ಪವಿತ್ರ ಕುಟುಂಬದ ದೇವಾಲಯ: ಪ್ರಥಮ ಬಲಿಪೂಜೆ

KannadaprabhaNewsNetwork |  
Published : May 29, 2024, 12:50 AM IST
ಪ್ರಥಮ ಬಲಿಪೂಜೆ  | Kannada Prabha

ಸಾರಾಂಶ

ಭಾನುವಾರ ಬೆಳಗ್ಗೆ 10.30ಕ್ಕೆ ಮಾದಾಪುರ ಸಮೀಪದ ಕುಂಬೂರಿನಲ್ಲಿ ನೂತನವಾಗಿ ಲೋಕಾರ್ಪಣೆಗೊಂಡ ಪವಿತ್ರ ಕುಟುಂಬದ ದೇವಾಲಯದಲ್ಲಿ ಭಾನುವಾರದ ಪ್ರಥಮ ಬಲಿಪೂಜೆ ನಡೆದು, ಮಕ್ಕಳಿಗೆ ನೂತನ ಪರಮಪ್ರಸಾದ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಮಾದಾಪುರ ಸಮೀಪದ ಕುಂಬೂರಿನಲ್ಲಿ ನೂತನವಾಗಿ ಲೋಕಾರ್ಪಣೆಗೊಂಡ ಪವಿತ್ರ ಕುಟುಂಬದ ದೇವಾಲಯದಲ್ಲಿ ಭಾನುವಾರದ ಪ್ರಥಮ ಬಲಿಪೂಜೆ ನಡೆದು, ಮಕ್ಕಳಿಗೆ ನೂತನ ಪರಮಪ್ರಸಾದ ನೀಡಲಾಯಿತು.

ಭಾನುವಾರ ಬೆಳಗ್ಗೆ 10.30ಕ್ಕೆ ಕುಂಬೂರು ಪವಿತ್ರ ಕುಟುಂಬದ ದೇವಾಲಯದಲ್ಲಿ ಹಟ್ಟಿಹೊಳೆ ಜಪಸರಮಾತೆ ದೇವಾಲಯದ ಧರ್ಮಗುರು ರೆ.ಫಾ. ಗಿಲ್ಬರ್ಟ್ ಡಿಸಿಲ್ವ, ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದ ಸಹಾಯಕ ಧರ್ಮಗುರು ರೆ.ಫಾ.ನವೀನ್ ಕುಮಾರ್ ಹಾಗೂ ಪವಿತ್ರ ಕುಟುಂಬ ದೇವಾಲಯದ ಧರ್ಮಗುರು ರಾಜೇಶ್ ಅವರು ಅಡಂಬರ ಬಲಿಪೂಜೆ ನಡೆಸಿ ಮಕ್ಕಳಿಗೆ ನೂತನ ಪರಮ ಪ್ರಸಾದ ನೀಡಿದರು. ಮಾದಾಪುರ, ಸುಂಟಿಕೊಪ್ಪ, ಹಟ್ಟಿಹೊಳೆ ಮಡಿಕೇರಿ, ಸೋಮವಾರಪೇಟೆ ಸೇರಿದಂತೆ ವಿವಿಧೆಡೆಗಳಿಂದ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಈ ಬಲಿಪೂಜೆಯಲ್ಲಿ ಪಾಲ್ಗೊಂಡಿದ್ದರು.

.................

ಕೂಡಿಗೆ ಗ್ರಾಮ ದೇವತೆಯ ಹಬ್ಬ

ಕುಶಾಲನಗರ ತಾಲೂಕಿನ ಕೂಡಿಗೆ ಗ್ರಾಮದ ಶ್ರೀ ದಂಡಿನಮ್ಮ, ಬಸವೇಶ್ವರ, ಶ್ರೀ ಮುತ್ತತ್ ರಾಯ ದೇವಸ್ಥಾನ, ಹಾಗೂ ಗ್ರಾಮ ಸೇವಾ ಸಮಿತಿ ವತಿಯಿಂದ ನಡೆದ ಗ್ರಾಮ ದೇವತೆಯ ಹಬ್ಬ ಮತ್ತು ಜಾತ್ರೋತ್ಸವ ನಡೆಯಿತು

ಹಬ್ಬದ ಅಂಗವಾಗಿ ಶ್ರೀ ದಂಡಿನಮ್ಮ ದೇವಿಯ ವಾರ್ಷಿಕ ಪೂಜೆಯು ದೇವಾಲಯ ಆವರಣದಲ್ಲಿ ಆರಂಭಗೊಂಡು ಬೆಳಿಗ್ಗೆ ಹೋಮ ಹವನಗಳು ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆದು ನಂತರ ಮಧ್ಯಾಹ್ನ ಮಹಾಮಂಗಳಾತಿ ಪ್ರಸಾದ ವಿನಿಯೋಗ ನಡೆಯಿತು.ಅಗ್ನಿ ಸ್ಧಾಪನೆಯ ನಂತರ ಶ್ರೀ ಬಸವೇಶ್ವರ ದೇವಾಲಯದಿಂದ ಗ್ರಾಮಸ್ಥರು, ಮತ್ತು ಭಕ್ತಾದಿಗಳು ಕಾವೇರಿ ನದಿಗೆ ತೆರಳಿ ನದಿಯಲ್ಲಿ ಕಳಸ ಪೂಜೆ, ಕಾವೇರಿ ನದಿಯಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಂಗಳ ವಾದ್ಯ, ನಾಡ ವಾದ್ಯ, ಸೇರಿದಂತೆ ಮದ್ದುಗುಂಡುಗಳ ಸಿಡಿಸುವಿಕೆ ಮೂಲಕ ಸಾಗಿ ದಂಡಿನಮ್ಮ ದೇವಿಯ ದೇವಾಲಯವನ್ನು ತಲುಪಿ ನಂತರ ದೇವಾಲಯದ ಮುಂಭಾಗದಲ್ಲಿ ಹಾಕಲಾಗಿದ್ದ ಅಗ್ನಿ ಕೊಂಡೋತ್ಸವದಲ್ಲಿ ಪಾಲ್ಗೊಂಡರು.

ಮುಂಜಾನೆ ಉಯ್ಯಾಲೆ ಮಹೋತ್ಸವವು ನೆರವೇರಿತು.ಹಬ್ಬದ ಅಂಗವಾಗಿ ಕಾವೇರಿ ನದಿಯ ದಂಡೆಯಿಂದ ದೇವಾಲಯದವರೆಗೆ, ಹಾಗೂ ಗ್ರಾಮದ ಪ್ರಮುಖ ಬೀದಿಗಳು ವಿದ್ಯುತ್ ದೀಪಗಳಿಂದ ಅಲಂಕಾರ ಗೊಂಡಿದ್ದು. ಗ್ರಾಮದ ಮಹಿಳೆಯರು ಮನೆಯ ಮುಂದೆ ವಿವಿಧ ಬಣ್ಣದ ರಂಗೋಲಿ ಬಿಡಿಸಲಾಗಿತ್ತು.

ದೇವಾಲಯ ಆವರಣದಲ್ಲಿ ಜಾತ್ರೋತ್ಸವವು ನಡೆದು, ದಂಡಿನಮ್ಮ ದೇವಿಗೆ ಪೂಜೆ, ಮಹಾಮಂಗಳಾತಿ ಪ್ರಸಾದ ವಿನಿಯೋಗ, ಅಗಮಿಸಿದ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ಕಾರ್ಯಕ್ರಮವು ನಡೆದವು.ಕೂಡಿಗೆ, ಮದಲಾಪುರ ಕಣಿವೆ, ಸೀಗೆಹೊಸೂರು ಕೂಡುಮಂಗಳೂರು ಹುದುಗೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ಭಕ್ತರು ಪಾಲ್ಗೊಂಡಿದ್ದರು.

ದೇವಾಲಯ ಸಮಿತಿ ಅಧ್ಯಕ್ಷ ಕೆ.ಕೆ . ಸೋಮಶೇಖರ್, ಉಪಾಧ್ಯಕ್ಷ ಕೆ.ಎನ್. ಮಂಜುನಾಥ, ಕಾರ್ಯದರ್ಶಿ ಕೆ.ಎಸ್. ಚಂದ್ರಶೇಖರ್ , ಸಹ ಕಾರ್ಯದರ್ಶಿ ಕೆ.ಎಸ್‌. ಶೇಖರ್ ಶೆಟ್ಟಿ, ಗೌರವ ಅಧ್ಯಕ್ಷ ಕೆ.ಟಿ ಗಿರೀಶ್, ದೇವಾಲಯ ಸಮಿತಿಯ ಮಾಜಿ ಅಧ್ಯಕ್ಷ ಕೆ.ಕೆ. ಭೀಮಣ್ಣ, ಕೆ.ಪಿ. ಸೋಮಣ್ಣ, ಕೆ.ಟಿ. ಶ್ರೀನಿವಾಸ ಮತ್ತಿತರರು ಇದ್ದರು.

PREV

Recommended Stories

ಸರ್ಕಾರಿ ಸಭೆಗಳಲ್ಲಿ ಪ್ಲಾಸ್ಟಿಕ್‌ ನೀರಿನ ಬಾಟಲಿಗೆ ನಿಷೇಧ
ಪ್ರತಿಕ್ಷಣವು ಕನ್ನಡ ನಾಡು-ನುಡಿ ಅಭಿಮಾನವಿರಲಿ