ವಿಶ್ವಮಾನವ ಸಂದೇಶವನ್ನು ಬದುಕು, ಸಾಹಿತ್ಯದಲ್ಲಿ ಜಾರಿಗೆ ತಂದ ತೇಜಸ್ವಿ: ಎಚ್.ಎ.ಪ್ರಕಾಶ್

KannadaprabhaNewsNetwork |  
Published : Oct 26, 2025, 02:00 AM IST
ನರಸಿಂಹರಾಜಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಬೆಮ್ಮನೆಯಲ್ಲಿ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಬೆಮ್ಮನೆ ಕುಟುಂಭದ ನಿತ್ಯ ರಾಜಶೇಖರ್ ಬರೆದ ನಿತ್ಯ ಮಲ್ಲಿಗೆ ಕವನ ಸಂಕಲನವನ್ನು ರೋಟರಿ ಕ್ಲಬ್ ಅಧ್ಯಕ್ಷ ಕಣಿವೆ ವಿನಯ್ ಬಿಡುಗಡೆ ಮಾಡಿದರು. | Kannada Prabha

ಸಾರಾಂಶ

ನರಸಿಂಹರಾಜಪುರ, ಕುವೆಂಪು ಅವರ ವಿಶ್ವ ಮಾನವ ಸಂದೇಶವನ್ನು ತೇಜಸ್ವಿ ಅವರು ಯಥಾವತ್ತಾಗಿ ತಮ್ಮ ಬದುಕಿನಲ್ಲಿ, ಸಾಹಿತ್ಯದಲ್ಲಿ ಜಾರಿಗೆ ತಂದಿದ್ದಾರೆ ಎಂದು ಶೃಂಗೇರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಪ್ರಕಾಶ್ ತಿಳಿಸಿದರು.

- ಬೆಮ್ಮನೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ದತ್ತಿ ಉಪನ್ಯಾಸ । ಕವನ ಸಂಕಲನ ಬಿಡುಗಡೆ । ಸನ್ಮಾನ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಕುವೆಂಪು ಅವರ ವಿಶ್ವ ಮಾನವ ಸಂದೇಶವನ್ನು ತೇಜಸ್ವಿ ಅವರು ಯಥಾವತ್ತಾಗಿ ತಮ್ಮ ಬದುಕಿನಲ್ಲಿ, ಸಾಹಿತ್ಯದಲ್ಲಿ ಜಾರಿಗೆ ತಂದಿದ್ದಾರೆ ಎಂದು ಶೃಂಗೇರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಪ್ರಕಾಶ್ ತಿಳಿಸಿದರು.

ಶನಿವಾರ ಬೆಮ್ಮನೆಯ ಪಂಚವಟಿ ಸಮುದಾಯ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಬೆಮ್ಮನೆ ಕುಟುಂಬದವರು ದಿ.ಶೇಷಮ್ಮ ಮತ್ತು ದಿ.ಸಣ್ಣೇಗೌಡರು ಹೆಸರಿನಲ್ಲಿ ನೀಡಿದ ದತ್ತಿದಾನದಲ್ಲಿ ಕೆ.ಪಿ.ಪೂರ್ಣ ಚಂದ್ರ ತೇಜಸ್ವಿ ಬದುಕು, ಬರಹ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿ ತೇಜಸ್ವಿ ಅವರು ಕೇವಲ ಕುವೆಂಪು ಅವರ ಮಗ ಎಂದು ಅವರನ್ನು ಗುರುತಿಸಿಲ್ಲ. ಅವರು ಸಾಹಿತಿಯಾಗಿ, ಲೇಖಕರಾಗಿ, ಮೆಕಾನಿಕ್ ಆಗಿ, ಛಾಯಾಚಿತ್ರಗಾರರಾಗಿ, ಮೀನು ಹಿಡಿಯುವ, ಕೋವಿ ಹಿಡಿಯವ ಶಿಕಾರಿಯಾಗಿ, ಕಂಪ್ಯೂಟರ್ ತಂತ್ರ ಜ್ಞಾನದ ಬಗ್ಗೆ ಅಧ್ಯಯನ ಮಾಡುತ್ತಿದ್ದ ತೇಜಸ್ವಿ ಒಬ್ಬ ವಿಸ್ಮಯಕಾರಿಯಾಗಿದ್ದರು.

