ಗುಂಡ್ಲುಪೇಟೆಯ ಕ್ರಷರ್‌ ವಿವಾದದ ಬಗ್ಗೆ ಪರಿಶೀಲನೆಗೆ ಬಂದ ತಹಸೀಲ್ದಾರ್‌ ಕರ್ತವ್ಯಕ್ಕೆ ಅಡ್ಡಿ: ಪ್ರಕರಣ ದಾಖಲು

KannadaprabhaNewsNetwork | Published : Nov 26, 2024 12:46 AM

ಸಾರಾಂಶ

ಗುಂಡ್ಲುಪೇಟೆಯ ಕ್ರಷರ್‌ ಸ್ಥಳ ಪರಿಶೀಲನೆಗೆ ಬಂದ ತಹಸೀಲ್ದಾರ್‌ ಹಾಗೂ ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ನಾಲ್ವರ ಮೇಲೆ ಬೇಗೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಲ್ವರ ವಿರುದ್ಧ ಎಫ್‌ ಐಆರ್‌ । ತಹಸೀಲ್ದಾರ್‌ ದೂರಿನ ಮೇರೆಗೆ ಕೇಸು ದಾಖಲು । ಬೇಗೂರು ಠಾಣೆ ಮೆಟ್ಟಿಲೇರಿದ ಅಗತಗೌಡನಹಳ್ಳಿ ಕ್ರಷರ್‌ ವಿಚಾರ

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಕ್ರಷರ್‌ ಸ್ಥಳ ಪರಿಶೀಲನೆಗೆ ಬಂದ ತಹಸೀಲ್ದಾರ್‌ ಹಾಗೂ ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ನಾಲ್ವರ ಮೇಲೆ ಬೇಗೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಲೂಕಿನ ಅಗತಗೌಡನಹಳ್ಳಿ ಬಳಿ ಬಸವೇಶ್ವರ ಕ್ರಷರ್‌ ಆರಂಭಕ್ಕೆ ಗ್ರಾಮದ ರೈತರ ವಿರೋಧ ಸಂಬಂಧ ಸ್ಥಳ ಪರಿಶೀಲನೆಗೆ ಸೋಮವಾರ ತಹಸೀಲ್ದಾರ್‌ ಟಿ.ರಮೇಶ್‌ ಬಾಬು, ಬೇಗೂರು ಉಪ ತಹಸೀಲ್ದಾರ್‌ ಪ್ರಕಾಶ್‌, ಗ್ರಾಮ ಆಡಳಿತ ಅಧಿಕಾರಿಗಳಾದ ಅಶೋಕ್‌ ವಾಲ್ಮೀಕಿ, ಜವರೇಗೌಡ ತಹಸೀಲ್ದಾರ್‌, ಜೀಪು ಚಾಲಕ ಚೇತನ್‌ ತೆರಳಿದ್ದರು. ಈ ಸಮಯದಲ್ಲಿ ಗ್ರಾಮದ ಜಗದೀಶ್‌, ಮೂರ್ತಿ, ಸ್ವಾಮಿ, ಗೋವಿಂದಯ್ಯ ಎಂಬುವರು ಜೀಪು ಮುಂದೆ ಕುಳಿತು ತಕ್ಷಣ ಕ್ರಷರ್‌ ನಿಲ್ಲಿಸಬೇಕು. ಇಲ್ಲದಿದ್ದರೆ ಜೀಪು ಬಿಡುವುದಿಲ್ಲ ಎಂದು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ತಹಸೀಲ್ದಾರ್‌ ಟಿ.ರಮೇಶ್‌ ಬಾಬು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಸಂಬಂಧ ಬೇಗೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಏನಿದು ವಿವಾದ?:

ಅಗತಗೌಡನಹಳ್ಳಿ ಗ್ರಾಮದ ಎ.ಮಧುಸೂದನ್‌ ಕ್ರಷರ್‌ ಹಾಗೂ ಎಂ.ಸ್ಯಾಂಡ್‌ ಘಟಕ ನಿರ್ಮಿಸಲು ಅನುಮತಿ ಪಡೆದಿದ್ದಾರೆ. ಆದರೂ ಕ್ರಷರ್‌ ಜಾಗದ ಸುತ್ತಲಿನ ಕೆಲ ರೈತರು ಕ್ರಷರ್‌ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದರು.

ಕ್ರಷರ್‌ ಆರಂಭಿಸಿದರೆ ಫಲವತ್ತಾದ ಕೃಷಿಗೆ ತೊಂದರೆಯಾಗುತ್ತದೆ. ಕ್ರಷರ್‌ ಸಮೀಪ ಪ್ರೌಢಶಾಲೆ, ಹಾಸ್ಟೆಲ್‌ ಅಲ್ಲದೆ ಊರು ಕೂಡ ಇದೆ ಎಂದು ರೈತರು ಅಹೋರಾತ್ರಿ ಪ್ರತಿಭಟನೆ ಕೂಡ ನಡೆಸಿದ್ದಾರೆ.

