ಟಿಕೆಟ್ ಸಿಗುವ ವಿಶ್ವಾಸದಲ್ಲಿರುವ ಕಾಂಗ್ರೆಸ್ ಮುಖಂಡ । ಕಾರ್ಯಕರ್ತರ ಸಭೆ । ಸುವರ್ಣಗಿರಿ ಸಂಸ್ಥಾನ ಮಠಕ್ಕೆ ಭೇಟಿ,
ಕನ್ನಡಪ್ರಭ ವಾರ್ತೆ ಕನಕಗಿರಿ
ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ರಾಜಶೇಖರ ಹಿಟ್ನಾಳ್ ಟಿಕೆಟ್ ಘೋಷಣೆ ಮುನ್ನವೇ ಟೆಂಪಲ್ ರನ್ ಮುಂದುವರಿಸಿದ್ದು, ಬುಧವಾರ ಕನಕಗಿರಿ ನರಸಿಂಹಸ್ವಾಮಿಯ (ಕನಕಾಚಲ) ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು.ಟಿಕೆಟ್ ಸಿಗುವ ವಿಶ್ವಾಸದಲ್ಲಿರುವ ಕಾಂಗ್ರೆಸ್‌ನ ರಾಜಶೇಖರ ಹಿಟ್ನಾಳ್ ಕಳೆದೆರಡು ದಿನಗಳಿಂದ ಜರ‍್ಹಾಳ ಗ್ರಾಮದಲ್ಲಿ ನಡೆದ ಬೀರಲಿಂಗೇಶ್ವರ ಜಾತ್ರೆ, ಕಾರ್ಯಕರ್ತರ ನಿವಾಸದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳುತ್ತಿದ್ದಾರೆ. ಇನ್ನು ಬುಧವಾರ ಮುಖಂಡರೊಬ್ಬರ ತೋಟದಲ್ಲಿ ಪಕ್ಷದ ಕಾರ್ಯಕರ್ತರ ಸಭೆ ನಡೆಸಿದ್ದಾರೆ.
ಸಭೆಯಲ್ಲಿ ಮಾತನಾಡಿದ ರಾಜಶೇಖರ ಹಿಟ್ನಾಳ್, ವಿಧಾನಸಭೆ ಚುನಾವಣೆ ಮಾದರಿಯಲ್ಲಿ ಲೋಕಸಭೆ ಚುನಾವಣೆ ಎದುರಿಸಲು ಸಿದ್ಧರಾಗಬೇಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮನೆ-ಮನೆಗೆ ತಲುಪಿಸುವ ಕಾರ್ಯಕ್ಕೆ ಅಣಿಯಾಗಬೇಕಿದೆ. ರಾಜ್ಯದಲ್ಲಿ ೨೦ಕ್ಕೂ ಹೆಚ್ಚು ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲಲಿದ್ದು, ಅದರಲ್ಲಿ ಕೊಪ್ಪಳ ಒಂದಾಗಿದೆ. ಯುವಕರಿಗೆ ಯುವನಿಧಿ, ಮಹಿಳೆಯರಿಗೆ ಗೃಹಲಕ್ಷ್ಮೀ, ಶಕ್ತಿ ಯೋಜನೆಗಳು ಭಾರಿ ಪ್ರಮಾಣದಲ್ಲಿ ಅನುಕೂಲವಾಗಿದೆ. ನಮ್ಮ ಸರ್ಕಾರ ಜನಪರ ಕೆಲಸ ಮಾಡುತ್ತಿದ್ದು, ವಿಧಾನಸಭೆ ರೀತಿ ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಹಸ್ತದ ಗುರುತಿಗೆ ಮತ ನೀಡಿ ಗೆಲ್ಲಿಸುವಂತೆ ಮನವಿ ಮಾಡಿದರು.ಸುವರ್ಣಗಿರಿ ಸಂಸ್ಥಾನ ಮಠಕ್ಕೆ (ಕಲ್ಮಠ) ಭೇಟಿ ನೀಡಿ ಡಾ. ಚನ್ನಮಲ್ಲಶ್ರೀಗಳ ಆಶಿರ್ವಾದ ಪಡೆದರು. ಪ್ರಮುಖರಾದ ವಿರೇಶ ಸಮಗಂಡಿ, ಗಂಗಾಧರಸ್ವಾಮಿ, ರಮೇಶ ನಾಯಕ, ಶರಣಬಸಪ್ಪ ಭತ್ತದ, ಅನಿಲ ಬಿಜ್ಜಳ, ರವಿ ಪಾಟೀಲ್, ಪ್ರಶಾಂತ ತೆಗ್ಗಿನಮನಿ, ಹನುಮೇಶ ಹಡಪದ, ಶಾಂತಪ್ಪ ಬಸರಿಗಿಡದ ಸೇರಿದಂತೆ ಇತರರಿದ್ದರು.