ಕನ್ನಡಪ್ರಭ ವಾರ್ತೆ ವಿಜಯಪುರ
ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ಕಿತ್ತೂರು ರಾಣಿ ಚೆನ್ನಮ್ಮ ಅವರು ತೋರಿದ ಧೈರ್ಯ, ಶೌರ್ಯ ಹಾಗೂ ಸಾಹಸ ನಮ್ಮೆಲ್ಲರಿಗೂ ಪ್ರೇರಣೆಯ ಜೊತೆಗೆ ಸ್ಫೂರ್ತಿದಾಯಕವಾಗಿದೆ ಎಂದು ಧಾರವಾಡದ ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಶ್ರೀ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಗುರುವಾರ ನಡೆದ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ರಾಣಿ ಚನ್ನಮ್ಮಳ ಸಾಹಸಮಯ ಯಶೋಗಾಥೆಯನ್ನು ಮುಂದಿನ ಜನಾಂಗಕ್ಕೆ ತಿಳಿಸಿಕೊಡುವ ನಿಟ್ಟಿನಲ್ಲಿ ಶಾಲಾ ಕಾಲೇಜುಗಳಲ್ಲಿ ಭಾಷಣ, ಕ್ವಿಜ್, ಪ್ರಬಂಧ ಸ್ಪರ್ಧೆ ಏರ್ಪಡಿಸಬೇಕು. ಅವರ ಆದರ್ಶಮಯ ಜೀವನ ನಮ್ಮೆಲ್ಲರಿಗೂ ದಾರಿದೀಪವಾಗಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ.ಆನಂದ.ಕೆ ಮಾತನಾಡಿ, ಬಲಿಷ್ಠ ಬ್ರಿಟಿಷ್ ಸೈನ್ಯದ ವಿರುದ್ಧ ಯುದ್ದ ಕಹಳೆ ಸಾರಿ ಜಯ ಸಾಧಿಸಿದ ಕಿತ್ತೂರು ರಾಣಿ ಚನ್ನಮ್ಮರ ಜೀವನಾದರ್ಶ ಮಹಿಳೆಯರಿಗೆ ಸ್ಫೂರ್ತಿದಾಯಕವಾಗಿದೆ. ಅವರ ಸಾಹಸಮಯ ಹೋರಾಟ ಅನೇಕ ಕಷ್ಟಗಳು ಎದುರಾದಾಗಲೂ ಕುಗ್ಗದೆ ಬ್ರಿಟಿಷರ ವಿರುದ್ಧ ಹೋರಾಡಿ ಸಾಹಸ ಮೆರೆದ ವೀರ ರಾಣಿ ಚನ್ನಮ್ಮ ಅವರ ಸಾಹಸಮಯ ಜೀವನ ಇಂದಿನ ಜನಾಂಗಕ್ಕೆ ಪ್ರೇರಣಾದಾಯಕ ವಾಗಿದೆ ಎಂದರು. ಜಿಪಂ ಸಿಇಒ ರಿಷಿ ಆನಂದ ಮಾತನಾಡಿ, ಬ್ರೀಟಿಷರ ವಿರುದ್ಧ ಧೈರ್ಯದಿಂದ ಹೋರಾಡಿದ ಚನ್ನಮ್ಮ ಬ್ರಿಟಿಷ ಸಾಮ್ರಾಜ್ಯಕ್ಕೆ ಸಿಂಹ ಸ್ವಪ್ನವಾಗಿದ್ದರು. ಚನ್ನಮ್ಮರ ಸಾಹಸ, ಜೀವನ, ಛಲ, ದೃಢ ನಿರ್ಧಾರ ಮಹಿಳೆಯರಿಗೆ ಪ್ರೇರಣೆಯಾಗಿವೆ ಎಂದು ಹೇಳಿದರು.ಪ್ರಕಾಶ ನರಗುಂದ ವಿಶೇಷ ಉಪನ್ಯಾಸ ನೀಡಿದರು. ಮುಖಂಡ ಬಿ.ಎಂ.ಪಾಟೀಲ ಮಾತನಾಡಿದರು. ಗೀತಾ ಕುಲಕರ್ಣಿ ಸುಗಮ ಸಂಗೀತ ನಡೆಸಿಕೊಟ್ಟರು.
ಈ ವೇಳೆ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮಣ್ಣ ಹಟ್ಟಿ, ಕ್ರೀಡಾಧಿಕಾರಿ ರಾಜಶೇಖರ ಧೈವಾಡಿ, ಪಾಲಿಕೆ ಆರೋಗ್ಯಾಧಿಕಾರಿ ಸಂಗಣ್ಣ ಲಕ್ಕಣ್ಣವರ, ಕಾರ್ಮಿಕ ಅಧಿಕಾರಿ ಉಮಾಶ್ರೀ ಕೋಳಿ, ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಅಶೋಕ ಘೋಣಸಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ ಸಮಾಜದ ಮುಖಂಡರಾದ ಬಿ.ಎಸ್.ಪಾಟೀಲ, ಬಿ.ಎಸ್.ಬಿರಾದಾರ, ಎನ್.ಎಮ್.ಬಿರಾದಾರ, ಗುರುಶಾಂತ ನಿಡೋಣಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.ಭಾವಚಿತ್ರದ ಮೆರವಣಿಗೆಗೆ ಚಾಲನೆ
ವಿಜಯಪುರ ನಗರದ ಶ್ರೀ ಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಅವರ ಭಾವಚಿತ್ರದ ಮೆರವಣಿಗೆಗೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಚಾಲನೆ ನೀಡಿದರು. ವಿವಿಧ ಕಲಾ ತಂಡಗಳಿಂದ ಸಾಗಿದ ಮೆರವಣಿಗೆಯು ಗಾಂಧಿ ವೃತ್ತದಿಂದ ಸಾಗಿ, ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗ ಮಂದಿರದಲ್ಲಿ ಸಮಾವೇಶಗೊಂಡಿತು. ಮನಗೂಳಿಯ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ, ಹೆಚ್ಚುವರಿ ಎಸ್‌ಪಿ ರಾಮನಗೌಡ ಹಟ್ಟಿ, ಜಿಲ್ಲಾ ಪಂಚಾಯತಿಯ ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಪುಂಡಲಿಕ ಮಾನವರ, ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿಗಳಾದ ಜಿ.ಎಸ್.ಕಾಂಬ್ಳೆ ಬಿ.ಎಂ.ಪಾಟೀಲ ಸೇರಿದಂತೆ ವಿವಿಧ ಸಮಾಜದ ಮುಖಂಡರು, ಸಾರ್ವಜನಿಕರು ಇದ್ದರು.