ಕನ್ನಡಪ್ರಭ ವಾರ್ತೆ ಬೆಂಗಳೂರು
ದೇವಾಲಯಗಳಲ್ಲಿ ನಸುಕಿನಿಂದ ದಿನವಿಡೀ ವಿಶೇಷ ಪೂಜೆ, ನಿರಂತರ ಅಭಿಷೇಕ ನಡೆಯಲಿವೆ. ಶಿವಲಿಂಗಕ್ಕೆ ಜಲಾಭಿಷೇಕ, ರುದ್ರಾಭಿಷೇಕ, ಬಿಲ್ವಪತ್ರೆ ಅರ್ಪಣೆ, ಮಹಾಮಂಗಳಾರತಿ ಸೇರಿ ವಿವಿಧ ಧಾರ್ಮಿಕ ಕಾರ್ಯಗಳು ಜರುಗಲಿವೆ. ಗಣಹೋಮ, ರುದ್ರಹೋಮ, ನವಗ್ರಹ ಹೋಮ, ಶಾಂತಿ ಹೋಮ ಹಾಗೂ ಪಂಚಾಮೃತ ಅಭಿಷೇಕ ನಡೆಯಲಿವೆ.
ನಗರದ ಗವಿಪುರದ ಶ್ರೀ ಗವಿಗಂಗಾಧರೇಶ್ವರ ಸ್ವಾಮಿ ದೇವಾಲಯ, ಮಲ್ಲೇಶ್ವರದ ಕಾಡುಮಲ್ಲಿಕಾರ್ಜುನ ದೇವಸ್ಥಾನ, ಬಳೇಪೇಟೆಯ ಶ್ರೀ ಕಾಶಿವಿಶ್ವನಾಥ ದೇವಾಲಯ, ಹಲಸೂರು ಸೋಮೇಶ್ವರ ದೇವಾಲಯ, ಕೋಟೆ ಶ್ರೀ ಜಲಕಂಠೇಶ್ವರ ದೇವಸ್ಥಾನ, ಬೆಂಗಳೂರು ವಿವಿ ಆವರಣದ ಮುನೇಶ್ವರಸ್ವಾಮಿ ದೇವಾಲಯ, ಹಳೆ ವಿಮಾನ ನಿಲ್ದಾಣ ರಸ್ತೆಯ ಶಿವೋಹಂ ಶಿವ ದೇಗುಲ, ಜೆ.ಪಿ.ನಗರದ ಶ್ರೀ ಶಿವಲಿಂಗೇಶ್ವರ ಸ್ವಾಮಿ ದೇವಾಲಯ ಸೇರಿದಂತೆ ಶಿವನ ದೇವಾಲಯಗಳಲ್ಲಿ ವಿಶೇಷ ಸಿದ್ಧತೆಯಾಗಿದೆ.ಜೆ.ಪಿ.ಪಾರ್ಕ್‌ನಲ್ಲಿ ಅದ್ಧೂರಿ ಶಿವರಾತ್ರಿ ಆಯೋಜನೆ ಆಗಿದ್ದು, ಅಯೋಧ್ಯೆಯ ಶ್ರೀ ರಾಮಲಲ್ಲಾ ಮೂರ್ತಿ ಮಾದರಿ ಪ್ರತಿಷ್ಠಾಪಿಸಲಾಗುತ್ತಿದೆ. ಭಕ್ತರ ಆಗಮನ ಹಿನ್ನೆಲೆಯಲ್ಲಿ ಸರತಿ ಸಾಲಿಗೆ ವ್ಯವಸ್ಥೆ ಮಾಡಿಕೊಳ್ಳುತ್ತಿವೆ. ಬಿರು ಬಿಸಿಲಿನ ಕಾರಣಕ್ಕೆ ಪೆಂಡಾಲ್, ಕುಡಿಯುವ ನೀರು ಸೇರಿ ಇತರೆ ಸೌಲಭ್ಯ ಕಲ್ಪಿಸಲಾಗಿದೆ.
