ಗಣಿಗಾರಿಕೆ ಸ್ಥಳ ಪರಿಶೀಲಿಸಿದ ತಹಸೀಲ್ದಾರ್‌ ತಂಡ

KannadaprabhaNewsNetwork | Published : Mar 8, 2024 1:51 AM

ಸಾರಾಂಶ

ಮಾಗಡಿ: ತಾಲೂಕಿನ ವೆಂಗಳಪ್ಪನ ಪಾಳ್ಯದಲ್ಲಿ ಗಣಿಗಾರಿಕೆಯಿಂದ ಸ್ಥಳೀಯರು ವಾಯುಮಾಲಿನ್ಯ ಸಮಸ್ಯೆಯಿಂದ ಬಳಲುತ್ತಿರುವ ಕುರಿತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ದೂರು ಬಂದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಸುರೇಂದ್ರ ಮೂರ್ತಿ ಸೇರಿದಂತೆ ಇತರೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಾಲೀಕರಿಗೆ ಎಚ್ಚರಿಕೆ ನೀಡಿದರು.

ಮಾಗಡಿ: ತಾಲೂಕಿನ ವೆಂಗಳಪ್ಪನ ಪಾಳ್ಯದಲ್ಲಿ ಗಣಿಗಾರಿಕೆಯಿಂದ ಸ್ಥಳೀಯರು ವಾಯುಮಾಲಿನ್ಯ ಸಮಸ್ಯೆಯಿಂದ ಬಳಲುತ್ತಿರುವ ಕುರಿತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ದೂರು ಬಂದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಸುರೇಂದ್ರ ಮೂರ್ತಿ ಸೇರಿದಂತೆ ಇತರೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಾಲೀಕರಿಗೆ ಎಚ್ಚರಿಕೆ ನೀಡಿದರು.

ಕಂದಾಯ, ಅರಣ್ಯ, ಪೊಲೀಸ್ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ, ಮಾಲಿನ್ಯ ನಿಯಂತ್ರಣ ಮಂಡಳಿ ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿ ಕಾನೂನು ಬಾಹಿರವಾಗಿ ಗಣಿಗಾರಿಕೆ ನಡೆಯುತ್ತಿದ್ದರೆ ವರದಿ ತಯಾರಿಸಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್‌ ಸುರೇಂದ್ರ ಮೂರ್ತಿ ಅವರು ಗ್ರಾಮಸ್ಥರಿಗೆ ಭರವಸೆ ನೀಡಿದರು.

ಬಾಚೇನಟ್ಟಿ ಗ್ರಾಮ ಪಂಚಾಯಿತಿಯಿಂದಲೂ ಈಗಾಗಲೇ ಕಾನೂನು ಬಾಹಿರ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ದೂರು ಬಂದಿದ್ದು, ಗ್ರಾಮಸ್ಥರಿಗೆ ಶೀಘ್ರದಲ್ಲೇ ವಾಯುಮಾಲಿನ್ಯದಿಂದ ಮುಕ್ತಿ ಕೊಡಿಸುವ ಭರವಸೆ ನೀಡಿದರು.

ಜಿಲ್ಲಾ ಜಾಗೃತಿ ಜೀತದಾಳು ಸಮಿತಿ ಸದಸ್ಯ ಹಾಗೂ ತಾಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಧನಂಜಯ್ಯ ನಾಯಕ ಮಾತನಾಡಿ, ಗಣಿಗಾರಿಕೆಯಿಂದ ಅಕ್ಕಪಕ್ಕದ ಗ್ರಾಮಗಳಿಗೆ ಧೂಳು ಯಥೇಚ್ಛವಾಗಿ ಬರುತ್ತಿದ್ದು ಇದರಿಂದ ಜನಗಳಿಗೆ ಅಸ್ತಮಾ ಕಾಯಿಲೆ ಬರುತ್ತಿದ್ದು ಜೊತೆಗೆ ಬಂಡೆ ಸಿಡಿಸಲು ಮದ್ದು ಗುಂಡುಗಳ ಬಳಕೆಯಿಂದ ಸಮಸ್ಯೆಯಾಗುತ್ತಿದೆ. ಪರಿಸರದ ಹಾನಿ ಜೊತೆಗೆ ಮನೆಗಳಿಗೂ ಅಪಾಯವಾಗುತ್ತಿದೆ. ಈ ಬಗ್ಗೆ ಪಂಚಾಯಿತಿಯಿಂದ ಅಧಿಕಾರಿಗಳಿಗೆ ದೂರು ನೀಡಲಾಗಿದ್ದು ಜಿಲ್ಲಾಧಿಕಾರಿಗಳು ಕೂಡಲೇ ಇಲ್ಲಿ ನಡೆಯುತ್ತಿರುವ ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳಿಂದ ವರದಿ ಬರುವವರೆಗೂ ಕ್ರಷರ್ ನಡೆಸದಂತೆ ಜಿಲ್ಲಾಧಿಕಾರಿಗಳು ಆದೇಶ ನೀಡಬೇಕು. ಇಲ್ಲದಿದ್ದರೆ ಗ್ರಾಮಸ್ಥರು ರಸ್ತೆ ತಡೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಪೋಟೋ 6ಮಾಗಡಿ1: ಮಾಗಡಿ ತಾಲೂಕಿನ ವೆಂಗಳಪ್ಪನಪಾಳ್ಯದಲ್ಲಿ ಗಣಿಗಾರಿಕೆ ಕುರಿತು ಗ್ರಾಮಸ್ಥರಿಂದ ದೂರು ಬಂದ ಹಿನ್ನೆಲೆಯಲ್ಲಿ ತಹಸೀಲ್ದಾರ್ ನೇತೃತ್ವದಲ್ಲಿ ಜಂಟಿ ಪರಿಶೀಲನೆ ನಡೆಯಿತು.

Share this article