ದೇಗುಲಗಳ ಹಣ ದೇಗುಲಗಳ ಅಭಿವೃದ್ಧಿಗೇ ಬಳಕೆ: ಸಿದ್ದು ಸ್ಪಷ್ಟನೆ

KannadaprabhaNewsNetwork | Updated : Feb 25 2024, 11:56 AM IST

ಸಾರಾಂಶ

ಹಿಂದೂ ದೇವಾಲಯಗಳ ಹುಂಡಿಗಳಲ್ಲಿ ಸಂಗ್ರಹವಾಗುವ ಹಣವನ್ನು ಹಿಂದೂ ದೇವಾಲಯಗಳ ಅಭಿವೃದ್ಧಿಗೇ ಬಳಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಹಿಂದೂ ದೇವಾಲಯಗಳ ಹುಂಡಿಗಳಲ್ಲಿ ಸಂಗ್ರಹವಾಗುವ ಹಣವನ್ನು ಹಿಂದೂ ದೇವಾಲಯಗಳ ಅಭಿವೃದ್ಧಿಗೇ ಬಳಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಬಾಣಾವರದಲ್ಲಿ ಶನಿವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಹಿಂದೂ ದೇವಾಲಯಗಳ ಹುಂಡಿಯ ಹಣವನ್ನು ಸರ್ಕಾರ ಲೂಟಿ ಹೊಡೆಯುತ್ತಿದೆ ಎಂದು ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ. 

ವ್ಯವಸ್ಥಿತವಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ಬಿಜೆಪಿ ಆರೋಪ ಸುಳ್ಳು. ನಮ್ಮ ಸರ್ಕಾರ ಹಿಂದೂ ದೇವಾಲಯಗಳ ಹಣವನ್ನು ಹಿಂದೂ ದೇವಾಲಯಗಳ ಅಭಿವೃದ್ಧಿಗೇ ಬಳಸುತ್ತಿದೆ. ಬೇರೆ ಯಾವುದೇ ಧರ್ಮದ ದೇವಾಲಯಗಳಿಗೆ ಬಳಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸಿದ್ದು ಸರ್ಕಾರ ಹಿಂದೂ ದೇವಾಲಯಗಳ ಹಣ ಲೂಟಿ ಹೊಡೆಯಲು ಮುಂದಾಗಿದೆ ಎಂಬ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹೇಳಿಕೆಗೆ ತಿರುಗೇಟು ನೀಡಿ, ಬಿಜೆಪಿ ಅಧಿಕಾರದಲ್ಲಿದ್ದಾಗ ಬಿ.ಎಸ್. ಯಡಿಯೂರಪ್ಪ ಅವರು ಧಾರ್ಮಿಕ ದತ್ತಿ ಕಾಯ್ದೆಯನ್ನು ಜಾರಿಗೆ ತಂದರು. 

ಒಂದು ಕೋಟಿ ರು.ಗೂ ಹೆಚ್ಚು ಗಳಿಕೆ ಆಗುವ ದೇವಾಲಯದಿಂದ ತೆಗೆದುಕೊಂಡ ಹಣವನ್ನು ಆದಾಯವೇ ಇಲ್ಲದ ದೇವಾಲಯಗಳಿಗೆ ಹಾಗೂ ಸಿಬ್ಬಂದಿಗೆ ಸಂಬಳ ಕೊಡಲು ಉಪಯೋಗಿಸಲಾಗುತ್ತದೆ ಎಂದು ತಿಳಿಸಿದ್ದರು. 

ಆದರೆ, ನಮ್ಮ ಸರ್ಕಾರ ತಂದ ಅದೇ ಧಾರ್ಮಿಕ ದತ್ತಿ ವಿಧೇಯಕಕ್ಕೆ ವಿಧಾನಪರಿಷತ್‌ನಲ್ಲಿ ಸೋಲಾಗಿದೆ. ಬಿಜೆಪಿಯವರಿಗೆ ಪರಿಷತ್‌ನಲ್ಲಿ ಬಹುಮತವಿದ್ದು, ವಿಧೇಯಕ ಸೋಲಿಸಿದರು ಎಂದು ಆರೋಪಿಸಿದರು.

ಬಿಎಸ್‌ವೈ ತಂದ ಕಾಯ್ದೆ: ಯಡಿಯೂರಪ್ಪ ಅವರು ಧಾರ್ಮಿಕ ದತ್ತಿ ಕಾಯ್ದೆಯನ್ನು ಜಾರಿಗೆ ತಂದರು. ಒಂದು ಕೋಟಿ ರು.ಗೂ ಹೆಚ್ಚು ಗಳಿಕೆ ಆಗುವ ದೇವಾಲಯದಿಂದ ತೆಗೆದುಕೊಂಡ ಹಣವನ್ನು ಆದಾಯವೇ ಇಲ್ಲದ ದೇವಾಲಯಗಳಿಗೆ ಬಳಸಲು ನಿರ್ಧರಿಸಿದ್ದರು. ನಮ್ಮ ಸರ್ಕಾರ ತಂದ ಅದೇ ವಿಧೇಯಕಕ್ಕೆ ಈಗ ಮೇಲ್ಮನೆಯಲ್ಲಿ ಸೋಲಾಗಿದೆ.- ಸಿದ್ದರಾಮಯ್ಯ ಮುಖ್ಯಮಂತ್ರಿ

Share this article