ಗಂಗಾಜಲ ವಿತರಣೆ
ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಶಿವ ದೇವಾಲಯಗಳಲ್ಲಿ ಭಕ್ತರಿಗೆ ಗಂಗಾಜಲ ವಿತರಣೆ ಆಗುತ್ತಿದೆ. ಹರಿದ್ವಾರದಿಂದ 40 ಸಾವಿರ ಲೀಟರ್ ಪವಿತ್ರ ಗಂಗಾ ಜಲ ತರಿಸಲಾಗಿದ್ದು, ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ನೇತೃತ್ವದಲ್ಲಿ ರಾಜ್ಯದ 3,700 ಪುರಾತನ ಶಿವನ ದೇವಾಲಯಗಳಿಗೆ ಪವಿತ್ರ ಗಂಗಾ ಜಲ ವಿತರಣೆ ಮಾಡುವ ಕಾರ್ಯಕ್ಕೆ ಚಿಕ್ಕಪೇಟೆಯ ಶ್ರೀ ಕಾಶಿ ವಿಶ್ವೇಶ್ವರ ಸ್ವಾಮಿ ದೇವಾಲಯದಲ್ಲಿ ಚಾಲನೆ ದೊರೆತಿದೆ.ವಿಶೇಷ ಪೂಜೆ ಅಲಂಕಾರಬಸವನಗುಡಿಯ ಗವಿಗಂಗಾಧರೇಶ್ವರ ದೇಗುಲದಲ್ಲಿ ಶುಕ್ರವಾರ ಬೆಳಗ್ಗೆ 6ರಿಂದ ಮರುದಿನ ಮುಂಜಾನೆಯವರೆಗೆ ಶಿವಲಿಂಗಕ್ಕೆ ಅಭಿಷೇಕ, ವಿಶೇಷ ಅಲಂಕಾರ ನಡೆಯಲಿದೆ. ಸಹಸ್ರಾರು ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ಕೋಟೆ ಶ್ರೀ ಜಲಕಂಠೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆ 6.30ರಿಂದ 11.30ರವರೆಗೆ ಸ್ವಾಮಿಗೆ ಸುಪ್ರಭಾತ ಸೇವೆ, ಪ್ರಾತಃಕಾಲ ಪೂಜೆ, ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಪುಷ್ಪಾಲಂಕಾರ, ಮಹಾಮಂಗಳಾರತಿ ನಡೆಯಲಿದೆ.ಸಂಜೆ 4ಕ್ಕೆ ನಂದೀಶ್ವರ ಸ್ವಾಮಿಗೆ ಅಭಿಷೇಕ, ಆರಂಭಗೊಳ್ಳುತ್ತದೆ. ನಾಲ್ಕು ಜಾವಗಳಲ್ಲಿ ಪೂಜೆ ನಡೆಯಲಿದೆ. ಶನಿವಾರ ಬೆಳಗ್ಗೆ ಪುಷ್ಪಾಲಂಕಾರದ ಜೊತೆಗೆ ಸ್ವಾಮಿಯ ಬಂಡಿ ಉತ್ಸವ ಜರುಗಲಿದೆ.ಸೃಷ್ಟಿಕೇಂದ್ರ-ರೋಟರಿಯಿಂದ ಇಂದು ಶಿವರಾತ್ರಿ ಜಾಗರಣೆ
ಕನ್ನಡಪ್ರಭ ವಾರ್ತೆ ಬೆಂಗಳೂರುಸೃಷ್ಟಿ ಕೇಂದ್ರ ಮತ್ತು ರೋಟರಿ-3191 ಸಂಸ್ಥೆಯಿಂದ ಶಂಕರಪುರದಲ್ಲಿರುವ ಶಂಕರಮಠದಲ್ಲಿ ಮಾ.8ರಂದು ಸಂಜೆ 6ರಿಂದ ಮಾ.9ರ ಮುಂಜಾನೆ 6ವರೆಗೆ ‘ಅಹೋರಾತ್ರಿ ಶಿವರಾತ್ರಿ ಉತ್ಸವ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಸಂಗಮ’ ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ಶಾಸ್ತ್ರೀಯ ಸಂಗೀತ, ಭರತನಾಟ್ಯ, ಕಥಕ್, ಕೂಚುಪುಡಿ, ಯಕ್ಷಗಾನ, ನೃತ್ಯ ನಾಟಕ ಪ್ರದರ್ಶನವಿರಲಿದೆ. ಸೃಷ್ಟಿ ಕೇಂದ್ರ ಕಲಾವಿದರಿಂದ ಜಗದ್ಗುರು ಶಂಕರಾಚಾರ್ಯ ವಿರಚಿತ ‘ಭಜ ಗೋವಿಂದಂ’ ನೃತ್ಯ ರೂಪಕ, ಪ್ರಸಿದ್ಧ ಸಂಗೀತ ವಿದ್ವಾಂಸ ಆರ್.