಕೃತಕ ಬುದ್ದಿಮತ್ತೆ ಹಾಗೂ ತಂತ್ರಜ್ಞಾನದ ಭ್ರಮೆಯಲ್ಲಿ ಕಲಿಕೆ ಸಂಸ್ಕಾರ, ನೈತಿಕ ಮೌಲ್ಯಗಳಿಂದ ದೂರವಾಗುವುದನ್ನು ತಪ್ಪಿಸಲು ಶಿಕ್ಷಣ ಸಂಸ್ಥೆಗಳು ಹೆಚ್ಚಿನ ಮುತುವರ್ಜಿ ವಹಿಸಿ ಅಗತ್ಯ ಮಾರ್ಗದರ್ಶನ ನೀಡುವುದು ಅಗತ್ಯ. ತಂತ್ರಜ್ಞಾನ ಭರಾಟೆ ವೈಭವಿಕರಣ ಅಳವಡಿಸಿಕೊಳ್ಳಲು ನೀವು ಎಷ್ಟು ತಾಳ್ಮೆ ಬಳಸತ್ತೀರಿ ಎಂಬುದರ ಮೇಲೆ ಮುಂದಿನ ಭವಿಷ್ಯ ನಿಂತಿದೆ, ಶ್ರಮವಿಲ್ಲದೇ ಏನೇನ್ನಾದರೂ ಸಾಧಿಸಬಹುದು ಎಂದರೆ ಸಾಧ್ಯವಿಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ಬಿಕೆಎಸ್‌ಎಸ್ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಶರಣ್ ಕುಮಾರ್ ಆರ್. ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ಛಾಯಾದೇವಿ, ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ಆಡಳಿತ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.