- ರಾಜ್ಯದ 28 ಕ್ಷೇತ್ರ ನಾವು ಗೆಲ್ಲುತ್ತೇವೆ ಎಂದ ಮಾಜಿ ಸಿಎಂ । 2 ಲಕ್ಷ ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಗೆಲ್ತಾರೆಂದು ಭವಿಷ್ಯ
ರಾಜ್ಯದ ಎಲ್ಲ 28 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲಿದೆ ಎಂದು ನಾನು ಘಂಟಾಘೋಷವಾಗಿ ಹೇಳುತ್ತೇನೆ. ಕಾಂಗ್ರೆಸ್ಸಿನವರಿಗೆ ತಾಕತ್ತಿದ್ದರೆ ತಾವು ಗೆಲ್ಲುವ ಒಂದೆರೆಡು ಕ್ಷೇತ್ರಗಳ ಹೆಸರು ಹೇಳಲಿ ನೋಡೋಣ ಎಂದು ಬಿಜೆಪಿ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸವಾಲು ಹಾಕಿದರು.
ಮಾಯಕೊಂಡ ವಿಧಾನಸಭಾ ಕ್ಷೇತ್ರದ ತ್ಯಾವಣಿಗೆ ಗ್ರಾಮದಲ್ಲಿ ಸೋಮವಾರ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪರ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಇಡೀ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ. ಎಲ್ಲ 28 ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲಲಿದ್ದು, ದಾವಣಗೆರೆಯಲ್ಲೂ ಗಾಯತ್ರಿ ಸಿದ್ದೇಶ್ವರ ಕನಿಷ್ಠ 1.5 ಲಕ್ಷದಿಂದ 2 ಲಕ್ಷಗಳ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ ಎಂದು ಭವಿಷ್ಯ ನುಡಿದರು.ದೇಶದಲ್ಲಿ ಈಗ ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಲೋಕಸಭೆ ಚುನಾವಣೆ ನಂತರ ಇಡೀ ಕಾಂಗ್ರೆಸ್ ಧೂಳೀಪಟ ಆಗುತ್ತದೆ. ಇಷ್ಟು ವರ್ಷ ಹಣ, ಹೆಂಡ, ತೋಳ್ಬಲ, ಅಧಿಕಾರದ ಬಲದಿಂದ ಜಾತಿಯ ವಿಷಬೀಜ ಬಿತ್ತಿ ಅಧಿಕಾರಕ್ಕೆ ಬರುತ್ತಿದ್ದ ಕಾಂಗ್ರೆಸ್ಸಿನ ಆಟ ಇನ್ನು ಮುಂದೆ ನಡೆಯುವುದಿಲ್ಲ. ಜನತೆ ಬುದ್ಧಿವಂತರಾಗಿದ್ದಾರೆ. ನರೇಂದ್ರ ಮೋದಿ ಆಡಳಿತ ದೇಶದ ಜನತೆ ಮೆಚ್ಚಿದ್ದಾರೆ. ರಾಜ್ಯದ 28 ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವುದು, ಮೋದಿ ಮೂರನೇ ಬಾರಿಗೆ ಪ್ರಧಾನಿ ಆಗಿರುವುದು ಸೂರ್ಯ-ಚಂದ್ರರು ಇರುವುದು ಎಷ್ಟು ಸತ್ಯವೋ, ಅಷ್ಟೇ ಸತ್ಯ ಎಂದು ಅವರು ಹೇಳಿದರು.
ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಮಾತನಾಡಿ, ದೇಶದ 80 ಕೋಟಿ ಜನರಿಗೆ 5 ಕೆಜಿ ಉಚಿತ ಪಡಿತರ ನೀಡುತ್ತಿರುವುದು ನರೇಂದ್ರ ಮೋದಿ ಸರ್ಕಾರ. ಆದರೆ, ಅಕ್ಕಿ ಮೂಟೆ ಮೇಲೆ ಕಾಂಗ್ರೆಸ್ ತನ್ನ ಹೆಸರು ಹಾಕಿಸಿಕೊಳ್ಳುತ್ತಿದೆ. ಮೋದಿಗೆ ಸಮಾನವಾದ ನಾಯಕನಾಗಲೀ, ನಾಯಕತ್ವವಾಗಲೀ ಕಾಂಗ್ರೆಸ್ಸಿನಲ್ಲಿ ಇಲ್ಲ. ನಾವು ಧೈರ್ಯದಿಂದ ಹೇಳುತ್ತೇವೆ, ನಮ್ಮ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದೀಜಿ ಅಂತಾ. ಕಾಂಗ್ರೆಸ್ಸಿಗರಿದೆ ತಾಕತ್ತಿದ್ದರೆ ತಮ್ಮ ಅಭ್ಯರ್ಥಿ ಹೆಸರನ್ನು ಹೇಳಲಿ ನೋಡೋಣ ಎಂದು ಸವಾಲು ಹಾಕಿದರು.