ಶಿವರಾಮ ಕಾರಂತರು ಹುಚ್ಚು ಮನಸ್ಸಿನ ಹತ್ತು ಮುಖ ಎಂಬ ಕೃತಿ ಬರೆದಿದ್ದರು. ಆದರೆ, ತೇಜಸ್ವಿ ಹುಚ್ಚು ಮನಸ್ಸಿನ 100 ಮುಖಗಳಂತೆ ಕಾಣಿಸುತ್ತಾರೆ. ಅವರ ಅನೇಕ ಕೃತಿಗಳಲ್ಲಿ ಜ್ವಲಂತ ಸಮಸ್ಯೆಗಳ ಬಗ್ಗೆ ಹೆಚ್ಚು ಚರ್ಚೆಯಾಗಿದೆ. ಕರ್ವಾಲೋ ಕೃತಿಯನ್ನು ಚಿಮಿಣಿ ದೀಪದಲ್ಲೇ ಬರೆದಿದ್ದರು. ಕುವೆಂಪು ಅವರು ಮಹಿಳೆಯನ್ನು ತಾಯಿಯಂತೆ ಚಿತ್ರಿಸಿದ್ದರೆ, ಶಿವರಾಮ ಕಾರಂತರು ಮಹಿಳೆಯನ್ನು ವಿಚಾರವಂತರನ್ನಾಗಿ ಕಂಡಿದ್ದರು. ಆದರೆ, ತೇಜಸ್ವಿ ಅವರು ಮಹಿಳೆಯರಲ್ಲಿ ಬಂಡಾಯ ಕಂಡಿದ್ದರು. ತೇಜಸ್ವಿ ಅವರ ಕಿರಗೂರಿನ ಗಯ್ಯಾಳಿಗಳು ಕೃತಿಯಲ್ಲಿ ಮಹಿಳೆಯರ ಸಾಧನೆ ಚಿತ್ರಿಸಿದ್ದಾರೆ. ರಾಜ್ಯದ ಹಕ್ಕಿಗಳ ಬಗ್ಗೆ ಅಧ್ಯಯನ ಮಾಡಿದ್ದರು. ತೇಜಸ್ವಿ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿ ಬಂದಿದ್ದರೂ ಪ್ರಶಸ್ತಿ ಗಳನ್ನು ಸ್ವೀಕಾರ ಮಾಡದೆ ತಿರಸ್ಕರಿಸಿ ಸಾಮಾನ್ಯ ಮನುಷ್ಯರಂತೆ, ಪ್ರಕೃತಿ ಭಾಗವಾಗಿ ಬದುಕಿದ್ದರು ಎಂದರು.

ರೋಟರಿ ಸಂಸ್ಥೆ ಅಧ್ಯಕ್ಷ ಕಣಿವೆ ವಿನಯ್ ಬೆಮ್ಮನೆ ಕುಟುಂಬದ ನಿತ್ಯ ರಾಜಶೇಖರ್ ಬರೆದ ನಿತ್ಯ ಮಲ್ಲಿಗೆ ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿ, ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರವೂ ಅಗತ್ಯ. ಇತ್ತೀಚಿಗೆ ಮಕ್ಕಳು ವಿದೇಶದಲ್ಲಿ ನೆಲೆಸಿ ಭಾರತದಲ್ಲಿರುವ ತಂದೆ, ತಾಯಿಯರನ್ನು ನಿರ್ಲಕ್ಷ್ಯ ಮಾಡುತ್ತಿರುವುದು ಕಾಣುತ್ತಿದೆ. ಆದ್ದರಿಂದ ಮಕ್ಕಳಿಗೆ ಬಾಲ್ಯದಲ್ಲೇ ಸಂಸ್ಕಾರ ನೀಡಬೇಕು. ಇಲ್ಲದಿದ್ದರೆ ಮುಂದೆ ವೃದ್ದಾಶ್ರಮಗಳು ಜಾಸ್ತಿಯಾಗಲಿದೆ. ಮಲೆನಾಡಿನ ಭಾಗದ ಯುವ ಜನರು ರೈತರ ಮಕ್ಕಳು ಎಂದು ಹೆಮ್ಮೆಯಿಂದ ಹೇಳಿಕೊಳ್ಳಬೇಕು ಎಂದು ಕರೆ ನೀಡಿದರು.

ಮುಖ್ಯ ಅತಿಥಿಯಾಗಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಪೂರ್ವಾಧ್ಯಕ್ಷ ಎಸ್.ಎಸ್.ಸಂತೋಷ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಸಾಪದಲ್ಲಿ ನಾನು ಅಧ್ಯಕ್ಷನಾಗಿದ್ದಾಗ 18 ದತ್ತಿಗಳು ಇದ್ದವು. ಈಗ 22 ದತ್ತಿಗಳು ಇದೆ.18 ವರ್ಷ ತುಂಬಿದ ಎಲ್ಲರೂ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಬಹುದು. ₹25 ಸಾವಿರ ನೀಡಿ ದತ್ತಿ ದಾನಿಗಳಾಗಬಹುದು. ಬೆಮ್ಮನೆ ಕುಟುಂಬ ಆತ್ಮೀಯತೆ, ಆಪ್ತತೆ ಇರುವ ಕುಟುಂಬವಾಗಿದೆ. ಇಂದಿನ ಕಾಲಘಟ್ಟದಲ್ಲಿ ಅವಿಭಕ್ತ ಕುಟುಂಬಗಳ ಅವಶ್ಯಕತೆ ಇದೆ. ಯುವಜನರಿಗೆ ಸಂಬಂಧದ ಬಗ್ಗೆ ಅರಿವು ಮೂಡಿಸಬೇಕಾಗಿದೆ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪೂರ್ಣೇಶ್ ಮಾತನಾಡಿ, ಬೆಮ್ಮನೆ ಕುಟುಂಬ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡಿರುವ ಕುಟುಂಬ. ಅವರ ಹಿರಿಯ ಹೆಸರಿನಲ್ಲಿ ಬೆಮ್ಮನೆ ಕುಟುಂಬದವರು ದತ್ತಿ ದಾನ ನೀಡಿದ್ದರು. ಕಸಾಪದಿಂದ ಪ್ರತಿ ವರ್ಷ ದತ್ತಿ ಉಪನ್ಯಾಸ ಮಾಡಿಸುತ್ತಿದ್ದೇವೆ. ನವಂಬರ್ ತಿಂಗಳಲ್ಲಿ ಕಸಾಪದಿಂದ ಹೋಬಳಿ ಸಾಹಿತ್ಯ ಸಮ್ಮೇಳನ ಮಾಡುವ ಚಿಂತನೆ ನಡೆಸಿದ್ದು ಎಲ್ಲಾ ಕನ್ನಡದ ಮನಸ್ಸುಗಳು ಸಹಕಾರ ನೀಡಬೇಕು. ಮುಂದೆ ಅವಿಭಕ್ತ ಕುಟುಂಬಗಳನ್ನು ಇಟ್ಟುಕೊಂಡು ಕುಟುಂಬ ಮಿಲನ ಎಂಬ ಕಾರ್ಯಕ್ರಮ ನಡೆಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಪ್ರತಿ ಯೊಬ್ಬರೂ ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯರಾಗಬೇಕು. ಬೆಮ್ಮನೆ ಕುಟುಂಬದ ಉದಯೋನ್ಮುಖ ಕವಿಯತ್ರಿ ನಿತ್ಯ ರಾಜಶೇಖರ್ ಬರೆದ ನಿತ್ಯ ಮಲ್ಲಿಗೆ ಎಂಬ ಕವನ ಸಂಕಲನ ಬಿಡುಗಡೆ ಮಾಡಿದ್ದು ಪ್ರತಿಯೊಬ್ಬರೂ ಈ ಕವನ ಸಂಕಲನ ಓದಿ ಬರೆದ ಕವಿಗೆ ಪ್ರೋತ್ಸಾಹ ನೀಡಬೇಕು ಎಂದರು.

ಇದೇ ಸಂದರ್ಭದಲ್ಲಿ ಬೆಮ್ಮನೆ ಕುಟುಂಬದ ಹಿರಿಯರಾದ ಮೀನಾಕ್ಷಮ್ಮ,ಸಮಾಜ ಸೇವಕ ಸಾಲೇಸಿಮಕ್ಕಿ ಚಿದಂಬರ್, ಕವನ ಸಂಕಲನ ರಚಿಸಿದ ನಿತ್ಯಾ ರಾಜಶೇಖರ್ ಅವರನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ಕಸಾಪ ಹೋಬಳಿ ಅಧ್ಯಕ್ಷ ಕಾರ್ತಿಕ್ ಕಾರ್ಗದ್ದೆ, ಕೊನೋಡಿ ಕೃಷಿಕ ರಾಮಚಂದ್ರಭಟ್, ಬೆಮ್ಮನೆ ಕುಟುಂಬದ ಹಿರಿಯರಾದ ಬಿ.ಎಸ್.ಮಂಜುನಾಥ್, ಬಿ.ಪಿ.ಮೋಹನ್, ಕೃಷ್ಣಮೂರ್ತಿ,ಚಂದ್ರಶೇಖರ್ ಇದ್ದರು.

ನಿವೃತ್ತ ಪ್ರಾಂಶುಪಾಲ ದಯಾನಂದ್ ಸ್ವಾಗತಿಸಿದರು. ಸುಬೋದ್ ಕಾರ್ಯಕ್ರಮ ನಿರೂಪಿಸಿದರು.ಕಾರ್ತಿಕ್ ಕಾರ್ಗದ್ದೆ ವಂದಿಸಿದರು. ಎ.ಎಸ್.ವೆಂಕಟರಮಣ ರೈತ ಗೀತೆ ಹಾಡಿದರು. ನಂತರ ಗಾಯಕರಾದ ಹಿರೇನಲ್ಲೂರು ಶ್ರೀನಿವಾಸ್, ಸುಷ್ಮಾ ಯುಗಾಂಧರ್ ಅವರಿಂದ ಗೀತಾ ಗಾಯನ , ಮಕ್ಕಳಿಂದ ಭರತ ನಾಟ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

500 ನಾಯಿಗಳಿಗೆ ಚಿಕನ್‌ ರೈಸ್ ನೀಡಲು ವರ್ಷಕ್ಕೆ 1.83 ಕೋಟಿ
ಯಲಹಂಕದಲ್ಲಿ ‘ಚೀನಾದ ಹ್ಯಾಂಗ್‌ಝೌ’ ಮಾದರಿ ರೈಲು ನಿಲ್ದಾಣ