ರೈತರ ವಾದ:

ಕ್ರಷರ್‌ ಆರಂಭಕ್ಕೆ ಕ್ರಷರ್‌ ಜಾಗದ ಸುತ್ತಲಿನ ಜಮೀನಿನ ರೈತರ ಅನುಮತಿ ಪಡೆದಿಲ್ಲ. ಎಲ್ಲೋ ಕುಳಿತು ವರದಿ ತಯಾರಿಸಿ ಅನುಮತಿ ಪಡೆದಿದ್ದಾರೆ. ಕ್ರಷರ್‌ ಆರಂಭಿಸಿದರೆ ದೂಳು, ಸದ್ದು ಬರುತ್ತದೆ. ಊರು ಹಾಗೂ ವಿದ್ಯಾರ್ಥಿಗಳು, ರೈತರು ಬೆಳೆ ಬೆಳೆಯಲು ತೊಂದರೆಯಾತ್ತದೆ ಎಂಬುದು ರೈತರ ವಾದ.

ಆದರೆ ಕ್ರಷರ್‌ ಮಾಲೀಕ ಎ.ಮಧುಸೂದನ್‌ ಕ್ರಷರ್‌ ಆರಂಭಕ್ಕೆ ಅನುಮತಿ ಇದೆ. ಆದರೆ ಗ್ರಾಮದ ಕೆಲವರು ಅಡ್ಡಿಪಡಿಸುತ್ತಿದ್ದಾರೆ ಎಂಬುದು ಅವರ ವಾದ.

ಸಭೆಗೂ ಮುನ್ನ?:

ರೈತರು ಪ್ರತಿಭಟನೆ ಹಿನ್ನೆಲೆ ಉಪ ತಹಸೀಲ್ದಾರ್‌ ಪ್ರಕಾಶ್‌ ಮುಂದಿನ ವಾರ ರೈತರು, ಕ್ರಷರ್‌ ಮಾಲೀಕರ ಸಭೆ ಕರೆಯುವುದಾಗಿ ಹೇಳಿದ್ದರು. ಆದರೆ ತಹಸೀಲ್ದಾರ್‌ ಅವರು ಸಭೆ ಕರೆಯುವ ಮುನ್ನವೇ ರೈತರು ಹಾಗೂ ಅಧಿಕಾರಿಗಳ ನಡುವೆ ಕಲಹ ಶುರುವಾಗಿದೆ.

ಹೋರಾಟ ತೀವ್ರವಾಗುವುದೇ?:

ರೈತರಿಗೆ ಮಾರಕವಾದ ಕ್ರಷರ್‌ ಆರಂಭಕ್ಕೆ ರೈತರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ರೈತಸಂಘದ ಹೊನ್ನೂರು ಪ್ರಕಾಶ್‌ ಬಣ ಅಹೋರಾತ್ರಿ ಹೋರಾಟ ನಡೆಸಿದ್ದಾರೆ.

ಕ್ರಷರ್‌ಗೆ ರೈತರ ಒಪ್ಪಿಗೆ ಇಲ್ಲ: ಎ.ಸಿದ್ದರಾಜು

ರೈತರು, ವಿದ್ಯಾರ್ಥಿಗಳು ಹಾಗೂ ಗ್ರಾಮಕ್ಕೆ ತೊಂದರೆ ಉಂಟು ಮಾಡಲಿರುವ ಕ್ರಷರ್‌ ಬೇಡ ಎಂದು ಮಾಜಿ ಸಂಸದ ಎ.ಸಿದ್ದರಾಜು ಹೇಳಿದ್ದಾರೆ.

ಫಲವತ್ತಾದ ಭೂಮಿ ಮಧ್ಯೆ ಹಾಗೂ ಒಂದು,ಎರಡು ಎಕರೆ ಜಮೀನು ನಂಬಿ ಜೀವನ ಸಾಗಿಸುವ ರೈತರಿಗೆ ತೊಂದರೆಯಾಗುವ ಕ್ರಷರ್‌ ಬೇಡ. ಕ್ರಷರ್‌ ಸಮೀಪ ಹಾಸ್ಟೆಲ್‌, ಪ್ರೌಢ ಶಾಲೆಯಿದೆ. ಕ್ರಷರ್‌ಗೆ ಹತ್ತಿರವಾಗಿ ಊರು ಕೂಡ ಇದೆ. ಅಲ್ಲದೆ ರೈತರ ಒಪ್ಪಿಗೆ ಇಲ್ಲದೆ ಕ್ರಷರ್‌ ಆರಂಭಿಸಿಸುವುದು ಬೇಡ ಎಂದಿದ್ದಾರೆ.

Share this article