ಪಕ್ಷದ ರಾಜ್ಯ ಉಪಾಧ್ಯಕ್ಷ ಮುರುಗೇಶ ನಿರಾಣಿ, ವಿಪ ಸದಸ್ಯ ರವಿಕುಮಾರ, ಮಾಜಿ ಶಾಸಕರಾದ ಮಾಡಾಳ್ ವಿರುಪಾಕ್ಷಪ್ಪ, ಎಸ್.ವಿ.ರಾಮಚಂದ್ರ, ಎಚ್.ಪಿ.ರಾಜೇಶ, ಪ್ರೊ. ಎನ್.ಲಿಂಗಣ್ಣ, ಎಂ.ಬಸವರಾಜ ನಾಯ್ಕ, ದೂಡಾ ಮಾಜಿ ಅಧ್ಯಕ್ಷ ಯಶವಂತ ರಾವ್ ಜಾಧವ್, ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಜೆಡಿಎಸ್ ಮುಖಂಡ, ಮಾಜಿ ಶಾಸಕ ಎಚ್.ಎಸ್.ಶಿವಶಂಕರ, ಜೆಡಿಯು ರಾಜ್ಯಾಧ್ಯಕ್ಷ, ಮಾಜಿ ಶಾಸಕ ಮಹಿಮಾ ಜೆ.ಪಟೇಲ್. ಮುಖಂಡರಾದ ತೇಜಸ್ವಿ ವಿ.ಪಟೇಲ್, ಹಾರಿಕಾ ಮಂಜುನಾಥ, ಬಿಜೆಪಿ ಮುಖಂಡರಾದ ಮಾಡಾಳ ಮಲ್ಲಿಕಾರ್ಜುನ, ದೇವೇಂದ್ರಪ್ಪ, ಶಿವಾನಂದಮೂರ್ತಿ, ಜಿ.ಎಸ್.ಶ್ಯಾಮ ಮಾಯಕೊಂಡ, ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಚಿದಾನಂದಪ್ಪ ಸೇರಿದಂತೆ ಅನೇಕ ಮುಖಂಡರು, ಸಾವಿರಾರು ಕಾರ್ಯಕರ್ತರು ಇದ್ದರು.
ದಾವಣಗೆರೆ ಒಂದು ಕಾಲದಲ್ಲಿ ಕರ್ನಾಟಕದ ಮ್ಯಾಂಚೆಸ್ಟರ್ ಸಿಟಿಯಾಗಿತ್ತು. ಮುಂದಿನ ದಿನಗಳಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸಾಫ್ಟ್‌ವೇರ್ ಪಾರ್ಕ್, ವಿಮಾನ ನಿಲ್ದಾಣ, ಆರೋಗ್ಯ ಸುಧಾರಣೆ, ವಿಶೇಷ ಆರ್ಥಿಕ ವಲಯ ಸ್ಥಾಪಿಸುವ ಮೂಲಕ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗುವುದು - ಬಿ.ಎಸ್.ಯಡಿಯೂರಪ್ಪ. ಮಾಜಿ ಸಿಎಂ - - - ಬಾಕ್ಸ್-1ಕಾಂಗ್ರೆಸ್ ನಾಯಕರು ಶ್ರೀರಾಮನ ವಿರೋಧಿಗಳು
ಅಂಬೇಡ್ಕರ್ ವಿರೋಧಿ: ಕಾಂಗ್ರೆಸ್ ಪಕ್ಷವು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ವಿರೋಧಿಯಾಗಿದೆ. ನಿನ್ನೆಯಷ್ಟೇ ಅಂಬೇಡ್ಕರ್ ಜಯಂತಿ ಮಾಡಿದ್ದೇನೆ. ಕಾಂಗ್ರೆಸ್ಸಿಗರು ಅಂಬೇಡ್ಕರ್‌ಗೆ ಭಾರತ ರತ್ನ ಗೌರವ ನೀಡಲಿಲ್ಲ. ಪರಿಶಿಷ್ಟ ಜಾತಿ-ಪಂಗಡಗಳ ವಿರೋಧಿ ಕಾಂಗ್ರೆಸ್ ಪಕ್ಷವಾಗಿದೆ. ಪರಿಶಿಷ್ಟರ ಅಭಿವೃದ್ಧಿಗೆ ಮೀಸಲಿಟ್ಟಿದ್ದ 11 ಸಾವಿರ ಕೋಟಿಗೂ ಅದಿಕ ಹಣವನ್ನು ಬೇರೆಯದ್ದಕ್ಕೆ ವ್ಯಯಿಸಿ, ಪರಿಶಿಷ್ಟರಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಅನ್ಯಾಯ ಮಾಡಿದೆ ಎಂದು ದೂರಿದರು.
-15ಕೆಡಿವಿಜಿ13, 14, 15, 16, 17, 18: