ಕನ್ನಡಪ್ರಭ ವಾರ್ತೆ ಬೆಂಗಳೂರು
ಈ ಮೂಲಕ 17.60 ಲಕ್ಷ ರು.ಗಳನ್ನು ಟಿಕೆಟ್ ಮಾರಾಟದಿಂದ ಸಂಗ್ರಹಿಸಲಾಗಿದೆ. 23,056 ವಯಸ್ಕರು, 8,990 ಮಕ್ಕಳು, 16,675 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 49,721 ಮಂದಿ ಪುಷ್ಪ ಪ್ರದರ್ಶನದ ವೀಕ್ಷಣೆಗೆ ಆಗಮಿಸಿದ್ದರು. ಭಾನುವಾರ ರಜಾ ದಿನವಾಗಿದ್ದು ಒಂದು ಲಕ್ಷಕ್ಕೂ ಹೆಚ್ಚು ಜನರು ಬರುವ ನಿರೀಕ್ಷೆ ಇದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕನ್ನಡಪ್ರಭಕ್ಕೆ ತಿಳಿಸಿದರು.
ಫಲಪುಷ್ಪ ಪ್ರದರ್ಶನದ ಅಂಗವಾಗಿ ಹಮ್ಮಿಕೊಂಡಿದ್ದ ಪೂರಕ ಕಲೆಗಳಲ್ಲಿ ಪೂರ್ಣಚಂದ್ರ ತೇಜಸ್ವಿಯವರ ಪರಿಸರ ಪ್ರೇಮ ಅನಾವರಣಗೊಂಡಿದೆ. ತೆಂಗಿನ ಗರಿಗಳಲ್ಲಿ ಬೃಹತ್ ಕ್ಯಾಮೆರಾ ತಯಾರಿಸಲಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಈ ಕ್ಯಾಮೆರಾವನ್ನು ತೇಜಸ್ವಿಯವರೇ ಬಳಸುತ್ತಿರುವಂತೆ ಭಾಸವಾಗುತ್ತದೆ.ಬೃಹತ್ ಕ್ಯಾಮೆರಾದ ಹಿಂದೆ ಗೊಂಬೆಯೊಂದನ್ನು ನಿಲ್ಲಿಸಿ, ಅದಕ್ಕೆ ಅರ್ಧ ತೋಳಿನ ಶರ್ಟ್ ಹಾಕಲಾಗಿದೆ. ಅದಕ್ಕೆ ತೇಜಸ್ವಿಯವರ ಭಾವಚಿತ್ರ ಅಂಟಿಸಲಾಗಿದೆ. ಹೀಗಾಗಿ ತೇಜಸ್ವಿಯವರು ಕ್ಯಾಮೆರಾವನ್ನು ಆಪರೇಟ್ ಮಾಡುತ್ತಿರುವಂತೆ ಕಾಣುತ್ತಿದೆ.
ಲಾಲ್‌ಬಾಗ್‌ನ ತೋಟಗಾರಿಕಾ ಮಾಹಿತಿ ಕೇಂದ್ರದಲ್ಲಿ ಆಯೋಜಿಸಿದ್ದ ಈ ಪೂರಕ ಕಲೆಗಳ ಪ್ರದರ್ಶನವನ್ನು ಪೂರ್ಣಚಂದ್ರ ತೇಜಸ್ವಿಯವರ ಪುತ್ರಿಯರಾದ ಕೆ.ಪಿ.ಸುಶ್ಮಿತಾ ಮತ್ತು ಕೆ.ಪಿ.ಈಶಾನ್ಯ ಶನಿವಾರ ಚಾಲನೆ ನೀಡಿದರು. ಕಲ್ಲಂಗಡಿ ಹಣ್ಣಿನಲ್ಲಿ ಹೂಬುಟ್ಟಿ, ಬಾಳೆ-ತೆಂಗಿನ ಗರಿಗಳಲ್ಲಿ ಕಲ್ಯಾಣ ಮಂಟಪ, ಮೂಲಂಗಿಯಲ್ಲಿ ಶಂಕು, ಕ್ಯಾರಟ್‌ನಲ್ಲಿ ಹೂವು, ಪಕ್ಷಿ ಹೀಗೆ ಬಗೆ ಬಗೆಯ ಹಣ್ಣು-ತರಕಾರಿಗಳಿಂದ ಹಲವು ಪ್ರಕಾರದ ಕಲೆಗಳು ಮೈದಳೆದಿವೆ.ಪುಷ್ಪ ಜೋಡಣೆ, ತರಕಾರಿ ಕೆತ್ತನೆ, ಇಕೆಬಾನ, ಡಚ್ ಹಾಗೂ ಒಣ ಹೂವಿನ ಜೋಡಣೆ, ಥಾಯ್ ಆರ್ಟ್ ಮತ್ತಿತರ ಪೂರಕ ಕಲೆಗಳ ಪ್ರದರ್ಶನದಲ್ಲಿ ನೂರಾರು ಜೋಡಣೆಗಳನ್ನು ಅಲಂಕರಿಸಲಾಗಿತ್ತು. ಬೃಹತ್ ಗಾತ್ರದ ಸಿಹಿಕುಂಬಳ ಕಾಯಿಯಲ್ಲಿ ಚಿತ್ತಾರ ಬಿಡಿಸಿದರೆ, ಬದನೆಕಾಯಿ ಮತ್ತು ಸೋರೆಕಾಯಿಯಲ್ಲಿ ಹೆಣ್ಣು-ಗಂಡಿನ ಮೂರ್ತಿಗಳನ್ನು ಮಾಡಲಾಗಿದೆ. ಡಚ್ ಹೂವುಗಳ ಜೋಡಣೆ, ಥಾಯ್ ಆರ್ಟ್, ಇಕೆಬಾನ, ಒಣ ಹೂವಿನ ಜೋಡಣೆ ನೋಡುಗರ ಗಮನ ಸೆಳೆಯುತ್ತಿವೆ.