ಕನ್ನಡಪ್ರಭ ವಾರ್ತೆ ಮುಧೋಳ
ಪಿಯುಸಿ ಪ್ರಥಮ ವರ್ಷದ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಗೆ ಮಾನಸಿಕ ಕಿರುಕಳ ನೀಡಿ ವಿದ್ಯಾರ್ಥಿನಿ ಸಾವಿಗೆ ಕಾರಣರಾದ ನಗರದ ಶಾರದಾ ಪಿಯು ಕಾಲೇಜಿನ ಉಪನ್ಯಾಸಕರು ಹಾಗೂ ಆಡಳಿತ ಮಂಡಳಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಕಾಲೇಜಿನ ಪರವಾನಗಿ ರದ್ದುಗೊಳಿಸುವಂತೆ ಭೀಮ ಆರ್ಮಿ ಹಾಗೂ ವಿವಿಧ ಸಂಘಟನೆಯಿಂದ ಶನಿವಾರ ನಗರದ ಬಸವೇಶ್ವರ ಸರ್ಕಲ್‌ನಲ್ಲಿ ರಸ್ತೆತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು.ಕೃಷ್ಣಪ್ಪ ಪೂಜೇರ, ಪ್ರಕಾಶ ಮಾಂಗ, ಅನೀಲ ಬರಗಿ, ಮಹೇಶ ಹುಗ್ಗಿ, ಸತೀಶ ಗಾಡಿ ಸೇರಿ ಇತರರು ಮಾತನಾಡಿ, ನಗರದ ಶಾರದಾ ಪಿಯು ಕಾಲೇಜಿನಲ್ಲಿ ಪ್ರಥಮ ವರ್ಷದ ವಿಜ್ಞಾನ ವಿಭಾಗದಲ್ಲಿ ಓದುತ್ತಿರುವ ವಿದ್ಯಾರ್ಥಿನಿ ತೇಜಸ್ವಿನಿ ದೊಡಮನಿ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದು ಪರೀಕ್ಷೆ ಸಂದರ್ಭದಲ್ಲಿ ನಕಲು ಮಾಡಿದ್ದಾಳೆಂದು ಆರೋಪಿಸಿ, ಅವಮಾನಿಸಿ, ಮಾನಸಿಕ ಚಿತ್ರಹಿಂಸೆ ನೀಡಿದ್ದರಿಂದ ಅವಳು ನಗರದ ಮಹಾರಾಣಿ (ವೆಂಕಟೇಶ) ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವಿದ್ಯಾರ್ಥಿನಿ ಆತ್ಮಹತ್ಯೆಗೆ ಕಾಲೇಜಿನ ಉಪನ್ಯಾಸಕರು ಮತ್ತು ಆಡಳಿತ ಮಂಡಳಿಯವೇ ಕಾರಣೀಕರ್ತರಾಗಿದ್ದರಿಂದ ಅವರಿಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ವಿದ್ಯಾರ್ಥಿನಿಗೆ ನ್ಯಾಯಕೊಡಿಸಬೇಕೆಂದು ಒತ್ತಾಯಿಸಿದರು.
ಈ ಕುರಿತು ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡು ವಾರವಾದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪ್ರತಿಭಾವಂತ ವಿದ್ಯಾರ್ಥಿನಿ ಸಾವಿಗೆ ಕಾರಣವಾದ ಶಾರದಾ ಪಿಯು ಕಾಲೇಜಿನ ಉಪನ್ಯಾಸಕರ ಹಾಗೂ ಆಡಳಿತ ಮಂಡಳಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ, ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿದರು.ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಚಿವ ಆರ್.ಬಿ.ತಿಮ್ಮಾಪೂರ ಅವರಿಗೆ ಪ್ರತಿಭಟನಾಕಾರರು ಮನವಿ ಪತ್ರ ಸಲ್ಲಿಸಿದರು. ಮನವಿ ಪತ್ರ ಸ್ವಿಕರಿಸಿ ಮಾತನಾಡಿದ ಸಚಿವರು, ಸರ್ಕಾರದ ವತಿಯಿಂದ ತನಿಖಾ ತಂಡವೊಂದನ್ನು ರಚಿಸಿ ಸಮರ್ಪಕ ಮಾಹಿತಿ ಪಡೆದುಕೊಂಡು ಎಷ್ಟೇ ಪ್ರಭಾವಿ ವ್ಯಕ್ತಿ ಗಳಿದ್ದರೂ ತಪ್ಪಿತಸ್ಥರಿಗೆ ನ್ಯಾಯ ಕೊಡಿಸೇ ಕೊಡಿಸುತ್ತೇವೆಂದರು. ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದರು.
ಈ ವೇಳೆ ಪರಶುರಾಮ ಮೇತ್ರಿ, ಅಶೋಕ ಮಾಂಗ, ಮಾನಿಂಗ ಮೇತ್ರಿ, ಮಲೆಪ್ಪ ತಳಗೇರಿ, ಯಲ್ಲಪ್ಪ ತಳಗೇರಿ, ಹಾಸೀಮ ಜಕ್ಕಲಿ, ಯಾಕೂಬ್ ಪೂಜಾರಿ, ಸುರೇಶ ಮೇತ್ರಿ, ರೇಣುಕಾ ತಳವಾರ, ರುಕ್ಮವ್ವ ಪೂಜಾರಿ, ಯಮನವ್ವ ಈರಗಾರ, ರಮೇಶ ನಾಗೋಗೋಳ, ಮದೇವ ಮೀಶಿ, ಮುಜ್ಜು ಅಣ್ಣೋಜಿ, ಚೇತನ ಪೂಜೇರ, ಸಂಜು ಮಾಂಗ, ಕರಣಕುಮಾರ ಮೌರ್ಯ, ಯಮನಪ್ಪ ಮಾಂಗ, ಪುಟ್ಟು ಮೇತ್ರಿ, ಸುನೀಲ ಬನಹಟ್ಟಿ, ಮುತ್ತಪ್ಪ ಗುರಕೇರ, ಸುನೀಲ ಕಂಬೋಗಿ, ಲವಿತ್ ಮೇತ್ರಿ ಸೇರಿದಂತೆ ಮೃತ ಕುಟುಂಬಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ತಹಸೀಲ್ದಾರ್ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸದೆ ಇರುವುದಕ್ಕೆ ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.