ಕೆ.ಪದ್ಮನಾಭ ಅವರಿಂದ ಕರ್ನಾಟಕ್ ಶಾಸ್ತ್ರೀಯ ಸಂಗೀತ ಹಾಡುಗಾರಿಕೆ, ಡಾ। ಸುಮಾ ಸುಧೀಂದ್ರ ಅವರಿಂದ ವೀಣಾ ವಾದನ, ಶಿವಪ್ರಿಯ ನೃತ್ಯ ಸಂಸ್ಥೆ ಸಂಜಯ ಶಾಂತಾರಾಮ್ ಅವರಿಂದ ಭರತನಾಟ್ಯ, ಅನಂತಪುರದ ಆಧ್ಯ ಅವರಿಂದ ಕೂಚುಪುಡಿ, ಕೋಲ್ಕತ್ತಾದ ದಾರ್ಶನಿ ಚಟರ್ಜೀ ಮತ್ತು ಹೈದರಾಬಾದ್ ಲಕ್ಷ್ಮಿ ವಿಶ್ವನಾಥ್ ಅವರಿಂದ ಕಥಕ್ ನೃತ್ಯ ಪ್ರದರ್ಶನ ನಡೆಯಲಿದೆ. ಒಟ್ಟಾರೆ 27 ತಂಡ, 100ಕ್ಕೂ ಹೆಚ್ಚಿನ ಕಲಾವಿದರು ಪ್ರದರ್ಶನ ನೀಡಲಿದ್ದಾರೆ.ಗುರು ರಾಧಾ ಶ್ರೀಧರ್ ಉದ್ಘಾಟಿಸಲಿದ್ದು, ಅತಿಥಿಗಳಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ। ಮಹೇಶ್ ಜೋಶಿ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯ ಕುಲಪತಿ ಡಾ। ಅಹಲ್ಯಾ ಸೇರಿ ಇತರರು ಆಗಮಿಸುವರು ಎಂದು ಪ್ರಕಟಣೆ ತಿಳಿಸಿದೆ.
ಇಂದು ಹರಿಹರಪುರ ಮಠದಲ್ಲಿಮೃತ್ತಿಕಾ ಶಿವಲಿಂಗ ದರ್ಶನಬೆಂಗಳೂರು: ಮಲ್ಲೇಶ್ವರ ನಂಜನಗೂಡು ಶ್ರೀಕಂಠೇಶ್ವರ ಸೇವಾ ಸಂಘದಿಂದ ಮಾ.8ರ ಶುಕ್ರವಾರ ಮಹಾಶಿವರಾತ್ರಿ ಅಂಗವಾಗಿ ಹರಿಹರಪುರ ಮಠದ ಶ್ರೀಗಳು ಅನುಗ್ರಹಿಸಿದ ‘ಮೃತ್ತಿಕಾ ಶಿವಲಿಂಗ’ವನ್ನು ಬೆಳಗ್ಗೆ 9 ರಿಂದ ರಾತ್ರಿ 10ರ ವರೆಗೆ ಮಲ್ಲೇಶ್ವರ 5ನೇ ಅಡ್ಡ ರಸ್ತೆಯ ಶ್ರೀಕಂಠ ಭವನದಲ್ಲಿ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯ ವರೆಗೆ ವಿವಿಧ ಭಜನಾ ಮಂಡಳಿಯಿಂದ ವೇದ ಪಠಣ ಮತ್ತು ಭಜನಾ ಕಾರ್ಯಕ್ರಮ ನಡೆಯಲಿದೆ. ಸಂಜೆ 6 ಗಂಟೆಗೆ ರುದ್ರಾಭಿಷೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸೇವಾ ಸಂಘದ ಅಧ್ಯಕ್ಷ ಎನ್.ಎ.ಚಿದಂಬರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.